ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಪಾಲಿನ ತೆರಿಗೆ ಹಣ ಬಿಡುಗಡೆಗೆ ಆಗ್ರಹ 

Published 8 ಫೆಬ್ರುವರಿ 2024, 16:04 IST
Last Updated 8 ಫೆಬ್ರುವರಿ 2024, 16:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಕಾಂಗ್ರೆಸ್‌  ಮುಖಂಡರು ನಡೆಸಿದ ಪ್ರತಿಭಟನೆಗೆ ಇಲ್ಲಿನ ಸಂಸದ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೆಂಬಲಿಸದಿರುವುದನ್ನು ವಿರೋಧಿಸಿ, ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಕರ್ನಾಟಕ) ವತಿಯಿಂದ ಗುರುವಾರ ನಗರದಲ್ಲಿನ ಪ್ರಲ್ಹಾದ ಜೋಶಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

‘ಕೇಂದ್ರ ಸರ್ಕಾರವು ರಾಜ್ಯದ ವಿರುದ್ಧ ಮೊದಲಿನಿಂದಲೂ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 2017–18ರಿಂದ ₹1.87 ಲಕ್ಷ ಕೋಟಿ ಜಿಎಸ್‌ಟಿ ತೆರಿಗೆ ಬಾಕಿ ಹಣ ಕೊಡಬೇಕಿದ್ದು, ಇದನ್ನು ಕೊಟ್ಟಿಲ್ಲ. ಬರ ‍ಪರಿಹಾರ ನೀಡುವಂತೆಯೂ ಮನವಿ ಸಲ್ಲಿಸಿದರೂ ಹಣ ಬಿಡುಗಡೆ ಮಾಡಿಲ್ಲ. ಇದನ್ನು ಖಂಡಿಸಿ ರಾಜ್ಯದ ಮುಖ್ಯಮಂತ್ರಿಯವರೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೂ, ಇಲ್ಲಿನ ಸಂಸದರು ಬೆಂಬಲ ನೀಡದೆ ಇರುವುದು ಖಂಡನೀಯ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಪ್ರಮುಖರಾದ ಸೌರಭ ಮಾಸಿಕರ ಹಾಗೂ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ರಾಜ್ಯಕ್ಕೆ ಬರಬೇಕಾದ ಬಾಕಿ ತೆರಿಗೆ ಹಣವನ್ನು ಕೊಡಬೇಕು. ಇದರಿಂದ ರಾಜ್ಯದ ಸಮಗ್ರ ಅಭಿವೃದ್ಧಿ ಸಹಾಯವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ದೊರೆಯುತ್ತದೆ. ಅರ್ಹ ವಿದ್ಯಾರ್ಥಿಗಳಿಗೆ ಲ್ಯಾ‍ಪ್‌ಟಾಪ್‌ ಸಹ ಸಿಗುತ್ತದೆ. ಪ್ರಲ್ಹಾದ ಜೋಶಿ ಅವರು ಸಹ, ರಾಜ್ಯಕ್ಕೆ ಬರಬೇಕಾದ ಬಾಕಿ ತೆರಿಗೆ ಹಣವನ್ನು ಬಿಡುಗಡೆ ಮಾಡಿಸುವಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ಬಿಡುಗಡೆಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ, ಕಾಂಗ್ರೆಸ್‌ ನಾಯಕರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ’ ಎಂದರು. 

ಇದೇ ವೇಳೆ ಪ್ರಲ್ಹಾದ ಜೋಶಿ ವಿರುದ್ಧ ಘೋಷಣೆ ಕೂಗುತ್ತಾ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಒಕ್ಕೂಟದ ಪ್ರಮುಖರನ್ನು ಪೊಲೀಸರು ತಡೆದರು. 

ಒಕ್ಕೂಟದ ಪ್ರಮುಖರಾದ ಬಸನಗೌಡ ಪಾಟೀಲ, ಸುನೀಲ್, ವಿಶಾಲ್, ಶಿವು ಬೆಂಡಿಗೇರಿ, ಹುಸೇನ್‌ ಹಾಜಿ, ಇರ್ಫಾನ್‌ ಪಠಾಣ್, ಸತೀಶ್‌ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ನಿಂತುಕೊಂಡು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಕರ್ನಾಟಕ) ವಿರುದ್ಧ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ನಿಂತುಕೊಂಡು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಕರ್ನಾಟಕ) ವಿರುದ್ಧ ಪ್ರತಿಭಟನೆ ನಡೆಸಿದರು

ಕೇಂದ್ರದ ಮಲತಾಯಿ ಧೋರಣೆಗೆ ಖಂಡನೆ ಪ್ರಲ್ಹಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದವರು ನಡೆಸುತ್ತಿದ್ದ ಪ್ರತಿಭಟನೆಯನ್ನು ವಿರೋಧಿಸಿ ಬಿಜೆಪಿಯ ಕಾರ್ಯಕರ್ತರು ಜೋಶಿ ಅವರ ಕಚೇರಿ ಬಾಗಿಲ ಬಳಿಯೇ ನಿಂತುಕೊಂಡು ‘ಭಾರತ್‌ ಮಾತಾಕೀ ಜೈ’ ‘ಪ್ರಧಾನಿ ನರೇಂದ್ರ ಮೋದಿಗೆ ಜೈ’ ಎನ್ನುತ್ತಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಲ್ಹಾದ ಜೋಶಿ ಅವರ ಪರವಾಗಿ ಘೋಷಣೆ ಕೂಗಿದರು.  ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಒಕ್ಕೂಟದ ಸದಸ್ಯರನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT