ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ರಾ.ಬೇಂದ್ರೆ ಸಾಹಿತ್ಯ ಅರಿವಿನ ಆಗರ- ಕೆ.ಎಸ್‌.ಶರ್ಮಾ

Published 24 ಮಾರ್ಚ್ 2024, 10:11 IST
Last Updated 24 ಮಾರ್ಚ್ 2024, 10:11 IST
ಅಕ್ಷರ ಗಾತ್ರ

ಧಾರವಾಡ: ‘ಸಾಹಿತಿ ದ.ರಾ.ಬೇಂದ್ರೆ ಅವರು ವಿಜ್ಞಾನ, ಸಂಖ್ಯಾಶಾಸ್ತ್ರ ಸಹಿತ ವಿವಿಧ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಅವರಿಗೆ ಎಲ್ಲ ವಿಷಯಗಳ ಜ್ಞಾನ ಇತ್ತು’ ಎಂದು ಬೇಂದ್ರೆ ಸಂಶೋಧನಾ ಕೇಂದ್ರದ ನಿರ್ದೇಶಕ ಕೆ.ಎಸ್‌.ಶರ್ಮಾ ಹೇಳಿದರು.

ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ವತಿಯಿಂದ ನಗರದ ಆಲೂರು ವೆಂಕಟರಾವ್‌ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇಂದ್ರೆ ಅವರು ಲೆಕ್ಕಕ್ಕೆ ಒತ್ತು ನೀಡಿದ್ದರು. ಸಂಖ್ಯೆಗೆ ಇದ್ದಷ್ಟು ಖಚಿತತೆ ಶಬ್ದಗಳಿಗೆ ಇಲ್ಲ. ಸಾಂಖ್ಯಿಕದ ಮೂಲಕ ವಿಚಾರ ಪ್ರಚಾರ ಆಗಬೇಕೆಂದು ಹೇಳಿದ್ದರು ಎಂದು ವಿಶ್ಲೇಷಿಸಿದರು.

‘ಆವರ್ತ ಕೋಷ್ಟಕ (ಪಿರಿಯಾಡಿಕ್‌ ಟೇಬಲ್‌) ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಬೇಂದ್ರೆ ಅವರು ವೈಯಕ್ತಿಕ ಗ್ರಂಥಾಲಯದಲ್ಲಿ 16 ಸಾವಿರ ಪುಸ್ತಕಗಳು ಇದ್ದವು. ಪುಸ್ತಕಗಳನ್ನು ಓದಿ ಅವರು ಟಿಪ್ಪಣಿ ಮಾಡುತ್ತಿದ್ದರು. ಪ್ರಚಲಿತ ವಿಷಯಗಳನ್ನು ಕುರಿತು ಜೀವಂತಿಕೆಯಿಂದ ವಿಚಾರ ಮಾಡುತ್ತಿದ್ದರು’ ಎಂದು ವಿವರಿಸಿದರು.

‘16 ಸಂಪುಟಗಳಲ್ಲಿ (ಗದ್ಯ 10 ಹಾಗೂ ಕಾವ್ಯ 6) ಅವರ ಸಾಹಿತ್ಯ ಪ್ರಕಟವಾಗಿದೆ. ವಿಶ್ವ ಸಾಹಿತ್ಯಕ್ಕೆ ಅವರ ಕೊಡುಗೆಯ ಭಾಗ ಇದು. ಜೀವನವೇ ಕಾವ್ಯ, ಕಾವ್ಯವೇ ಜೀವನ ಎಂದು ಅವರು ತಿಳಿದಿದ್ದರು. ಅವರ ಕಾವ್ಯಗಳನ್ನು ವಿಷಯಾವಾರು ವಿಂಗಡಿಸಿ ಜೀವನ ಮಹಾಕಾವ್ಯವಾಗಿ ಪರಿಕಲ್ಪಿಸಿ ಪ್ರಕಟಿಸಲಾಗಿದೆ’ ಎಂದು ಹೇಳಿದರು.

‘ಬೇಂದ್ರೆ ಅವರ ಗದ್ಯ ಸಂಪುಟದಲ್ಲಿ ಮಹತ್ವದ ಪ್ರಬಂಧ ಇದೆ. ಬಡತನ ಪೂರ್ವಜನ್ಮದ ಪಾಪ ಎಂಬ ಪರಿಕಲ್ಪನೆ ಇರುವವರೆಗೆ ಬಡತನ ನಿರ್ಮೂಲನೆಯಾಗದು, ಬಡತನ ಸಾಮಾಜಿಕ ಸಾಮಾಜಿಕ ಪಾಪ, ಅದು ನಿರ್ಬೀಜಗೊಳ್ಳಬೇಕು ಎಂದು ಬೇಂದ್ರೆ ಹೇಳಿದ್ದರು. ಕ್ರಿಯೆಗಾಗಿ ಸಾಹಿತ್ಯ ರಚನೆಯಾಗಬೇಕು, ಸಾಹಿತ್ಯವನ್ನು ಕ್ರಿಯೆಗೆ ತರದಿದ್ದರೆ ಅದು ವ್ಯರ್ಥ ಎಂದು ಹೇಳಿದ್ದರು. ಅನ್ನ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳಿದ್ದರು’ ಎಂದರು.

‘ಸಮಾಜವಾದಿ ಸಮಾನತೆಯ ನಿರ್ಮಾಣವಾಗಬೇಕು ಎಂದು ಬೇಂದ್ರೆ ಹೇಳಿದ್ದರು. ಬೇಂದ್ರೆ ಅವರ ಮರುಓದು ಇಂದು ಅತ್ಯಂತ ಮುಖ್ಯವಾದುದು. ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ, ಸಮಾನತೆಗಾಗಿ ಎಲ್ಲರೂ ಶ್ರಮಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವಿವೇಕ ಶಾನಭಾಗ ಮಾತನಾಡಿ, ‘ಹಿಂದಿನ ಲೇಖಕರಲ್ಲಿ (ಗಿರೀಶ್‌ ಕಾರ್ನಾಡ್‌, ಪೂರ್ಣಚಂದ್ರ ತೇಜಸ್ವಿ, ಲಂಕೇಶ್‌....) ಸೃಜನಶೀಲ ಸ್ಪರ್ಧೆ ಇತ್ತು. ಇವತ್ತಿನ ಸ್ಪರ್ಧೆಗಳು ಮಾರುಕಟ್ಟೆ ಆಧಾರಿತವಾಗಿವೆ. ಯಾರ ಕೃತಿ ಎಷ್ಟು ಆವೃತ್ತಿಯಲ್ಲಿ ಪ್ರಕಟವಾಯಿತು ಎಂದು ಲೆಕ್ಕಹಾಕುವ ಸ್ಪರ್ಧೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ ಸಹವಾಸದಂಥ ಕಾರ್ಯಕ್ರಮಗಳು ಹಿಂದಿನ ಚಿಂತನೆ, ವಿಚಾರಗಳನ್ನು ಮುನ್ನೆಲೆಗೆ ತರಲು ಸಹಕಾರಿಯಾಗುತ್ತವೆ. ಮರು ಓದಿಗೆ ಪ್ರೇರಣೆ ನೀಡುತ್ತವೆ ಎಂದರು.

ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಮುಖ್ಯ ಸಂವಹನಾಧಿಕಾರಿ ಸುಧೀಶ್‌ ವೆಂಕಟೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ಕರಾವಳಿ, ಮಲೆನಾಡು ಭಾಗದಲ್ಲೂ ಆಯೋಜಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT