ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಜೀತದಾಳುಗಳನ್ನಾಗಿ ಮಾಡಲು ಹೊರಟಿರುವ ಕೇಂದ್ರ: ರಾಕೇಶ್ ಟಿಕಾಯತ್

Last Updated 31 ಮಾರ್ಚ್ 2021, 9:03 IST
ಅಕ್ಷರ ಗಾತ್ರ

ಧಾರವಾಡ: ‘ರೈತರು ಹಾಗೂ ಗ್ರಾಹಕರಿಗೆ ಸಿಗಬೇಕಾದ ಆಹಾರ ಧಾನ್ಯಗಳನ್ನು ತಮ್ಮ ಖಾಸಗಿ ಗೋದಾಮಿನಲ್ಲಿಟ್ಟು ಕಾರ್ಪೊರೇಟ್ ಕುಳಗಳು ಹಸಿವನ್ನು ಮಾರಾಟ ಮಾಡಲು ಹೊರಟಿವೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವ ಮೂಲಕ ನೀಡುತ್ತಿರುವ ಸಹಕಾರದ ವಿರುದ್ಧ ಹೋರಾಟ ಆರಂಭವಾಗಿದೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಹೇಳಿದರು.

ವಿವಿಧ ಕೃಷಿ ಹಾಗೂ ಸಾಮಾಜಿಕ ಹೋರಾಟ ಸಂಘಟನೆಗಳು ಇಲ್ಲಿನ ಕಡಪಾ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸದ್ಯಕ್ಕೆ ರೈತ ವಿರೋಧಿ ಮೂರು ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಕಾಯ್ದೆ ಹಾಗೂ ಬೀಜದ ಕಾಯ್ದೆಯನ್ನು ತರಲಿದೆ. ಇವುಗಳ ಮೂಲಕ ಕಾರ್ಪೊರೇಟ್ ಕಂಪನಿಗಳಿಗೆ ರೈತರನ್ನು ಜೀತದಾಳುಗಳನ್ನಾಗಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಇದರ ವಿರುದ್ಧ 125 ದಿನಗಳಿಂದ ದೆಹಲಿಯ ಹೊರವಲಯದಲ್ಲಿ ಹೋರಾಟ ನಡೆದಿದೆ. ದೇಶದ ಯುವ ಜನತೆ ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಜಮೀನು ಕಳೆದುಕೊಂಡು ಪರಿತಪಿಸಬೇಕಾಗಬಹುದು’ ಎಂದು ಎಚ್ಚರಿಸಿದರು.

‘ಮಂಡಿ ಹೊರಗೆ ಬೆಳೆಗಳನ್ನು ಮಾರಾಟ ಮಾಡಬಹುದು ಎಂದು ಇವರು ಹೇಳುತ್ತಿದ್ದಾರೆ. ಈಗಾಗಲೇ ಮಧ್ಯಪ್ರದೇಶ ಹಾಗೂ ಇನ್ನಿತರ ಉತ್ತರ ಭಾರತ ರಾಜ್ಯಗಳಲ್ಲಿ ಮಂಡಿ ಹೊರಗೆ ಮಾರಾಟ ಮಾಡಿದ ರೈತರನ್ನು ಕೆಲವರು ವಂಚಿಸಿದ ಉದಾಹರಣೆಗಳಿವೆ. ರೈತರ ಪರ ಕಾನೂನು ಎನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಈ ಕುರಿತು ಎಲ್ಲಿಯೂ ಮಾತನ್ನಾಡದಿರುವುದು ಇವರ ಷಡ್ಯಂತ್ರವನ್ನು ತಿಳಿಸುತ್ತದೆ’ ಎಂದರು.

‘2021 ಆಂದೋಲನದ ವರ್ಷವಾಗಿದ್ದು, ಈ ವರ್ಷದ ಅಂತ್ಯದ ವರೆಗೂ ಈ ಹೋರಾಟ ಮುಂದುವರೆಯಲಿದೆ. ನಂತರದ ಹೋರಾಟದ ರೂಪುರೇಷೆ ಕುರಿತು ಮುಂದೆ ತಿಳಿಸಲಾಗುವುದು. ಇದಕ್ಕಾಗಿ ದೆಹಲಿಯ ಹೊರವಲಯದಲ್ಲಿ ಮನೆಗಳು ನಿರ್ಮಾಣವಾಗಿವೆ. ನೀರು, ಶೌಚಾಲಯ, ವಿದ್ಯುತ್ ಪ್ರತಿಯೊಂದರ ವ್ಯವಸ್ಥೆಯೂ ಆಗಿದೆ. ಪ್ರತಿ ಗ್ರಾಮದಿಂದ ಒಂದು ಟ್ರ್ಯಾಕ್ಟರ್‌ನೊಂದಿಗೆ 15 ಜನರು ಹತ್ತು ದಿನಗಳ ಕಾಲ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇದೊಂದು ಸುದೀರ್ಘ ಹೋರಾಟವಾಗಿರುವುದರಿಂದ ರೈತರು, ಕಾರ್ಮಿಕರು ಸಜ್ಜಾಗಬೇಕು. ಇಲ್ಲಿ ಜಾತಿ ಹಾಗೂ ಧರ್ಮವನ್ನೂ ಮೀರಿ ರೈತಧರ್ಮವೇ ಶ್ರೇಷ್ಠ ಎಂಬ ಭಾವನೆ ಎಲ್ಲರಲ್ಲೂ ಇರಬೇಕು’ ಎಂದು ಟಿಕಾಯತ್ ಹೇಳಿದರು.

ರೈತ ಮುಖಂಡ ಬಾಬಾಗೌಡ ಪಾಟೀಲ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಕೊಡಿ ಎಂಬುದು ರೈತರ ಬೇಡಿಕೆಯನ್ನು ಸರ್ಕಾರ ಈಡೇರಿಸುತ್ತಿಲ್ಲ. ಆದರೆ ಕಾರ್ಪೊರೇಟ್ ಕಂಪನಿಗಳ ಪರವಾಗಿ ಮೂರು ಕಾಯ್ದೆಗಳನ್ನು ಚರ್ಚೆಯೇ ಇಲ್ಲದೆ ಜಾರಿಗೆ ತಂದಿದೆ. ನೂರಕ್ಕೂ ಹೆಚ್ಚು ದಿನಗಳಿಂದ ಚಳವಳಿ ನಡೆಯುತ್ತಿದ್ದರೂ ಪ್ರಧಾನಿ ಮಾತನಾಡುತ್ತಿಲ್ಲ. ಮಹಾರಾಜರಂತೆ ತಮ್ಮ ನಿವಾಸದಲ್ಲಿ ಕುಳಿತಿರುವ ಪ್ರಧಾನಿಗೆ ರೈತರೊಂದಿಗೆ ಮಾತನಾಡುವುದೆಂದರೆ ಅಸಹ್ಯವೇ?’ ಎಂದು ಪ್ರಶ್ನಿಸಿದರು.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ‘1988ರಲ್ಲಿ ಮಹೇಂದ್ರ ಟಿಕಾಯತ್ ಅವರು ಇಂಥದ್ದೇ ಮಾದರಿಯ ರೈತ ಹೋರಾಟವನ್ನು ಕಟ್ಟಿದವರು. ಇದೀಗ ಕೇಂದ್ರ ಸರ್ಕಾರದ ಮೂರು ಕರಾಳ ಕಾಯ್ದೆಗಳ ವಿರುದ್ಧ ಅವರ ಪುತ್ರ ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ 2ನೇ ಸ್ವಾತಂತ್ರ್ಯ ಸಂಗ್ರಾಮ ಆಗಲಿದೆ’ ಎಂದರು.

ಯುದ್ಧವೀರ ಸಿಂಗ್, ಕೆ.ಟಿ.ಗಂಗಾಧರ್, ಚುಕ್ಕಿ ನಂಜುಂಡಸ್ವಾಮಿ, ಗಂಗಾಧರ ಪಾಟೀಲ ಕುಲಕರ್ಣಿ ಇದ್ದರು.

ಇದಕ್ಕೂ ಮೊದಲು ಡಾ. ಬಿ.ಆರ್.ಅಂಬೇಡ್ಕರ್‌ ಪ್ರತಿಮೆ ಹಾಗೂ ಬಸವೇಶ್ವರರ ಪ್ರತಿಮೆಗೆ ಹೋರಾಟಗಾರರು ಮಾಲಾರ್ಪಣೆ ಮಾಡಿದರು. ರೈತ ಮಹಿಳೆಯರು ಹೋರಾಟಗಾರರಿಗೆ ಆರತಿ ಮಾಡುವ ಮೂಲಕ ಶುಭಕೋರಿದರು. ಧಾರವಾಡದ ಹೋರಾಟಗಾರರ ಪರವಾಗಿ ಚಕ್ಕಡಿಯ ಪ್ರತಿಕೃತಿಯನ್ನು ಟಿಕಾಯತ್ ಅವರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT