ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬರ ಪರಿಹಾರ ಹಣ ಬಿಡುಗಡೆಗೆ ರೈತರ ಆಗ್ರಹ

Published 7 ನವೆಂಬರ್ 2023, 6:01 IST
Last Updated 7 ನವೆಂಬರ್ 2023, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಣ್ಣಿಗೇರಿ, ಕುಂದಗೋಳ ಮತ್ತು ಹುಬ್ಬಳ್ಳಿ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಸೋಮವಾರ ಕೈಗೊಂಡಿದ್ದ ಬರ ಪರಿಸ್ಥಿತಿ ಮತ್ತು ಬರ ಪರಿಹಾರ ಕಾಮಗಾರಿಗಳ ಪರೀಶೀಲನೆಯನ್ನು ಧಾರಾಕಾರ ಮಳೆ ಕಾರಣ ರದ್ದುಪಡಿಸಲಾಯಿತು. 

ಮಧ್ಯಾಹ್ನ ಆರಂಭವಾದ ಮಳೆ ಸಂಜೆವರೆಗೂ ಮುಂದುವರಿಯಿತು. ಹೀಗಾಗಿ ಸಚಿವರು ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ‌ ಗ್ರಾಮ ಪಂಚಾಯಿತಿ‌ ಕಚೇರಿಯಲ್ಲಿ ಸಭೆ ನಡೆಸಿ ರೈತರ ಅಹವಾಲು ಆಲಿಸಿದರು.

2022-23 ನೇ ಸಾಲಿನ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡುವ ಜತೆಗೆ ಪ್ರಸ್ತುತ ವರ್ಷ ಮಧ್ಯಂತರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ರೈತ ಮುಖಂಡ ಟಿ.ಎಸ್.ಚವನಗೌಡರ ಮಾತನಾಡಿ, ‘ಈ ವರ್ಷ ಮುಂಗಾರು, ಹಿಂಗಾರು ಬೆಳೆ ಹಾನಿಯಾಗಿದ್ದರೂ ಈವರೆಗೂ ಬರ ಪರಿಹಾರ ಹಣ ರೈತರಿಗೆ ತಲುಪಿಲ್ಲ. 2022–23ನೇ ಸಾಲಿನಲ್ಲ ಮಧ್ಯಂತರ ಪರಿಹಾರ ನೀಡಿದ್ದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಬೆಳೆ ವಿಮೆ ಹಣ ಪರಿಹಾರ ನೀಡಿಲ್ಲ’ ಎಂದರು.

‘ರೈತರು ಶೇ 10 ಮತ್ತು ಸರ್ಕಾರ ಶೇ 90 ರಷ್ಟು ಬೆಳೆ ಪ್ರೀಮಿಯಂ ತುಂಬುತ್ತಾರೆ. ಆದರೆ ವಿಮಾ‌ ಕಂಪನಿಯವರು ರೈತರಿಗೆ ಶೇ 10ರಷ್ಟು ಮಾತ್ರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿದರು.

ಈ ವರ್ಷ ಮಧ್ಯಂತರ ಪರಿಹಾರಕ್ಕೆ ಮೆಣಸಿನಕಾಯಿ ಬೆಳೆ‌ ಸೇರಿಸಬೇಕು. ಹೆಸರು ಬೆಳೆಯನ್ನು ಇದರಿಂಧ ಕೈಬಿಡಬಾರದು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಅಧಿಕಾರಿಗಳು, ‘ಮುಸುಕಿನ‌ಜೋಳ, ಉಳ್ಳಾಗಡ್ಡಿ, ಭತ್ತ, ಮೆಣಸಿನಕಾಯಿ ಬೆಳೆಗೆ ಮಧ್ಯಂತರ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಪಶು ವೈದ್ಯರಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ವೈದ್ಯರನ್ನು ನಿಯೋಜಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿ, ‘ಪಶು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ತುರ್ತು ಇದ್ದರೆ ರೈತರು 1962 ಸಹಾಯವಾಣಿಗೆ ಕರೆ ಮಾಡಿದರೆ, ಸಂಚಾರಿ ಪಶು ಚಿಕಿತ್ಸಾಲಯ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಲಿದೆ’ ಎಂದರು.

ರೈತ ಕೆಂಚನಗೌಡರ ಮಾತನಾಡಿ, ‘ಜಿಲ್ಲೆಗೆ ಕೇವಲ‌ ₹12 ಕೋಟಿ ಬರ ಪರಿಹಾರ ಮಂಜೂರು ಮಾಡಲಾಗಿದೆ. ಎಲ್ಲ ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಈ ಹಣ ಸಾಕಾಗುವುದಿಲ್ಲ. ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

‘ಕುಸುಗಲ್ಲ ಗ್ರಾಮದಲ್ಲಿ 8 ಸಾವಿರ ಎಕರೆ ಕೃಷಿ ಭೂಮಿ ಇದೆ. ಅದರಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಬಿತ್ತನೆಯಾಗಿತ್ತು. ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಮಾತ್ರ ಗಮನಹರಿಸುತ್ತಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದರು.

‘ಬೆಳೆ ಹಾಳಾಗಿರುವುದರಿಂದ ಒಂದು ಟ್ರ್ಯಾಕ್ಟರ್‌ ಹೊಟ್ಟಿನ ದರ ₹25 ಸಾವಿರದಿಂದ ₹30 ಸಾವಿರ ಆಗಿದೆ. ಇಷ್ಟು ಹಣ ಕೊಟ್ಟು ಮೇವು ಖರೀದಿಸಲು ರೈತರಿಗೆ ಸಾಧ್ಯವಿಲ್ಲ. ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಮೇವು ಬ್ಯಾಂಕ್ ತೆರೆಯಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎನ್‌.ಎಚ್.ಕೋನರಡ್ಡಿ ಮಾತನಾಡಿ, ‘ನಮ್ಮ ಸರ್ಕಾರ ರೈತರ ಪರವಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಚಕ್ಕಡಿ ರಸ್ತೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುವುದು’  ಎಂದರು. 

ಕುಸುಗಲ್ಲ ಗ್ರಾಮದ ಪಶು ಚಿಕಿತ್ಸಾಲಯದ ಆವರಣದಲ್ಲಿ ಏರ್ಪಡಿಸಿದ್ದ ಬರಡು ದನಗಳ ಚಿಕಿತ್ಸಾ ಶಿಬಿರಕ್ಕೆ ಸಚಿವ ಸಂತೋಷ್ ಲಾಡ್‌ ಚಾಲನೆ ನೀಡಿದರು.

ಕುಸುಗಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ನೂಲ್ವಿ, ಉಪಾಧ್ಯಕ್ಷೆ ಗಿರಿಜವ್ವ ಹುಬ್ಬಳ್ಳಿ, ಸದಸ್ಯರಾದ ರಾಜಬೀ ಮಿರ್ಜಾನವರ, ವರ್ಷಾ ನವಲೂರ, ನೀಲವ್ವ ಢಾಲಾಯತರ, ಮಂಜುನಾಥ ಪಟ್ಟಣಶೆಟ್ಟಿ, ಕೆಂಚಪ್ಪ ಶಿವಳ್ಳಿ,  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಾಂತ ಮಂಟೂರ, ಪಶು ವೈಧ್ಯಾಧಿಕಾರಿಗಳಾದ
ಡಾ.ಪಿ.ಬಿ. ಬಣಕಾರ, ಡಾ. ಜಗದೀಶ್ ಮಟ್ಟಿ, ಡಾ. ಉಮೇಶ ತಿರ್ಲಾಪುರ, ಡಾ. ಮನೋಹರ ದ್ಯಾಬೇರಿ ಇದ್ದರು.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬೆಟ್ಟಿಂಗ್ ಜೂಜು ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
ಸಂತೋಷ್ ಲಾಡ್ ಜಿಲ್ಲಾ ಉಸ್ತುವಾರಿ ಸಚಿವ

‘ನನ್ನನ್ನು ಮೆಚ್ಚಿಸಲು ಸಭೆಗೆ ಬರಬೇಡಿ’

‘ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿ ಇಲ್ಲ. ಕೆಲವು ಉದ್ಘಾಟನೆಗೂ ಮುನ್ನವೇ ಹಾಳಾಗಿವೆ‌. ಗ್ರಾಮಗಳಿಗೆ ಹೋದಾಗ ಜನರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ’ ಎಂದು ಸಚಿವ ಸಂತೋಷ್‌ ಲಾಡ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ‘ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಎಷ್ಟು ದೂರುಗಳು ಬಂದಿವೆ. ಅದರಲ್ಲಿ ಎಷ್ಟು ಪರಿಹರಿಸಿದ್ದೀರಿ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಅಧಿಕಾರಿ ಕಲಘಟಗಿ ತಾಲ್ಲೂಕಿಗೆ ಸಂಬಂಧಪಟ್ಟಂತೆ ಮಾತ್ರ ಉತ್ತರ ನೀಡಲು ಮುಂದಾದಾಗ ‘ನನ್ನನ್ನು ಮೆಚ್ಚಿಸಲು ಸಭೆಗೆ ಬರಬೇಡಿ. ಇಡೀ ಜಿಲ್ಲೆಯ ಸಮಗ್ರ ಮಾಹಿತಿ ನೀಡಿ’ ಎಂದು ಹರಿಹಾಯ್ದರು. ‘ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯಿಂದ ಸಹಾಯವಾಣಿ ಆರಂಭಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿಗಳಿಗೆ ಹಸ್ತಾಂತರ ಮಾಡಬೇಕು’ ಎಂದು ಸೂಚಿಸಿದರು. ‘ಯಾವುದೆ ಸಿದ್ಧತೆ ಇಲ್ಲದೆ ಸಭೆ ಬರಬಾರದು. ಕುಡಿಯುವ ನೀರು ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರಿಂದ ದೂರುಗಳು ಬಂದರೆ ನೀವೆ ಹೋಣೆಯಾಗಬೇಕಾಗುತ್ತದೆ’ ಎಂದು ಜಿ.ಪಂ ಸಿಇಒ ಅವರಿಗೆ ಎಚ್ಚರಿಕೆ ನೀಡಿದರು.

‘ಬೇಸಿಗೆ ಆರಂಭವಾದ ನಂತರ ಕುಡಿಯುವ ನೀರಿಗೆ ಸಮಸ್ಯೆಯಾದಾಗ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬದಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯ ಇರುವ ಕಡೆ ಕೊಳವೆಬಾವಿ ಕೊರೆಸಬೇಕು’ ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರ್‌ ರೇಣುಕಾ ಸುಕುಮಾರ ಡಿಸಿಪಿಗಳಾದ ರವೀಶ್ ಸಿ.ಆರ್ ರಾಜೀವ್ ಎಂ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಕಲಗೌಡ ಪಾಟೀಲ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ ನಾಶಿ  ಇದ್ದರು.

130 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಧ್ಯತೆ

‘ಜಿಲ್ಲೆಯಲ್ಲಿ 390 ಗ್ರಾಮಗಳಿದ್ದು 130 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಪರಿಸ್ಥಿತಿ ಇಲ್ಲ’ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕುಡಿಯುವ ನೀರು ಮತ್ತು ಬರ ನಿರ್ವಹಣೆಗೆ ಸಂಬಂಧಿಸಿದಂತೆ ಆಯಾ ತಾಲ್ಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಲಾಗಿದೆ. ಕುಡಿಯುವ ನೀರು ಮೇವು ಇನ್ನಿತರ ಸಮಸ್ಯೆಗಳ ಬಗ್ಗೆ ನವೆಂಬರ್ 18ರಂದು ತಹಶೀಲ್ದಾರ್‌ಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಅಧಿಕಾರಿಗಳ ಸಭೆ ಕರೆಯಲಾಗಿದೆ’ ಎಂದರು.

‘ಏಪ್ರಿಲ್–ಮೇ ವರೆಗೆ ಜಿಲ್ಲೆಯಲ್ಲಿ 3.50 ಲಕ್ಷ ಟನ್ ಮೇವು ಬೇಕಾಗುತ್ತದೆ. ಸದ್ಯ ಮೇವಿನ ಕೊರತೆ ಇಲ್ಲ. ಅಗತ್ಯ ಬಿದ್ದರೆ ಮೇವು ಬ್ಯಾಂಕ್ ಆರಂಭಿಸಲಾಗುವುದು’ ಎಂದು ಹೇಳಿದರು. ‘ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆಯಾಗಿದ್ದು ಅದರಲ್ಲಿ 2.11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ₹212 ಕೋಟಿ ಬೆಳೆ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು. ‘ಮಲಪ್ರಭಾ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು ನವಲಗುಂದ ಅಣ್ಣಿಗೇರಿ ಕುಂದಗೋಳ ತಾಲ್ಲೂಕುಗಳ ಕೆರೆಗಳನ್ನು ತುಂಬಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT