ಧಾರವಾಡ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿರ್ವಾಹಕ (ಬಿಎಂಟಿಸಿ) ಹುದ್ದೆಗಳ ನೇಮಕಾತಿಗೆ ಭಾನುವಾರ ನಡೆದ ಪರೀಕ್ಷೆಯಲ್ಲಿ ನಗರದ ಬಾಶಲ್ ಮಿಷನ್ ವಿದ್ಯಾಲಯ ಕೇಂದ್ರದಲ್ಲಿ ಅಭ್ಯರ್ಥಿ ಸದಾಶಿವ ಸುಣದೊಳ್ಳಿ ನಕಲು ಮಾಡಿ ಸಿಕ್ಕಿಬಿದ್ದಿದ್ದಾರೆ.
ಬೆಳಿಗ್ಗೆ 10.30 ರಿಂದ 1230ರವರೆಗೆ ನಡೆದ ಮೊದಲ ಅವಧಿಯ ಪತ್ರಿಕೆಯಲ್ಲಿ ಅಕ್ರಮ ಮಾಡಿ ಸಿಕ್ಕಿಬಿದ್ದಿದ್ದಾರೆ. ಸದಾಶಿವ ಅವರು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದವರು.
'ಅಭ್ಯರ್ಥಿಯು ವಾಂತಿ ಮಾಡಲು ಶೌಚಾಲಯಕ್ಕೆ ಹೋಗುವುದಾಗಿ ಕೊಠಡಿ ಮೇಲ್ವಿಚಾರಕರಿಗೆ ತಿಳಿಸಿ ಹೋಗಿ ಚೀಟಿಗಳನ್ನು ತಂದಿದ್ದಾರೆ. ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವರದಿ ನೀಡಲಾಗಿದೆ. ಕೆಇಎಯವರು ಕ್ರಮ ಜರುಗಿಸುವರು. ಮಧ್ಯಾಹ್ನದ ಪತ್ರಿಕೆ ಪರೀಕ್ಷೆ ಬರೆಯಲು ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು' ಎಂದು ಪರೀಕ್ಷೆ ನೋಡೆಲ್ ಅಧಿಕಾರಿ ಸುರೇಶ್ 'ಪ್ರಜಾವಾಣಿ'ಗೆ ತಿಳಿಸಿದರು.