ಹುಬ್ಬಳ್ಳಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ, ಶೀಘ್ರದಲ್ಲಿ ವಾರ್ಡ್ ಸಮಿತಿ ರಚನೆ ಮಾಡಿ, ಅನಧಿಕೃತ ಕಟ್ಟಡ ನಿರ್ಮಾಣ ತಡೆಯಿರಿ, ಮೊರಾರ್ಜಿ ಶಾಲೆಯಲ್ಲಿ ಪ್ರವೇಶ ಕೊಡಿಸಿ, ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ...
–ಇವು ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾದ ಅಹವಾಲುಗಳು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಗೆ ಸಂಬಂಧಿಸಿದ 27, ಕಂದಾಯ ಇಲಾಖೆ–30, ಜಿಲ್ಲಾ ಪಂಚಾಯಿತಿ –29, ಹೆಸ್ಕಾಂ– 3 ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 25 ಅರ್ಜಿಗಳು ಸೇರಿದಂತೆ ಒಟ್ಟು 113 ಅರ್ಜಿಗಳು ಸಲ್ಲಿಕೆಯಾದವು.
ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗದ ಮುಖಂಡರು ಮಾತನಾಡಿ, ವಾರ್ಡ್ ಸಮಿತಿ ರಚನೆ ನನೆಗುದಿದೆ ಬಿದ್ದಿದೆ. ಈಗ ಮೂರನೇ ಬಾರಿಗೆ ಅರ್ಜಿ ಕರೆಯಲಾಗಿದೆ. ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುವಂತೆ ಪಾಲಿಕೆಯಿಂದ ಯಾವುದೇ ಪ್ರಚಾರ ನಡೆಸುತ್ತಿಲ್ಲ ಎಂದು ದೂರಿದರು.
ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ನಿಯಮದ ಪ್ರಕಾರ ಪ್ರತಿ ವಾರ್ಡ್‌ಗೆ ಒಂದರಂತೆ 82 ವಾರ್ಡ್‌ಗಳಿಂದ ಕನಿಷ್ಠ 800 ಅರ್ಜಿಗಳಾದರೂ ಬರಬೇಕು. ಅಷ್ಟು ಅರ್ಜಿಗಳು ಬಾರದ ಕಾರಣ ಈ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿ, ಕೋರಂ ಇರುವ ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿ ರಚಿಸಬಹುದೇ ಎಂಬ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸೂಚಿಸಿದರು.
545 ಪಿಎಸ್ಐಗಳ ನೇಮಕಾತಿಗೆ ನಡೆದ ಮರು ಪರೀಕ್ಷೆ ಬರೆದ ಅಭ್ಯರ್ಥಿಗಳು, ‘ಪರೀಕ್ಷೆ ನಡೆದು 10 ತಿಂಗಳಾಗಿದ್ದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಮಾರ್ಚ್‌ನಲ್ಲಿ ಸ್ಕೋರ್ ಲೀಸ್ಟ್ ಸಹ ಪ್ರಕಟಿಸಲಾಗಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಮೂರು ಬಾರಿ ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದರು.
‘ಸೆ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಸಂತೋಷ್ ಲಾಡ್ ಭರವಸೆ ನೀಡಿದರು.
ಮೊರಾರ್ಜಿ ವಸತಿ ಶಾಲೆ ಪ್ರವೇಶಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಿದ ರಾಯನಾಳದ ಬಾಲಕಿಗೆ ಪ್ರವೇಶ ಕೊಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸಚಿವರು ಸೂಚಿಸಿದರು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ಅಶೋಕ ಕುನ್ನೂರು ಮಾತನಾಡಿ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಎದುರಿನ ಕೈಗಾರಿಕೆ ಪ್ರದೇಶದ 120 ಎಕರೆಯಲ್ಲಿ 70 ಎಕರೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ, ತೆರಿಗೆ ಕಟ್ಟಲಾಗುತ್ತಿದೆ. ಆದರೂ ಸೌಕರ್ಯ ಕಲ್ಪಿಸಿಲ್ಲ. ಸ್ವಚ್ಛತೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
‘ಇನ್ನುಳಿದ 50 ಎಕರೆಯನ್ನು ಪಾಲಿಕೆಗೆ ಹಸ್ತಾಂತರಿಸಿಲ್ಲ. ಆದರೂ ಸೇವಾ ಶುಲ್ಕ ಕಟ್ಟಲಾಗುತ್ತಿದೆ. ಈ ನಡುವೆ ತೆರಿಗೆ ಕಟ್ಟುವಂತೆ ಉದ್ಯಮಿಗಳಿಗೆ ನೋಟಿಸ್ ನೀಡಿರುವುದು ಸರಿಯಲ್ಲ’ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲ ಎಂಬ ಅರ್ಜಿಗೆ ಸಂಬಂಧಿಸಿ, ಶೀಘ್ರ ಸಮಸ್ಯೆ ಪರಿಹರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಭಂಡಿವಾಡ ಗ್ರಾಮದ ಖಾಸಗಿ ಜಮೀನಿನಲ್ಲಿ ವಾಸ ಮಾಡುತ್ತಿರುವ ಜನರನ್ನು ಸಹ ಉಪ ಕಂದಾಯ ಗ್ರಾಮಕ್ಕೆ ಸೇರಿಸಬೇಕು ಎಂದು ಗ್ರಾಮಸ್ಥರು, ಮನೆಗಳಲ್ಲಿರುವ ಕೈ ಮಗ್ಗಗಳಿಗೆ ತೆರಿಗೆ ಸರಳೀಕರಣಗೊಳಿಸಬೇಕು ಎಂದು ನೇಕಾರ ನಗರದ ನೇಕಾರರು ಮತ್ತು ಹಿರೇಗುಂಜಳ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಬೇಕು ಗ್ರಾಮಸ್ಥರು ಮನವಿ ಸಲ್ಲಿಸದರು.
ಬುಡರಸಿಂಗಿಯ ಬೀರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಪಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಮಾತನಾಡಿ, ಜನತಾದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‌ಎಸ್‌ನಲ್ಲಿ ದಾಖಲಿಸಿ, 30 ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗಳು ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಗಿದೆ ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ, ಮೇಯರ್ ರಾಮಪ್ಪ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಇದ್ದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು.
ಹುಬ್ಬಳ್ಳಿ– ‘ಧಾರವಾಡದಲ್ಲಿ ಕೆಲವು ನಿವೇಶನಗಳಿಗೆ ದಾಖಲೆ ಇಲ್ಲ. ಅಲ್ಲದೆ ಅನಧಿಕೃತ ಬಡಾವಣೆಗಳು ಹೆಚ್ಚು ಇವೆ. ಕೆಲವು ಬಡಾವಣೆಗಳ ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ಎಲ್ಲವುಗಳನ್ನು ಪರಿಶೀಲಿಸಿ ಅನಧಿಕೃತ ಲೇಔಟ್ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ‘ಕೆಲವು ಬಡಾವಣೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ₹200 ಕೋಟಿ ಅನುದಾನದಲ್ಲಿ ರಸ್ತೆ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದರು. ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಹರಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಂಪರ್ಕಕ್ಕೆ ಮನವಿ
ಭಾರತಿನಗರದ 100ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ನಿವಾಸಿಗಳು ಅಲೆಕ್ಸ್ ಗುರ್ಸನ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು. ‘ಹಲವು ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಐದು ವರ್ಷಗಳಿಂದ ಕುಡಿಯುವ ನೀರಿಗಾಗಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿಗಳು ಹೇಳಿದರು. ಈ ವೇಳೆ ಸಚಿವ ಲಾಡ್ ಅವರು ತಮ್ಮ ಕಚೇರಿ ಸಿಬ್ಬಂದಿ ಮತ್ತು ಕೆಯುಐಡಿಎಫ್‌ಸಿ ಅಧಿಕಾರಿಯನ್ನು ನಿವಾಸಿಗಳೊಂದಿಗೆ ಸ್ಥಳಕ್ಕೆ ಕಳಿಸಿ ಪರಿಶೀಲಿಸುವಂತೆ ಸೂಚಿಸಿದರು. ‘ಭಾರತಿನಗರ ಅಕ್ರಮ –ಸಕ್ರಮ ಬಡಾವಣೆಯಾಗಿದ್ದು ಸಮೀಕ್ಷೆ ನಡೆಸಲು ಮೂರು ತಿಂಗಳ ಕಾಲಾವಕಾಶ ಬೇಕು’ ಎಂದು ಅಧಿಕಾರಿಗಳು ಹೇಳಿದರು. ಸಚಿವರು ಪ್ರತಿಕ್ರಿಯಿಸಿ ಸಮೀಕ್ಷೆ ನಡೆಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೆ ತಾತ್ಕಾಲಿವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.