ಗುರುವಾರ , ಸೆಪ್ಟೆಂಬರ್ 23, 2021
22 °C
ಇಂದಿರಾ ಗ್ಲಾಸ್ ಹೌಸ್‌ನಿಂದ ಮಿನಿ ವಿಧಾನಸೌಧದವರೆಗೆ ಮೌನ ಮೆರವಣಿಗೆ

ಹುಬ್ಬಳ್ಳಿ: ಮದ್ಯ ನಿಷೇಧಕ್ಕೆ ಒಕ್ಕೊರಲ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ, ವಿವಿಧ ಸಂಘಟನೆಗಳು ಹುಬ್ಬಳ್ಳಿಯಲ್ಲಿ ಶನಿವಾರ ಇಂದಿರಾ ಗ್ಲಾಸ್‌ ಹೌಸ್‌ನಿಂದ ಮಿನಿ ವಿಧಾನಸೌಧದವರೆಗೆ ಮೌನ ಮೆರವಣಿಗೆ ನಡೆಸಿದವು. ಬಳಿಕ, ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಮೆರವಣಿಗೆಗೆ ಬೆಂಬಲ ಸೂಚಿಸಿ ಸಂಘಟನೆಗಳ ಸದಸ್ಯರೊಂದಿಗೆ ಹೆಜ್ಜೆ ಹಾಕಿದ ರುದ್ರಾಕ್ಷಿ ಮಠದ ಬಸವಾನಂದ ಸ್ವಾಮೀಜಿ, ‘ಕುಟುಂಬದ ಯಜಮಾನನ ಮದ್ಯಪಾನ ಚಟವು, ಇಡೀ ಕುಟುಂಬವನ್ನೇ ಆಪೋಶನಕ್ಕೆ ತೆಗೆದುಕೊಳ್ಳುತ್ತದೆ. ಹಾಗಾಗಿ, ಸರ್ಕಾರ ಕೂಡಲೇ ಮದ್ಯ ನಿಷೇಧ ಮಾಡಬೇಕು’ ಎಂದು ಒತ್ತಾಯಿಸಿದರು.

‘ಮದ್ಯ ನಿಷೇಧಕ್ಕಾಗಿ ನಡೆಯುವ ಹೋರಾಟಗಳು ದೊಡ್ಡ ಮಟ್ಟದಲ್ಲಿ ಜನಾಂದೋಲನವಾಗಿ ರೂಪುಗೊಳ್ಳಬೇಕಿದೆ. ಸರ್ಕಾರಗಳು ಕೇವಲ ಲಾಭದ ಬಗ್ಗೆಯಷ್ಟೇ ಯೋಚಿಸದೆ, ಪ್ರಜೆಗಳ ಆರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯದ ಬಗ್ಗೆಯೂ ಗಮನ ಹರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ರಾಮಕೃಷ್ಣ ಆಶ್ರಮದ ರಘುವೀರನಂದ ಸ್ವಾಮೀಜಿ ಮಾತನಾಡಿ, ‘ಅವಳಿನಗರದ ರಸ್ತೆಗಳು ಮದ್ಯದ ಅಂಗಡಿಗಳಿಂದ ತುಂಬಿವೆ. ಮೀಸೆ ಮೂಡುವುದಕ್ಕೂ ಮುಂಚೆಯೇ ಯುವಕರು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಮದ್ಯ ನಿಷೇಧವೊಂದೇ ಇದನ್ನು ತಡೆಯಲು ಇರುವ ಮಾರ್ಗ’ ಎಂದರು.

ಮೆರವಣಿಗೆಯ ಸಂಚಾಲಕಿ ಹಾಗೂ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯೆ ಡಾ. ವೀಣಾ ಮಾಧವ ಟೊಣಪಿ, ‘ಮಹಾತ್ಮಾ ಗಾಂಧೀಜಿ ಆಶಯದಂತೆ, ಸರ್ಕಾರ ಮದ್ಯ ನಿಷೇಧಿಸಬೇಕು. ಮದ್ಯದಿಂದಾಗಿ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಕುಡಿದ ಅಮಲಿನಲ್ಲಿ ನಡೆಯುವ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತ್ಯಾಚಾರ, ಕೊಲೆ, ಸುಲಿಗೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳು ಏರುತ್ತಿವೆ’ ಎಂದು ತಿಳಿಸಿದರು.

ಶ್ರೀಮಾತಾಶ್ರಮದ ತೇಜೋಮಯಿ ಮಾತಾಜಿ, ಡಾ. ಅನಿತಾ ಕೆ., ಡಾ. ಆಕಾಶ ಕೆಂಭಾವಿ, ಅಮಲಾ ಕಡಗದ, ಅಬ್ದುಲ್ ಬೆಳಗಲಿ, ಡಾ. ಶಾರದಾ ಪಾಟೀಲ, ಸಹ ಸಂಚಾಲಕಿ ಶಾರದಾ ಜಿ., ಡಾ. ಭಾರತಿ ಹಿರೇಮಠ, ಮಾಧವ ಟೊಣಪಿ, ಡಾ. ಪ್ರಭಾ ದೊಡ್ಡವಾಡಮಠ, ಅನುಪ್ ವಿಜಾಪುರ, ಎಂ.ಜಿ. ಶಶಿಧರ, ಯೋಗೇಶ ಮಹಾಜನ್, ಜಿ.ಆರ್. ಅಂದಾನಿಮಠ, ಡಾ.ಶಿವಾನಂದ ಶೆಟ್ಟರ, ಡಾ. ತಪಶೆಟ್ಟಿ, ಸುಚಿತ್ರಾ, ಭಾರತಿ ಹಿರೇಮಠ, ನವನಗರ ಚಿಕ್ಕೆನಕೊಪ್ಪ ಆಶ್ರಮದ ಅಂಧಮಕ್ಕಳು, ಕೆಎಲ್‍ಇ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಇದ್ದರು.

ಮದ್ಯವರ್ಜನಾ ಕೇಂದ್ರ ಸ್ಥಾಪಿಸಿ: ಮುತಾಲಿಕ್
ಮೌನ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ‘ಬಿಹಾರದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲೂ ಕ್ರಮ ಕೈಗೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಮದ್ಯವರ್ಜನಾ ಶಿಬಿರಗಳಿಗೆ ಕಳಿಸಬೇಕು. ಕುಡುಕರಿಂದ ದಂಡದ ರೂಪದಲ್ಲಿ ಸಂಗ್ರಹಿಸುವ ಹಣದಲ್ಲಿ, ಮದ್ಯವರ್ಜನಾ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು