ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕುಮನಹಳ್ಳಿಯ ವಸತಿ ಶಾಲೆ: ತರಗತಿ, ವಸತಿಗೆ ಒಂದೇ ಕೊಠಡಿ -ವಿದ್ಯಾರ್ಥಿಗಳ ಪರದಾಟ

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಧಾರವಾಡ: ನಗರದ ಲಕುಮನಹಳ್ಳಿಯ (ಕೆಎಂಎಫ್‌ ಹಿಂಭಾಗ) ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ‘ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ’ ಸೌಕರ್ಯಗಳ ಕೊರತೆಯಿಂದ ನಲುಗಿದೆ. ವಿದ್ಯಾರ್ಥಿಗಳಿಗೆ ತರಗತಿ ಮತ್ತು ವಸತಿ ಎರಡಕ್ಕೂ ಒಂದೇ ಕೊಠಡಿ ಬಳಕೆಯಾಗುತ್ತಿದೆ.

2017–18ನೇ ಸಾಲಿನಲ್ಲಿ ಆರಂಭಿಸಿರುವ ಜಿಲ್ಲೆಯ ಏಕೈಕ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಇದು. ಆರಂಭದಲ್ಲಿ ಹೆಬ್ಬಳ್ಳಿಯ ವಿದ್ಯಾಲಯವೊಂದರಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ನಂತರ, ಲಕುಮನಹಳ್ಳಿಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ಈ ಶಾಲೆಯಲ್ಲಿ ಹಾವೇರಿ, ಬಾಗಲಕೋಟೆ ಸಹಿತ ವಿವಿಧ ಜಿಲ್ಲೆಗಳ ಒಟ್ಟು 430 ವಿದ್ಯಾರ್ಥಿಗಳಿದ್ದಾರೆ. ಕಟ್ಟಡದ ಮಹಡಿಯ ಸಭಾಂಗಣದಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕೊಠಡಿಯಲ್ಲಿ ತಲಾ 20 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿದೆ.

ಇಲ್ಲಿ ನೆಲಹಾಸಿನಲ್ಲಿ ಚಾಪೆ ಮೇಲೆ ಕುಳಿತು ಪಾಠ ಕೇಳಬೇಕು. ಹಲವು ಕೊಠಡಿಗಳಲ್ಲಿ ಕಿಟಕಿಗಳು ಇಲ್ಲ. ಶೌಚಾಲಯ ಮತ್ತು ಸ್ನಾನಗೃಹದ ಪಕ್ಕದಲ್ಲೇ ತರಗತಿ, ವಸತಿ ಕೋಣೆಗಳಿವೆ. ಶೌಚಾಲಯ, ಸ್ನಾನಗೃಹಗಳಲ್ಲಿ ಕಿಟಕಿಗಳಿಗೆ ಬಾಗಿಲುಗಳನ್ನೇ ಅಳವಡಿಸಿಲ್ಲ. ವಿದ್ಯಾರ್ಥಿಗಳು ಕೊಠಡಿಗಳಲ್ಲಿ ಹಗ್ಗ ಕಟ್ಟಿ ಬಟ್ಟೆಗಳನ್ನು (ಟವೆಲ್‌, ಸಮವಸ್ತ್ರ) ಒಣಹಾಕಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಶಾಲಾ ಕಟ್ಟಡ ನಿರ್ಮಾಣಕ್ಕೆ ತೇಗೂರು ಬಳಿ ಸ್ಥಳ ಗುರುತಿಸಲಾಗಿದೆ. ಶಾಲೆಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಶಾಲೆಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಜಾಗವೇ ಮೈದಾನ: ಬಾಡಿಗೆ ಕಟ್ಟಡದ ಮುಂದೆ ಇರುವ ಖಾಸಗಿ ಜಾಗವೇ ವಿದ್ಯಾರ್ಥಿಗಳ ಕ್ರೀಡಾಚಟುವಟಿಕೆಗಳ ತಾಣವಾಗಿದೆ. ಖಾಲಿ ಜಾಗದಲ್ಲೇ ವಿದ್ಯಾರ್ಥಿಗಳು ಕ್ರೀಡಾಭ್ಯಾಸ ಮಾಡುತ್ತಾರೆ. ಮೈದಾನದ ಅಂಚಿನಲ್ಲಿ ಕಸ, ತ್ಯಾಜ್ಯ ಬಿದ್ದಿವೆ.

‘ಪ್ರತಿದಿನ ಬೆಳಗಿನ ಸಮಯದಲ್ಲಿ ಸ್ನಾನ ಮತ್ತು ಶೌಚಕ್ಕೆ ಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿ ಇದೆ. ಕೆಲವೊಮ್ಮೆ ನೀರಿನ ಸಮಸ್ಯೆಯಾಗುತ್ತದೆ. ಶಾಲೆಗೆ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟವರು ಗಮನಹರಿಸಬೇಕು’ ಎಂದು ವಿದ್ಯಾರ್ಥಿನಿಯೊಬ್ಬರು ಕೋರಿದರು.

‘ಶಾಲೆ ಸ್ಥಳಾಂತರಕ್ಕೆ ಸಿದ್ಧತೆ’

‘ಅಟಲ್‌ ಬಿಹಾರ ವಸತಿ ಶಾಲೆ ಈಗಿರುವ ಕಟ್ಟಡದಲ್ಲಿ ಕೆಲ ಸೌಕರ್ಯಗಳ ಕೊರತೆ ಇದೆ. ರಾಯಾಪುರದಲ್ಲಿರುವ ದೂರ ಸಂಪರ್ಕ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ’ ಎಂದು ಸಮಾಜಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಂ.ಎಸ್‌.ಅಲ್ಲಾ ಭಕ್ಷ್‌ ತಿಳಿಸಿದರು. ‘ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ ಮೂರು ವರ್ಷಗಳ ಹಿಂದೆ ನಿವೇಶನ ಗುರುತಿಸಲಾಗಿದೆ. ಕರ್ನಾಟಕ ವಸತಿಶಾಲೆಗಳ ಸಂಘಕ್ಕೆ (ಕ್ರೈಸ್‌) ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ವಸತಿ ಶಾಲೆ ಈಗಿರುವ ಕಟ್ಟಡದಲ್ಲಿ ಕೆಲ ಸೌಕರ್ಯಗಳ ಕೊರತೆ ಇದೆ. ರಾಯಾಪುರದಲ್ಲಿರುವ ದೂರ ಸಂಪರ್ಕ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.
–ಎಂ.ಎಸ್‌.ಅಲ್ಲಾ ಭಕ್ಷ್‌, ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ
ವಸತಿ ಶಾಲೆಯ ಶೌಚಾಲಯ ಕೊಠಡಿಗೆ ಕಿಟಕಿ ಬಾಗಿಲು ಇಲ್ಲದಿರುವುದು
ವಸತಿ ಶಾಲೆಯ ಶೌಚಾಲಯ ಕೊಠಡಿಗೆ ಕಿಟಕಿ ಬಾಗಿಲು ಇಲ್ಲದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT