ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ರಿಲ್ಯಾಕ್ಸ್‌ ಮೂಡ್‌ನಲ್ಲಿ ಚುನಾವಣಾ ಕಲಿಗಳು...

Published 8 ಮೇ 2024, 15:17 IST
Last Updated 8 ಮೇ 2024, 15:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದ ಒಂದೆರಡು ತಿಂಗಳಿನಿಂದ ಮತದಾರರನ್ನು ಓಲೈಸಲು ಬೆವರು ಹರಿಸಿದ್ದ ಧಾರವಾಡ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಬುಧವಾರ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು. ಮಂಗಳವಾರವಷ್ಟೇ ಜಿಲ್ಲೆಯಾದ್ಯಂತ ಮತದಾನ ಮುಗಿದಿದ್ದು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರು.

ಹಾಲಿ ಸಂಸದ, ಬಿಜೆಪಿಯ ಅಭ್ಯರ್ಥಿ ಪ್ರಲ್ಹಾದ ಜೋಶಿ ಕೇಶ್ವಾಪುರದ ಮಯೂರಿ ಎಸ್ಟೇಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ದಿನವಿಡೀ ಸಮಯ ಕಳೆದರು. ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆದರು. ದಿನಪತ್ರಿಕೆಗಳನ್ನು ಓದಿದರು. ಈ ನಡುವೆ ಪಕ್ಷದ ಮುಖಂಡರು, ಕೆಲ ಕಾರ್ಯಕರ್ತರು ಕೂಡ ಭೇಟಿಯಾಗಿ  ಚುನಾವಣೋತ್ತರ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು.

ಧಾರವಾಡದ ಮಾಜಿ ಶಾಸಕ ಅಮೃತ ದೇಸಾಯಿ, ಮುಖಂಡರಾದ ಶಂಕರ ಮುಗದ ಕೆಲಹೊತ್ತು ಭೇಟಿಯಾಗಿ, ಚುನಾವಣೆ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ನಿರೀಕ್ಷೆಗಿಂತಲೂ ಮೀರಿ ಸರಾಸರಿ ಶೇ 75ರಷ್ಟು ಮತದಾನವಾಗಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ಆಗಿರುವುದರ ಬಗ್ಗೆ ಚರ್ಚಿಸಿದ್ದಾರೆ. ಹೆಚ್ಚಿನ ಮತದಾನ ಯಾರಿಗೆ ಲಾಭ, ನಷ್ಟ ತರಬಹುದು ಎನ್ನುವ ಬಗ್ಗೆಯೂ ಚರ್ಚಿಸಿದ್ದಾರೆ.

‘ಈ ಸಲ ನಗರ ಪ್ರದೇಶಗಳಲ್ಲಿ ಅಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲೂ ಮೋದಿ ಅಲೆ ಇದೆ. ಎಲ್ಲ ಸಮಾಜಗಳ ಜನರು ತಮ್ಮನ್ನು ಬೆಂಬಲಿಸಲಿದ್ದಾರೆ. ಕಳೆದ ಬಾರಿಗಿಂತ ಈ ಸಲ ಶೇ 4ಕ್ಕಿಂತ ಹೆಚ್ಚು ಮತದಾನವಾಗಿದೆ. ಇದು ಬಿಜೆಪಿಗೆ ವರದಾನವಾಗಲಿದೆ’ ಎಂದು ಜೋಶಿ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವಿನೋದ ಅಸೂಟಿ, ಅವರು ಧಾರವಾಡದ ಸಂಪಿಗೆ ನಗರದಲ್ಲಿರುವ ಮನೆಯಲ್ಲಿ ದಿನವಿಡೀ ಸಮಯ ಕಳೆದರು. ತಾಯಿ, ಪತ್ನಿ, ಮಕ್ಕಳ ಜೊತೆಗಿದ್ದರು. ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಅವರ ಜೊತೆ ಆಟವಾಡಿ ಸಮಯ ಕಳೆದರು. ಬೆಳಿಗ್ಗೆ ಎದ್ದ ತಕ್ಷಣ ಸಮೀಪದ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ, ಬಂದು ಉಪಾಹಾರ ಸೇವಿಸಿದರು.

ಚುನಾವಣೆಯಲ್ಲಿ ಸಹಕರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಧನ್ಯವಾದ ಅರ್ಪಿಸಿದರು. ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದು, ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರ ಕಲಘಟಗಿ ಕ್ಷೇತ್ರದಲ್ಲಿ ಶೇ 82ಕ್ಕಿಂತಲೂ ಹೆಚ್ಚು ಮತದಾನ ಆಗಿರುವುದು ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

‘ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ಆಗಿರುವುದು ನಮಗೆ ಪ್ಲಸ್‌ ಪಾಯಿಂಟ್‌ ಆಗಬಹುದು. ವಿಶೇಷವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವುದು ತಮ್ಮನ್ನು ಗೆಲುವಿನ ದಡ ಸೇರಿಸಬಹುದು’ ಎಂದು ವಿನೋದ ಅಸೂಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT