ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟಿ ಜೀವ ಉಳಿಸಿದ ರಾಣಾ: ಇದು ಶ್ವಾನದ ರಕ್ತದಾನ!

Last Updated 14 ಜನವರಿ 2020, 4:21 IST
ಅಕ್ಷರ ಗಾತ್ರ
ADVERTISEMENT
""

ರಕ್ತದಾನ ಶ್ರೇಷ್ಠ ದಾನ ಎನ್ನುವ ಮಾತಿದೆ. ಇಂತಹ ದಾನದಿಂದ ಒಬ್ಬರ ಜೀವ ಉಳಿಸಬಹುದು ಎನ್ನುತ್ತಾರೆ ವೈದ್ಯರು. ಆದರೆ, ವಿವಿಧ ತಪ್ಪು ಕಲ್ಪನೆಗಳಿಂದಾಗಿ ರಕ್ತದಾನ ಮಾಡಲು ಕೆಲವರು ಹಿಂಜರಿಯುತ್ತಾರೆ. ಆದರೆ, ಹುಬ್ಬಳ್ಳಿಯಲ್ಲೊಂದು ಹೆಣ್ಣು ಶ್ವಾನಕ್ಕೆ, ಗಂಡು ಶ್ವಾನವೊಂದು ರಕ್ತದಾನ ಮಾಡಿ, ಜೀವ ಉಳಿಸಲು ನೆರವಾಗಿದೆ. ಈ ಪ್ರಕರಣ ರಕ್ತದಾನ ಮಾಡಲು ಹಿಂಜರಿಯುವವರನ್ನು ನಾಚುವಂತೆ ಮಾಡಿದೆ.

ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅದರ ಮಹತ್ವ ಅರಿತಿದ್ದರೂ ಸಹ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆ ಇದೆ. ರಕ್ತದಾನ ಮಾಡಿದರೆ ತಮ್ಮ ದೇಹದಲ್ಲಿ ರಕ್ತ ಕಡಿಮೆಯಾಗಬಹುದು. ತಾವು ಅನಾರೋಗ್ಯಕ್ಕೆ ತುತ್ತಾಗಬಹುದು ಅಥವಾ ಇನ್ನಿತರ ಹಲವಾರು ತಪ್ಪು ಕಲ್ಪನೆಗಳು ಜನರನ್ನು ಕಾಡುತ್ತಿರುವುದರಿಂದ ಅನೇಕರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ, ಹುಬ್ಬಳ್ಳಿಯ ‘ರಾಣಾ’ ಎನ್ನುವ ಶ್ವಾನಅನಾರೋಗ್ಯಕ್ಕೆ ತುತ್ತಾಗಿದ್ದ 'ರೋಟಿ' ಎನ್ನುವ ಹೆಣ್ಣು ಶ್ವಾನಕ್ಕೆ ರಕ್ತ ನೀಡಿದೆ.

ಮಾಲೀಕನ ಆಜ್ಞೆ ಪಾಲನೆ

ರೋಟ್ ವ್ಹೀಲರ್ ತಳಿಗೆ ಸೇರಿದ ‘ರೋಟಿ’ಗೆ ಕಾಮಾಲೆ (ಜಾಯಿಂಡಿಸ್) ರೋಗ ಉಂಟಾಗಿ, ಕರುಳಿನಲ್ಲಿ ಸಮಸ್ಯೆಯಿಂದಾಗಿ ಬಳಲುತ್ತಿತ್ತು. ಈ ವೇಳೆ ಅದಕ್ಕೆ ರಕ್ತದ ಅವಶ್ಯಕತೆ ಇತ್ತು. ಈ ಬಗ್ಗೆ ಮಾಹಿತಿ ಪಡೆದ ಲ್ಯಾಬ್ರಡಾರ್ ತಳಿಯ ‘ರಾಣಾ’ ಶ್ವಾನದ ಮಾಲೀಕ ಮನೀಶ್ ಕುಲಕರ್ಣಿ, ತಮ್ಮ ಶ್ವಾನದ ರಕ್ತದಾನ ಮಾಡುವುದಾಗಿ ಮುಂದೆ ಬಂದರು. ಮಾಲೀಕನ ಆಜ್ಞೆಯನ್ನೂ ಪಾಲಿಸಿದ ಶ್ವಾನ, ಆಸ್ಪತ್ರೆಯಲ್ಲಿ ರಕ್ತದಾನ ಮಾಡಿತು. 350 ಮಿ.ಗ್ರಾಂ ರಕ್ತ ನೀಡುವ ಮೂಲಕ ಅಪಾಯದಲ್ಲಿದ್ದ ಇನ್ನೊಂದು ಶ್ವಾನದ ಜೀವ ಉಳಿಸಲು ನೆರವಾಯಿತು.

ರಕ್ತದಾನ ಮಾಡಿದ ರಾಣಾ

ಮನೀಶ್ ಕೂಡ ರಕ್ತದಾನಿ

‘ರಾಣಾ’ದ ಮಾಲೀಕ ಮನೀಶ್ ಕೂಡ ‘ಬಿ’ನೆಗೆಟಿವ್ ರಕ್ತ ಹೊಂದಿರುವವರಾಗಿದ್ದು, ಅವರು ಕೂಡ ರಕ್ತದಾನಿಯಾಗಿದ್ದಾರೆ. ಹೀಗಾಗಿ ರಕ್ತದಾನದ ಮಹತ್ವ ಅವರು ಅರಿತಿದ್ದರಿಂದ, ಜತೆಗೆ ತಮ್ಮ ಶ್ವಾನಕ್ಕೆ ಸರಿಯಾದ ಸಮಯದಲ್ಲಿ ವಿವಿಧ ಚುಚ್ಚುಮದ್ದುಗಳನ್ನು ಕೊಡಿಸಿ ಆರೋಗ್ಯಯುತವಾಗಿ ಬೆಳೆಸಿದ್ದರು. ಹೀಗಾಗಿ‘ರಾಣಾ’ನಿಗೆ ಯಾವುದೇ ಇತರ ಆರೋಗ್ಯ ಸಮಸ್ಯೆಗಳು ಇಲ್ಲದಿರುವುದರಿಂದ ಮೊದಲ ಬಾರಿ ರಕ್ತದಾನ ಮಾಡಲು ಅರ್ಹತೆ ಪಡೆದುಕೊಂಡಿತು.

11ಕ್ಕಿಂತ ಹೆಚ್ಚುಹಿಮೋಗ್ಲೋಬಿನ್ ಕಣ

‘ಪ್ರತಿ ಬಾರಿ ರಕ್ತದಾನ ಮಾಡುವಾಗ ಮನುಷ್ಯರಂತೆ ಶ್ವಾನಗಳಿಗೂ ಹಿಮೋಗ್ಲೋಬಿನ್ತಪಾಸಣೆ ನಡೆಸಲಾಗುತ್ತದೆ. 11ಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಕಣಗಳನ್ನು ಹೊಂದಿರುವ ಶ್ವಾನಗಳು ರಕ್ತದಾನ ಮಾಡುವ ಸಾಮರ್ಥ್ಯ ಹೊಂದಿರುತ್ತವೆ. 5ಕ್ಕಿಂತ ಕಡಿಮೆ ಹಿಮೋಗ್ಲೋಬಿನ್ ಕಣಗಳನ್ನು ಹೊಂದಿರುವ ಶ್ವಾನಗಳಿಗೆ ರಕ್ತ ಮರು ಭರಣ ಮಾಡಬಹುದಾಗಿದೆ' ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಡಾ.ಸುನೀಲ್ ಪಾಟೀಲ್.

ಶ್ವಾನಗಳ ರಕ್ತದಲ್ಲಿ12 ವಿಧ

‘ಸಾಮಾನ್ಯವಾಗಿ ಶ್ವಾನಗಳಲ್ಲಿ ಆ್ಯಂಟಿಬಾಡಿಸ್ ಇರುವುದಿಲ್ಲ. ಅದರ ಬದಲಾಗಿ ಆ್ಯಂಟಿಜೆನ್ ಗಳು ಇರು
ತ್ತವೆ. ಇದರ ಆಧಾರದಲ್ಲಿ ಶ್ವಾನಗಳ ರಕ್ತವನ್ನು 12 ವಿಧಗಳಾಗಿ ವಿಂಗಡಿಸಲಾಗುತ್ತದೆ. ಇವುಗಳನ್ನು 'ಡಾಗ್ ಎರಿಥ್ರೋಸೈಟ್ ಆಂಟಿಜೆನ್' ಎಂದು ಕರೆಯಲಾಗುತ್ತದೆ. ಡಿಇಎ 1.1, ಡಿಇಎ 1.2, ಡಿಇಎ 1.3, ಡಿಇಎ 4, ಡಿಇಎ 5, ಡಿಇಎ 6, ಡಿಇಎ 7, ಡಿಇಎ 2.12, ಡಿಇಎ 2.13, ಡಿಇಎ 3.11, ಡಿಇಎ 3.12 ವಿಧವಿದೆ. ಇದರಲ್ಲಿ ಡಿಇಎ 2.11 ಸಾಮಾನ್ಯದ್ದಾಗಿರುತ್ತದೆ. ಶೇಕಡಾ 90ರಷ್ಟು ಶ್ವಾನಗಳಲ್ಲಿ ಈ ರಕ್ತವಿರುತ್ತದೆ’ ಎಂದರು ಡಾ. ಸುನೀಲ್.

ಕನಿಷ್ಠ 5 ತಿಂಗಳ ಅಂತರ

ಮನುಷ್ಯರಲ್ಲಿ ಆರೋಗ್ಯದ ದೃಷ್ಟಿಯಿಂದ ಪುರುಷರು ಒಮ್ಮೆ ರಕ್ತದಾನ ಮಾಡಿದರೆ ಮತ್ತೆ ದಾನ ಮಾಡಲು ಮೂರು ತಿಂಗಳವರೆಗೆ ಕಾಯಬೇಕು. ಅದರಂತೆ ಮಹಿಳೆಯರು ಕೂಡ ನಾಲ್ಕು ತಿಂಗಳ ನಂತರವೇ ಮತ್ತೆ ರಕ್ತದಾನ ಮಾಡಬೇಕಿದೆ. ಶ್ವಾನಗಳಲ್ಲೂ ಈ ನಿಯಮ ಪಾಲನೆಯಾಗುತ್ತದೆ. ಒಮ್ಮೆ ರಕ್ತ ನೀಡಿದ ಬಳಿಕ ಮತ್ತೆ ರಕ್ತದಾನ ಮಾಡಲು ಕನಿಷ್ಠ4- 5 ತಿಂಗಳವರೆಗೆ ಕಾಯಬೇಕು. ಈ ಅವಧಿಯಲ್ಲಿ ರಕ್ತ ಮೊದಲಿನ ಪ್ರಮಾಣಕ್ಕೆ ಹೆಚ್ಚಳಗೊಳ್ಳಲಿದೆ. ನಾಲ್ಕೈದು ತಿಂಗಳ ಬಳಿಕ ಅವುಗಳು ಮತ್ತೆ ರಕ್ತದಾನ ಮಾಡಬಹುದಾಗಿದೆ.

ಕೆಂಪು ರಕ್ತ ಕಣಗಳಲ್ಲಿನ ಆ್ಯಂಟಿಜೆನ್ಗಳ ಇರುವಿಕೆಯ ಮೇಲೆ ರಕ್ತದ ಗುಂಪನ್ನು ಪತ್ತೆ ಹಚ್ಚಲಾಗುತ್ತದೆ. ಪ್ರೋಟೀನ್‌ ಮತ್ತು ಸಕ್ಕರೆ ಈ ಆ್ಯಂಟಿಜೆನ್ನಲ್ಲಿ ಇರುತ್ತದೆ. ಡಿಇಎ 1.1 ರಕ್ತ ಹೊಂದಿರುವ ಶ್ವಾನಗಳು ಎಲ್ಲಾ ವಿಧದ ರಕ್ತಗಳನ್ನೂ ಪಡೆಯಬಹುದು ಮತ್ತು ಎಲ್ಲಾ ಶ್ವಾನಗಳಿಗೆ ದಾನವನ್ನೂ ಮಾಡಬಹುದಾಗಿದೆ.

ರಕ್ತದಾನ ಮಾಡಿದವರ ಆರೋಗ್ಯ ಇನ್ನಷ್ಟು ವೃದ್ಧಿಸುತ್ತದೆ ಎನ್ನುವುದು ವೈದ್ಯಕೀಯವಾಗಿ ಜಗಜ್ಜಾಹೀರಾಗಿರುವ ವಿಚಾರ. ಅದರಂತೆಯೇ ಈ ಶ್ವಾನದ ಆರೋಗ್ಯ ಕೂಡ ಮೊದಲಿಗಿಂತಲೂ, ರಕ್ತದಾನ ಮಾಡಿದ ನಂತರ ಇನ್ನಷ್ಟು ವೃದ್ಧಿಯಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT