ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಜಿಲ್ಲೆಯಲ್ಲಿ ‘ಡೆಂಗಿ’ ಪ್ರಕರಣ ಏರಿಕೆ, ‘ಚಿಕುನ್‌ಗುನ್ಯಾ’ ಇಳಿಕೆ

Published 7 ಜೂನ್ 2024, 6:54 IST
Last Updated 7 ಜೂನ್ 2024, 6:54 IST
ಅಕ್ಷರ ಗಾತ್ರ

ಹುಬ್ಭಳ್ಳಿ: ಧಾರವಾಡ ಜಿಲ್ಲೆಯಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ಜನವರಿಯಿಂದ ಈವರೆಗೆ ಒಟ್ಟು 96 ಜನರಲ್ಲಿ ಡೆಂಗಿ ಸೋಂಕು ಪತ್ತೆಯಾಗಿದೆ.

ಚಿಕುನ್‌ಗುನ್ಯಾ ಪ್ರಕರಣಗಳು 12 ಕಂಡು ಬಂದಿದ್ದು, ಮಲೇರಿಯಾ ಪ್ರಕರಣಗಳು ಇಲ್ಲ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಹಾಗೂ ಅವುಗಳಿಂದ ರಕ್ಷಣೆ ಮಾಡಿಕೊಳ್ಳುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವರ್ಷವಿಡೀ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದರೂ ಡೆಂಗಿ ಪ್ರಕರಣಗಳು ಮಾತ್ರ ಹೆಚ್ಚಳವಾಗುತ್ತಲೇ ಇವೆ.

ಈ ಬಾರಿ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದಾಗಿ ಸೊಳ್ಳೆಗಳ ಉತ್ಪತ್ತಿಯ ಪ್ರಮಾಣವೂ ಹೆಚ್ಚಾಗಿದೆ. ನೀರು ಪೂರೈಕೆ ಕಡಿಮೆಯಾದಂತೆ ಜನರು ಸಂಗ್ರಹಿಸಿಟ್ಟುಕೊಂಡ ನೀರನ್ನು ಖಾಲಿ ಮಾಡಲು ಸಾಧ್ಯವಾಗುತ್ತಿಲ್ಲ. ಸಂಗ್ರಹಿತ ನೀರಿನಲ್ಲಿ ಔಷಧ ಹಾಕುವುದಕ್ಕೂ ಬಿಡುತ್ತಿಲ್ಲ ಎಂಬುದು ಲಾರ್ವಾ ಸಮೀಕ್ಷೆ ಸಂದರ್ಭದಲ್ಲಿ ಕಂಡು ಬಂದಿದೆ.

ಧಾರವಾಡ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗಿ ಹೆಚ್ಚಳ ಗುರುತಿಸಲಾಗಿದೆ. ಅಂಥ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಲಾರ್ವಾ ಸಮೀಕ್ಷೆ ಮಾಡಿಸಿ ಲಾರ್ವಾ ನಿರ್ಮೂಲನೆ ಮಾಡಲಾಗುತ್ತಿದೆ. ವಾರದಲ್ಲಿ ಮೂರು ದಿನ ವಿದ್ಯಾರ್ಥಿ ಸ್ವಯಂ ಸೇವಕರಿಂದಲೂ ಸಮೀಕ್ಷೆ ಮಾಡಿಸಲಾಗಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ 280 ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿಗಳೂ ಈ ಬಾರಿ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.

‘ಸೊಳ್ಳೆಗಳು ಹೆಚ್ಚಿರುವಲ್ಲಿ ಫಾಗಿಂಗ್‌ ಮಾಡಿಸಲಾಗಿದೆ. ಡೆಂಗಿ ಲಕ್ಷಣಗಳು ಕಂಡು ಬಂದ ಕೂಡಲೇ ರಕ್ತ ಪರೀಕ್ಷೆಯಲ್ಲಿ ಪಾಸಿಟಿವ್‌ ಆಗಲಿ ಬಿಡಲಿ, ರೋಗಿಗಳಿಗೆ ಚಿಕಿತ್ಸೆ ಆರಂಭಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ, ಕಿಮ್ಸ್‌ ಹಾಗೂ ಎಸ್‌ಡಿಎಂ ಸೇರಿದಂತೆ ಎಲ್ಲ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಇದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಾಲಯದ ಕೀಟಶಾಸ್ತ್ರಜ್ಞ ಡಾ.ಟಿ.ಪಿ. ಮಂಜುನಾಥ ತಿಳಿಸಿದರು.

‘ಮನೆಯಲ್ಲಿ ಕುಡಿಯುವ ನೀರನ್ನು ಎಲ್ಲರೂ ಮುಚ್ಚಿ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಬಳಕೆಯ ನೀರಿನ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ತಮ್ಮ ಮನೆಯ ಟ್ಯಾಂಕ್‌, ಸಂಪುಗಳಲ್ಲಿ ಬಳಕೆಗಾಗಿ ಸಂಗ್ರಹಿಸಿದ ನೀರನ್ನು ಸರಿಯಾಗಿ ಮುಚ್ಚಿ ಲಾರ್ವಾ ಆಗದಂತೆ ಜನರು ನೋಡಿಕೊಳ್ಳಬೇಕು. ಧಾರವಾಡ ನಗರ ಪ್ರದೇಶದಲ್ಲಿ ಈಗಲೂ 8 ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತದೆ. ಹೀಗಾಗಿ ಸಹಜವಾಗಿ ಇಲ್ಲಿ ಸಮಸ್ಯೆ ಇದೆ. ಇಲ್ಲಿ ನೀರಿನ ಸಂಗ್ರಹದ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಅಗತ್ಯ. ಮನೆಯ ಸುತ್ತ ಟೈರ್‌, ತೆಂಗಿನ ಚಿಪ್ಪು, ಹೂಕುಂಡಗಳಲ್ಲಿ ಹಾಗೂ ಘನ ತ್ಯಾಜ್ಯಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಡೆಂಗಿ ಹರಡುವಿಕೆಗೆ ಕಾರಣವಾಗುವ ಈಡಿಸ್‌ ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬೇಕಿದೆ’ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮಂಜುನಾಥ ತಿಳಿಸಿದರು.

ಫಾಗಿಂಗ್‌–ಸ್ಪ್ರೇಯಿಂಗ್‌ ನಿರಂತರ

ಡೆಂಗಿ–ಚಿಕುನ್‌ಗುನ್ಯಾ ಹಾಗೂ ಇತರ ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ತಡೆಯಲು ಪಾಲಿಕೆ ವತಿಯಿಂದ ನಿರಂತರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವಾರ ಲಾರ್ವಾ ಸಮೀಕ್ಷೆ ಲಾರ್ವಾ ನಿರ್ಮೂಲನೆ ಮಾಡಲಾಗುತ್ತಿದೆ. ನಗರ ವ್ಯಾಪ್ತಿಯ ನಾಲೆ ಹಾಗೂ ಕೆರೆಗಳಲ್ಲಿ ಲಾರ್ವಾ ಭಕ್ಷಕ ಗಪ್ಪಿ ಮೀನುಗಳನ್ನು ಬಿಡಲಾಗಿದೆ. ಪ್ರತಿ ವಲಯ ವ್ಯಾಪ್ತಿಯಲ್ಲಿ 3–4 ಫಾಗಿಂಗ್‌ ಯಂತ್ರಗಳು ಲಭ್ಯವಿದ್ದು ದಿನವೂ ಒಂದಲ್ಲ ಒಂದು ವಾರ್ಡ್‌ನಲ್ಲಿ ಫಾಗಿಂಗ್ ಹಾಗೂ ಸ್ಪ್ರೇಯಿಂಗ್‌ ನಡೆಯುತ್ತಿದೆ. ‘ನೀರು ಸಂಗ್ರಹ ಹೆಚ್ಚು ದಿನ ಇರಬಾರದೆಂಬ ಕಾರಣಕ್ಕೆ ಎಲ್‌ ಆ್ಯಂಡ್‌ ಟಿ ಕಂಪನಿಗೆ ನೀರು ಪೂರೈಕೆಯ ದಿನಗಳ ಅಂತರವನ್ನು ಕಡಿಮೆ ಮಾಡುವಂತೆಯೂ ಸೂಚಿಸಲಾಗಿದೆ. ಜನರು ತಮ್ಮ ಮನೆಯ ಒಳಗೆ ಹಾಗೂ ಹೊರ ಆವರಣದಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಬಾರದು. ಮಡಿಕೆ ತೆಂಗಿನ ಚಿಪ್ಪು ಟಯರ್‌ಗಳಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳು ಬೆಳೆಯುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ಜನರು ವೈಯಕ್ತಿಕವಾಗಿಯೂ ಕಾಳಜಿ ವಹಿಸಬೇಕು’  ಎಂದು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನರ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಇರುವಂತೆ ಜಿಲ್ಲೆಯಲ್ಲೂ ಡೆಂಗಿ ಪ್ರಕರಣ ಹೆಚ್ಚಳವಾಗಿದೆ. ಆದರೆ ತೀವ್ರ ತರಹದ ಪ್ರಕರಣಗಳು ಇಲ್ಲ. ಆತಂಕ ಪಡುವ ಅವಶ್ಯಕತೆ ಇಲ್ಲ.
-ಡಾ.ಟಿ.ಪಿ. ಮಂಜುನಾಥ್‌, ಕೀಟಶಾಸ್ತ್ರಜ್ಞ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಾಲಯ
ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ತಡೆಯಲು ಧಾರವಾಡ–ಹುಬ್ಬಳ್ಳಿ ಮಹಾನಗರದಲ್ಲಿ ಕ್ರಮ ಕೈಗೊಳ್ಳಲಾಗಿದ್ದು ಪಾಲಿಕೆ ವತಿಯಿಂದ ನಿತ್ಯವೂ ಫಾಗಿಂಗ್‌ ನಡೆಯುತ್ತಿದೆ
-ಈಶ್ವರ ಉಳ್ಳಾಗಡ್ಡಿ, ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT