ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಹಬಾಳ್ವೆ ಸಾರುವ ದಾಂಡಿಯಾ

ಅಂಬಾ, ದುರ್ಗಾ ದೇವಿಯ ಸ್ಮರಣೆ; ಕಳೆಗಟ್ಟುವ ವೇದಿಕೆಗಳು
Last Updated 29 ಸೆಪ್ಟೆಂಬರ್ 2022, 2:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನವರಾತ್ರಿಯ ಎಲ್ಲ ದಿನಗಳಲ್ಲೂ ಎದ್ದು ಕಾಣುವಂಥದ್ದು ದಾಂಡಿಯಾ ನೃತ್ಯ. ಇತ್ತೀಚಿನ ವರ್ಷಗಳಲ್ಲಿ ಇದು ಎಲ್ಲೆಡೆಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ಧಾರವಾಡ ಜಿಲ್ಲೆಯಲ್ಲಿಯೂ ಗುಜರಾತಿ, ಸಾವಜಿ, ಜೈನ್‌, ಅಗರ್‌ವಾಲ್ಸ್‌ ಸಮುದಾಯಗಳಷ್ಟೆ ಅಲ್ಲದೇ ಎಲ್ಲ ಸಮುದಾಯದವರೂ ಈ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ.ಸಹಬಾಳ್ವೆ, ಸಮಾನತೆಯನ್ನು ಪ್ರತಿನಿಧಿಸುವ ಈ ನೃತ್ಯಕ್ಕೆ ಅಲ್ಲಲ್ಲಿ ಅಪಾರ ಪ್ರಮಾಣದಲ್ಲಿ ವ್ಯಾಪಕವಾಗಿ ಆಯೋಜನೆಗೊಂಡಿರುವ ದಾಂಡಿಯಾ ರಾಸ್‌ ಕಾರ್ಯಕ್ರಮಗಳೇ ಸಾಕ್ಷಿ.

ಹಿನ್ನೆಲೆ: ಗುಜರಾತ್‍ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ ದಾಂಡಿಯಾ. ಇದು ಕೃಷ್ಣನಿಂದ ವೃಂದಾವನದಲ್ಲಿ ಹುಟ್ಟಿಕೊಂಡಿತು. ಅಲ್ಲಿ ಹೋಳಿ, ಕೃಷ್ಣ ಹಾಗೂ ರಾಧೆಯರ ಲೀಲೆಯನ್ನು ಚಿತ್ರಿಸಿ ಇದನ್ನು ಆಡಲಾಗುತ್ತಿತ್ತು. ಇದು ಪಶ್ಚಿಮ ಭಾರತದಲ್ಲಿ ನಡೆಯುವ ನವರಾತ್ರಿ ಸಂಜೆಗಳ ವೈಶಿಷ್ಟ್ಯಪೂರ್ಣ ನೃತ್ಯವೂ ಹೌದು ಎನ್ನಲಾಗಿದೆ.

ದುರ್ಗಾದೇವಿಯ ಆರಾಧನೆ: ದಾಂಡಿಯಾ ರಾಸ್‌ ಮೂಲಕ ನಡೆಯುವುದು ದುರ್ಗಾದೇವಿಯ ಆರಾಧನೆ. ದುರ್ಗಾದೇವಿ ಮತ್ತು ಮಹಿಷಾಸುರನ ನಡುವೆ ನಡೆಯುವ ಯುದ್ಧದ ದೃಶ್ಯಗಳು ನೃತ್ಯ ರೂಪದಲ್ಲಿ ವ್ಯಕ್ತವಾಗುತ್ತವೆ. ನವರಾತ್ರಿಯ ಸಂಭ್ರಮವನ್ನು ಇಮ್ಮಡಿಗೊಳಿಸಲು ವರ್ಣಮಯ ನೃತ್ಯ, ಕೆಲವೆಡೆ ಸ್ಪರ್ಧೆಗಳೂ ಆಯೋಜನೆಗೊಳ್ಳುತ್ತಿವೆ.

ಕೋಲಾಟವೇ ಪ್ರಧಾನ: ಗುಂಪು ನೃತ್ಯವೇ ದಾಂಡಿಯಾದಲ್ಲಿ ಪ್ರಧಾನ. ಗಾರ್ಭಾ ನೃತ್ಯ ದೇವಿ ಪೂಜೆಯ ಮೊದಲು ನಡೆದರೆ ದಾಂಡಿಯಾ ನಂತರ ನಡೆಯುತ್ತದೆ. ಗಾರ್ಭಾ ನೃತ್ಯಕ್ಕೆ ಕೋಲಿನ ಅವಶ್ಯಕತೆ ಇಲ್ಲ. ದಾಂಡಿಯಾದಲ್ಲಿ ಕೋಲಾಟವೇ ಪ್ರಧಾನ.ಅಲಂಕೃತ ಕೋಲುಗಳು ದುರ್ಗೆ ಮತ್ತು ಮಹಿಷಾಸುರನ ಖಡ್ಗವನ್ನು ಪ್ರತಿನಿಧಿಸುತ್ತವೆ. ಅದಕ್ಕಾಗಿಯೇ ಇದನ್ನು ಖಡ್ಗ ನೃತ್ಯ ಎಂದೂ ಕರೆಯುತ್ತಾರೆ. ಹೆಚ್ಚಾಗಿ ಮಹಿಳೆಯರೇ ಭಾಗವಹಿಸುತ್ತಿದ್ದ ಈ ನೃತ್ಯದಲ್ಲಿ ಪುರುಷರೂ ಸೇರಿ ದುರ್ಗೆಯ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

‘ದಾಂಡಿಯಾ ಆಡುವಾಗ ಇರಲಿ ಜಾಗೃತಿ’

‘ದಾಂಡಿಯಾ ಆಡುವಾಗ ಕಣ್ಣು, ಕೈ, ಕಾಲುಗಳ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು.ನೃತ್ಯಕ್ಕೆ ಹೋಗುವ ಮುನ್ನ ಹೊಟ್ಟೆ ಭಾರ ಎನಿಸುವಂಥ ಆಹಾರ ತಿನ್ನಬೇಡಿ. ಸ್ಪರ್ಧೆಗಳಲ್ಲಿ ಭಾಗವಹಿಸುವವರು, ನಿಮ್ಮ ನೃತ್ಯದ ಮೇಲೆಯೇ ಗಮನವಿರುವಂತೆ ನೋಡಿಕೊಳ್ಳಿ. ಉಡುಗೆಯ ಮೇಲೆ ಗಮನವಿದ್ದರೆ ಡಿಸ್‌ಕ್ವಾಲಿಫೈ ಆಗುವ ಸಾಧ್ಯತೆಗಳಿರುತ್ತವೆ’ ಎಂದು ದಾಂಡಿಯಾ ನೃತ್ಯಗಾರ್ತಿ ಹುಬ್ಬಳ್ಳಿಯ ಶೀತಲ್‌ ಎಲ್‌. ಸಲಹೆ ನೀಡಿದರು.

‘ಮಹಿಳೆಯರು ಘಾಗರಾ ಚೋಲಿ ಧರಿಸಿ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಾರೆ. ಗ್ಲಾಸ್‌ವರ್ಕ್‌, ಎಂಬ್ರಾಯ್ಡರಿ, ಕುಂದನ್‌, ಕುಸುರಿ ಕಲೆಗಳಿಂದಾದ, ಪ್ಯಾಚ್‌ವರ್ಕ್‌ ದಿರುಸುಗಳಿಗೆ ಹೆಚ್ಚು ಬೇಡಿಕೆ ಇದೆ. ಆಕ್ಸಿಡೈಸ್‌ ಸಿಲ್ವರ್‌, ಕುಂದನ್‌, ಮುತ್ತಿನ ಆಭರಣಗಳು ಹೆಚ್ಚಾಗಿ ಬಳಕೆಯಲ್ಲಿವೆ. ಪುರುಷರು ಅಂಬ್ರೆಲಾ ಕಟ್‌ ಕುರ್ತಾ, ಧೋತಿ, ಪೈಜಾಮಾಗಳಿಗೆ ತಕ್ಕಂತೆ ಆಕ್ಸಿಡೈಸ್‌ ಆಭರಣಗಳನ್ನು ಧರಿಸಬಹುದು’ ಎಂದು ತಿಳಿಸಿದರು.

‘ಮೇಕಪ್‌ ಬಗ್ಗೆ ಕಾಳಜಿ ಇರಲಿ’

‘ನೃತ್ಯ ಕಾರ್ಯಕ್ರಮ ರಾತ್ರಿಯೇ ನಡೆಯುವುದರಿಂದ ಮುಖದ ಮೇಕಪ್‌ ಬಗ್ಗೆ ಹೆಚ್ಚು ಕಾಳಜಿ ಇರಲಿ. ವಾಟರ್‌ ಪ್ರೂಫ್‌, ಮ್ಯಾಟ್‌ ಫಿನಿಷಿಂಗ್‌, ಲಾಂಗ್‌ ಲಾಸ್ಟಿಂಗ್‌, ಗ್ಲೋಸಿ, ಸೆಟಲ್ಡ್‌ ಮೇಕಪ್‌ಗೆ ಆದ್ಯತೆ ನೀಡಿ’ ಎಂದು ಹುಬ್ಬಳ್ಳಿಯ ಬ್ಯೂಟಿಷಿಯನ್‌ ಶೋಭಾ ಲಾಲ್ಗೆ ಮಾಹಿತಿ ನೀಡಿದರು.

‘ಹೆಚ್ಚು ಭಾರವಲ್ಲದ ಕೇಶಾಲಂಕಾರವಿರಲಿ. ಮೆಸ್ಸಿ ಬನ್, ಫ್ರೀ ಕೇರ್‌ ಸ್ಟೈಲ್‌, ಸಾಗರ್‌ ಜಡೆಗೆ ಆದ್ಯತೆ ನೀಡಬಹುದು. ಹೈಹಿಲ್ಡ್‌ ಚಪ್ಪಲಿಗಳನ್ನು ಧರಿಸಬೇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT