ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Deepavali 2023 | ಈ ಬಾರಿ ಹಚ್ಚಿರಿ ‘ಹಸಿರು ಪಟಾಕಿ’...

ಹಸಿರು ಪಟಾಕಿಗಳು ಶೇ 30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕ
Published 12 ನವೆಂಬರ್ 2023, 6:01 IST
Last Updated 12 ನವೆಂಬರ್ 2023, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಸಮೀಪಿಸಿದೆ. ಈ ಬಾರಿ ಕಿವಿಗಡ ಚಿಕ್ಕುವ ಪಟಾಕಿಗಳ ಅಬ್ಬರದ ಬದಲಿಗೆ ‘ಹಸಿರು ಪಟಾಕಿ’ಗಳು ಸದ್ದು ಮಾಡಲಿವೆ. ಹೆಚ್ಚು ಶಬ್ದಮಾಡುವ, ಮಾಲಿನ್ಯಕಾರಕ ಪಟಾಕಿಗಳನ್ನು ಸರ್ಕಾರ ಈ ಬಾರಿ ನಿಷೇಧಿಸಿದೆ. 

ಸಿಡಿದ ಬಳಿಕ ಕಡಿಮೆ ಪ್ರಮಾಣದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೆಡ್ ಹೊರಚೆಲ್ಲುವ ಪಟಾಕಿಗಳನ್ನು ‘ಹಸಿರು ಪಟಾಕಿ’ ಎಂದು ಪರಿಗಣಿಸಲಾಗುತ್ತದೆ. ಅವು ಕಡಿಮೆ ಬೆಳಕು ಮತ್ತು ಶಬ್ದ ಹೊರಸೂಸುತ್ತವೆ.

ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಇವೆರಡೂ ಮಾಲಿನ್ಯಕಾರಕವೇ. ಆದರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ 30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕ.  ಅಲ್ಲದೇ ಬೇರಿಯಮ್ ನೈಟ್ರೇಟ್‌ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ. ಸಾಮಾನ್ಯ ಪಟಾಕಿಗಳಂತೆ ದೊಡ್ಡ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ಸೌಮ್ಯವಾಗಿರುತ್ತವೆ. 

ಹಾವೇರಿ ತಾಲ್ಲೂಕು ಆಲದಕಟ್ಟಿ ಗ್ರಾಮದ ಸಾತೇನಹಳ್ಳಿ ಬಳಿ ಪಟಾಕಿ ಗೋದಾಮಿನಲ್ಲಿ ಲೋಡ್‌ಗಟ್ಟಲೆ ಪಟಾಕಿಗೆ ಬೆಂಕಿ ಬಿದ್ದು ನಾಲ್ವರು ಸಾವನ್ನಪ್ಪಿದ್ದ ಘಟನೆಯಾಗಲಿ, ನಂತರ  ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಎರಡು ತಿಂಗಳ ಹಿಂದೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 14 ಮಂದಿ ಮೃತಪಟ್ಟ ಘಟನೆಗಳನ್ನೆಲ್ಲ ಗಮನಿಸಿದ ರಾಜ್ಯ ಸರ್ಕಾರ ಪಟಾಕಿ ನಿಷೇಧಕ್ಕೆ ಮುಂದಾಗಿದೆ.

‘ಇನ್ನು ಮುಂದೆ ರಾಜಕೀಯ ಸಮಾವೇಶ, ಮದುವೆ, ಹಬ್ಬ, ಶುಭ ಸಮಾರಂಭಗಳಲ್ಲೂ ಅಪಾಯಕಾರಿ ಪಟಾಕಿಗಳ ಬದಲು ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ’ ಎಂದು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಂಪುಟ ಸಭೆಯಲ್ಲಿಯೇ ತಿಳಿಸಿದ್ದಾರೆ.

ಸಮಯ ನಿಗದಿ:

ಪಟಾಕಿಗಳನ್ನು ರಾತ್ರಿ 8 ರಿಂದ 10ರವರೆಗೆ ಮಾತ್ರ ಸಿಡಿಸಬೇಕು. ಪಟಾಕಿ ಮಾರಾಟಗಾರರು ಹಸಿರು ಪಟಾಕಿಯಲ್ಲದೇ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಆರೋಗ್ಯಕ್ಕೂ ಹಾನಿ...:

ದೀಪಾವಳಿ ಸಮಯದಲ್ಲಿ ಪಟಾಕಿ, ಸುಡುಮದ್ದು, ರಾಕೆಟ್‌ಗಳಿಂದ ಶಬ್ದ ಮಾಲಿನ್ಯ ಮಾತ್ರವಲ್ಲ ಆರೋಗ್ಯದ ಮೇಲೆಯೂ ಕೆಟ್ಟ ಬೀರುತ್ತದೆ. ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿಮಾಡಿಕೊಂಡು ಹತ್ತಾರು ಪ್ರಕರಣಗಳು ನಗರದ ಕಣ್ಣಿನ ಆಸ್ಪತ್ರೆಗಳಲ್ಲಿ ದಾಖಲಾಗುತ್ತವೆ. ಸಣ್ಣಪುಟ್ಟ ಪ್ರಕರಣಗಳು ದುಪ್ಪಟ್ಟು. ಪಟಾಕಿಯಿಂದ ಕಣ್ಣುಗಳಿಗೆ ಹಾನಿಯಾದಲ್ಲಿ ‘ಸ್ವಯಂ ಚಿಕಿತ್ಸೆ’ ಮಾಡಿಕೊಳ್ಳದೇ ಸಮೀಪದ ನೇತ್ರತಜ್ಞರನ್ನು ಕಂಡು ಪರಿಹಾರ ಪಡೆಯಬೇಕು ಎನ್ನುತ್ತಾರೆ ನೇತ್ರತಜ್ಞರು.

ಹಸಿರು ಪಟಾಕಿಗಳು ಹೀಗಿರುತ್ತವೆ...

ಬೀದಿ ಬದಿಯಲ್ಲಿ ಮಾರಾಟ ಮಾಡುವ ಎಲ್ಲ ಪಟಾಕಿಗಳೂ ಹಸಿರು ಪಟಾಕಿಗಳಲ್ಲ. ಹಸಿರು ಪಟಾಕಿ ಅಂತ ಲೇಬಲ್ ಹಾಕಿಕೊಂಡು ಮಾಮೂಲಿ ಪಟಾಕಿ ಮಾರಾಟ ಮಾಡುವ ಅವಕಾಶವೂ ಇದೆ. ಹೀಗಾಗಿ, ಜನರು ಅಧಿಕೃತ ಮಾರಾಟಗಾರರಿಂದ ಮಾತ್ರ ‘ಹಸಿರು ಪಟಾಕಿ’ ಖರೀದಿ ಮಾಡಬೇಕು.

‘ಪರಿಸರಸ್ನೇಹಿ’ ಎಂಬ ಕಾರಣಕ್ಕೆ ಇವುಗಳನ್ನು ‘ಹಸಿರು ಪಟಾಕಿ’  ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯ ಪಟಾಕಿಗಿಂತ ಶೇ 30ರಷ್ಟು ಕಡಿಮೆ ಮಾಲಿನ್ಯ ಉಂಟುಮಾಡುತ್ತವೆ. ಸಾಮಾನ್ಯ ಪಟಾಕಿ 175 ಡೆಸಿಬಲ್‌ಗೂ ಅಧಿಕ ಶಬ್ದಮಾಲಿನ್ಯ ಉಂಟು ಮಾಡಿದರೆ, ಇವು ಗರಿಷ್ಠ 120 ಡೆಸಿಬಲ್‌ ಶಬ್ದವನ್ನು ಮಾತ್ರ ಉಂಟುಮಾಡುತ್ತವೆ. 

ಹಸಿರು ಪಟಾಕಿ ತಯಾರಿಕೆಗೆ ಲಿಥಿಯಂ, ಟೈಟಾನಿಯಂ, ಅಲ್ಯುಮಿನಿಯಂ, ಥೋರಿಯಂ, ಸ್ಟ್ರಾನ್ಸಿಯಂ, ಸೀಸದಂತಹ ಭಾರಲೋಹ ಬಳಸುವುದಿಲ್ಲ. ಹಾಗಾಗಿ ಇವು ಹೊರಸೂಸುವ ರಾಸಾಯನಿಕಗಳಿಂದ ಹಾನಿಯ ಪ್ರಮಾಣ ಕಡಿಮೆ. ಇವುಗಳಿಂದ ಉತ್ಪತ್ತಿಯಾಗುವ ಬೂದಿಯೂ ತೀರಾ ಕಡಿಮೆ.

ಹಸಿರು ಪಟಾಕಿಗಳಿಗಾಗಿ ಸರ್ಕಾರವೇ ಮಾರ್ಗಸೂಚಿ ಹೊರಡಿಸಿದೆ. ಹಸಿರು ಪಟಾಕಿಗಳ ಪೊಟ್ಟಣದಲ್ಲಿ ಸಿಎಸ್‌ಐಆರ್‌- ನ್ಯಾಷನಲ್‌ ಎನ್ವಿರಾನ್‌ಮೆಂಟಲ್‌ ಎಂಜಿನಿಯರಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಲಾಂಛನ ಮತ್ತು ಕ್ಯೂ.ಆರ್‌ ಕೋಡ್‌ ಇರುತ್ತವೆ. ಈ ಕೋಡ್ ಸ್ಕ್ಯಾನ್ ಮಾಡಿದರೆ ಇದು ಹಸಿರು ಪಟಾಕಿಯೋ ಅಲ್ಲವೋ ಎಂದು ಗುರುತಿಸಬಹುದು.

* ಮಾಲಿನ್ಯಕಾರಕ ಹೊಗೆ ಸೂಸುವ ಪ್ರಮಾಣ ಅತಿ ಕಡಿಮೆ * ಹಸಿರು ಪಟಾಕಿ ತಯಾರಿಕೆಗೆ ಕಡಿಮೆ ಕಚ್ಚಾವಸ್ತುಗಳನ್ನು ಬಳಸಲಾಗುತ್ತದೆ *ಪಟಾಕಿಗಳ ಗಾತ್ರವೂ ಚಿಕ್ಕದು, ಸಣ್ಣ ಸದ್ದಿನೊಂದಿಗೆ ಸಿಡಿಯುತ್ತದೆ. *ಸಾಮಾನ್ಯ ಪಟಾಕಿಗಳಲ್ಲಿರುವಂತಹ ಅಪಾಯಕಾರಿ ರಾಸಾಯನಿಕ ಅಂಶಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ * ಅಧಿಕ ಶಬ್ದ ಮತ್ತು ಹೊಗೆಯ ಬದಲಿಗೆ ನೀರಿನ ಆವಿಯನ್ನು ಬಿಡುಗಡೆ ಮಾಡುತ್ತವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT