ಶುಕ್ರವಾರ, ಜನವರಿ 27, 2023
26 °C
ಜಾನಪದ ಸಂಸ್ಕೃತಿ, ದೇಶಿ ಕ್ರೀಡೆಗಳ ನಾಲ್ಕನೇ ಸಮ್ಮೇಳನಕ್ಕೆ ಸಂಭ್ರಮದ ಚಾಲನೆ

ಜಾನಪದ ಕಲೆ, ಸಂಸ್ಕಾರ ಉಳಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನೀವು ಎಷ್ಟೇ ಆಸ್ತಿ ಮಾಡಿದರೂ ಉಳಿಯುವುದಿಲ್ಲ. ನಮ್ಮ ಮಕ್ಕಳಿಗೆ ಕಲಿಸುವ ಸಂಸ್ಕೃತಿ, ಸಂಸ್ಕಾರಗಳೇ ನಮ್ಮ ದೊಡ್ಡ ಆಸ್ತಿ. ಸಂಸ್ಕಾರಕ್ಕೆ ಜಾನಪದ ಲೋಕದ ಕೊಡುಗೆ ಅಪಾರವಾಗಿದ್ದು, ಅದನ್ನು ಬೆಳೆಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ನಮ್ಮಲ್ಲರ ಮೇಲಿದೆ’ ಎಂದು ಜಾನಪದ ಸಂಸ್ಕೃತಿ, ದೇಶಿ ಕ್ರೀಡೆಗಳ ಸಮ್ಮೇಳನಾಧ್ಯಕ್ಷೆ ಪಾರ್ವತೆವ್ವ ಸಿದ್ದಪ್ಪ ಹೊಂಗಲ್‌ ಹೇಳಿದರು.

ವಿಶ್ವ ಕನ್ನಡ ಬಳಗ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ‘ನನಗೆ ಅಷ್ಟೊಂದು ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಆದರೆ ಹಗಲಿರುಳು ಹಾಡು ಎಂದರೆ ಹಾಡುತ್ತೇನೆ. ಜಾನಪದ ಹಾಡುಗಳ ನಂಟು ನನ್ನಲ್ಲಿ ಅಷ್ಟೊಂದು ಮಿಳಿತವಾಗಿದೆ. ಮಕ್ಕಳಿಗೆ ಊಟ ಮಾಡಿಸುವಾಗ, ಮಲಗಿಸುವಾಗ ಹಾಡುಗಳನ್ನು ಹಾಡಿದರೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ’ ಎಂದರು.

ಸೊಗಸಾದ ಹಾಡುಗಳ ಮೂಲಕ ಮನಗೆದ್ದ ಪಾರ್ವತೆವ್ವ‌ ‘ಲಕ್ಷಣವಾಗಿ ಸೀರೆ ಉಟ್ಟು, ಹಣೆಯಲ್ಲಿ ಕುಂಕುಮ ಹಚ್ಚಿಕೊಂಡು ಜಗತ್ತಿನಲ್ಲಿ ಎಲ್ಲಿಗೆ ಹೋದರೂ ಭಾರತೀಯ ನಾರಿ ಎಂದು ನಮ್ಮನ್ನು ಗುರುತಿಸುತ್ತಾರೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಅಷ್ಟೊಂದು ದೊಡ್ಡ ಶಕ್ತಿಯಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ‘ವಿಶ್ವ ಕನ್ನಡ ಬಳಗ ನಿರಂತರವಾಗಿ ಕನ್ನಡ ಪ್ರೇಮ ಬೆಳೆಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕಡ್ಡಾಯ ಮಾಡುವ ನಿಯಮವನ್ನು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರಲಾಗುವುದು. ವ್ಯವಹಾರದ ದೃಷ್ಟಿಯಿಂದ ಇಂಗ್ಲಿಷ್‌ ಕಲಿತರೂ, ಕನ್ನಡ ಕಲಿಕೆಗೆ ಆದ್ಯತೆ ಇರಲಿ’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ‘ಸರ್ಕಾರ ಮಾಡಬೇಕಾದ ಕೆಲಸವನ್ನು ವಿಶ್ವ ಕನ್ನಡ ಬಳಗ ಮಾಡುತ್ತಿದೆ. ವಿಶಾಲ ಹೃದಯದ ಕನ್ನಡಿಗರು ನಮ್ಮ ಎದುರಿನವರಿಗೆ ಗೊತ್ತಿರುವ ಭಾಷೆಯಲ್ಲೇ ಮಾತನಾಡುತ್ತಾರೆ. ಅದೇ ತಮಿಳುನಾಡಿನಲ್ಲಿ ನಾವು ಯಾವ ಭಾಷೆಯಲ್ಲಿಯೇ ಮಾತನಾಡಿದರೂ ಅವರು ತಮಿಳಿನಲ್ಲಿಯೇ ಉತ್ತರ ಕೊಡುತ್ತಾರೆ’ ಎಂದು ಕನ್ನಡಕ್ಕೆ ಎದುರಾದ ಸ್ಥಿತಿಯನ್ನು ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಜಾನಪದ ಹಾಡುಗಳು ಹಾಗೂ ನೃತ್ಯ ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಕಾರಣವಾಯಿತು.

ಕನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷ ಸದಾಶಿವ ಎಸ್‌. ಚೌಶೆಟ್ಟಿ, ಶಾಂತಿ ನಿಕೇತನ ಶಾಲೆಯ ಪ್ರಾಚಾರ್ಯ ಕ್ಯಾಥರಿನ್‌ ದಿನೇಶ, ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವಿ.ಎಲ್‌. ಪಾಟೀಲ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾವುಕಾರ, ಶಂಕರ ಸಿ. ಪಾಟೀಲ, ಗುರುನಾಥ ಮಟ್ಟಿ, ಸಾವಿತ್ರಿ ಬಡಿಗೇರ, ನಿರ್ಮಲಾ, ಅಮಿತ್ ಮಹಾಜನ ಪಾಲ್ಗೊಂಡಿದ್ದರು.

‘ಕೆಲಸ ಮಾಡಿಯೂ ಅನುದಾನ ಬೇಡವೇ’
ಕನ್ನಡ ಕೆಲಸವನ್ನೇ ಮಾಡದಿದ್ದರೂ ಸರ್ಕಾರದ ಅನುದಾನ ಪಡೆಯಲು ಸಾಕಷ್ಟು ಸಂಸ್ಥೆಗಳು ಮುಗಿಬೀಳುತ್ತವೆ. ಈ ಅನುದಾನ ಬೆಂಗಳೂರು ಹಾಗೂ ಮೈಸೂರು ದಾಟಿ ಹೊರಗೆ ಬರುವುದೇ ಇಲ್ಲ. ಕನ್ನಡದ ಕೆಲಸ ಮಾಡಿಯೂ ನೀವು ಸರ್ಕಾರದ ಅನುದಾನ ಪಡೆಯದೇ ಇರುವುದು ಸರಿಯಲ್ಲ. ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಹೊರಟ್ಟಿ ಅವರು ಸಂಘಟಕರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು