ಹುಬ್ಬಳ್ಳಿ: ಅವಳಿನಗರದ ಜನತೆಗೆ ಮನೆಬಾಗಿಲಲ್ಲಿ ನಗದು ರಹಿತವಾಗಿ ನೀರಿನ ಬಿಲ್ ಪಾವತಿಸಲು ಅನುಕೂಲವಾಗುವಂತೆ ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ನೂತನ ತಂತ್ರಜ್ಞಾನದ ಪಿಒಎಸ್(ಪಾಯಿಂಟ್ ಆಫ್ ಸೇಲ್) ಸ್ವೈಪಿಂಗ್ ಮಷಿನ್ ಪರಿಚಯಿಸಿದೆ.
ನಗರದ ಐಟಿ ಪಾರ್ಕ್‌ನಲ್ಲಿರುವ ಕೆಯುಐಡಿಎಫ್‌ಸಿ ಸಭಾಂಗಣದಲ್ಲಿ ಶನಿವಾರ ಕೆಯುಐಡಿಎಫ್‌ಸಿ ನಿರ್ದೇಶಕ ಶರತ್ ಬಿ. ಹಾಗೂ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಸ್ವೈಪಿಂಗ್ ಮಷಿನ್ ಬಿಡುಗಡೆ ಮಾಡಿದರು. ಅಧೀಕ್ಷಕ ಎಂಜಿನಿಯರ್ ತಿಮ್ಮಪ್ಪ ಇ., ನಂದೀಶ, ಶಂಭು ಭಟ್, ನೃಪತುಂಗ, ಆಂಜನಪ್ಪ ಇದ್ದರು.
ಗ್ರಾಹಕರು ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಬಹುದು. ಹಣ ಪಾವತಿಯಾದ ತಕ್ಷಣ ರಶೀದಿ ದೊರೆಯುತ್ತದೆ. ಆರ್‌ಆರ್ ನಂಬರ್‌ಗೆ ಮೊಬೈಲ್ ನಂಬರ್ ಜೋಡಣೆಯಾಗಿದ್ದರೆ, ಹಣ ಪಾವತಿಯಾಗಿರುವ ಸಂದೇಶ ಮೊಬೈಲ್‌ಗೆ ರವಾನೆಯಾಗುತ್ತದೆ. ಸಿಬ್ಬಂದಿ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಹಣ ಪಾವತಿಸಿಕೊಳ್ಳುವುದರಿಂದ, ಗ್ರಾಹಕರ ಸಮಯ ಉಳಿತಾಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆ: ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಕೆಯುಐಡಿಎಫ್‌ಸಿ ನಿರ್ದೇಶಕ ಶರತ್ ಬಿ. ಹಾಗೂ ಇತರ ಅಧಿಕಾರಿಗಳು ನಗರದಲ್ಲಿ ಕೈಗೊಂಡ ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದರು. ತೋಳನಕೆರೆ ಉದ್ಯಾನ ಅಭಿವೃದ್ಧಿ, ಹಳೇ ಬಸ್ ನಿಲ್ದಾಣ, ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೀರಸಾಗರ ಜಲಾಶಯ, ದುಮ್ಮುವಾಡ ಪಂಪ್‌ಹೌಸ್, ಕಣವಿಹೊನ್ನಾಪುರ ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಅವರು, ದೇಸಾಯಿ ಕ್ರಾಸ್ ಬಳಿಯ ಪಂಪ್‌ಲೈನ್ ಕಾಮಗಾರಿ ಪರಿಶೀಲಿಸಿ ನಿರಂತರ ನೀರು ಪೂರೈಕೆಯಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಪಡೆದರು.