ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್‌: ಈ ಬಾರಿಯಾದ್ರೂ ಕಪ್‌ ಗೆಲ್ರಪ್ಪಾ!

ಹುಬ್ಬಳ್ಳಿ ಟೈಗರ್ಸ್‌ ತಂಡಕ್ಕೆ ಅಭಿಮಾನಿಗಳ ಕೋರಿಕೆ
Last Updated 25 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಪ್ರತಿ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಟೂರ್ನಿ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿ–ಧಾರವಾಡದ ಕ್ರಿಕೆಟ್‌ ಪ್ರೇಮಿಗಳದ್ದು ಒಂದೇ ಪ್ರಶ್ನೆ. ನಮ್ಮೂರಿನ ತಂಡ ಹುಬ್ಬಳ್ಳಿ ಟೈಗರ್ಸ್‌ ಈ ವರ್ಷ ಚಾಂಪಿಯನ್‌ ಆಗುತ್ತಾ?

ಪ್ರತಿ ವರ್ಷ ತವರಿನ ತಂಡದ ಅಭಿಮಾನಿಗಳು ಹುಬ್ಬಳ್ಳಿ ತಂಡದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಈ ಪ್ರಶ್ನೆ ಕೇಳುತ್ತಾರೆ. ತಂಡದ ನಾಯಕ ವಿನಯಕುಮಾರ್‌ ಪ್ರತಿ ವರ್ಷ ‘ಈ ಸಲ ಕಪ್‌ ನಮ್ದೇ’ ಎನ್ನುತ್ತಾರೆ. ಆದರೆ, ಚಾಂಪಿಯನ್‌ ಪಟ್ಟದ ಕನಸು
ನನಸಾಗಿಲ್ಲ.

ಕೆಪಿಎಲ್‌ ಟೂರ್ನಿ 2009ರಲ್ಲಿ ಆರಂಭವಾಯಿತು. ಸುಶೀಲ್‌ ಜಿಂದಾಲ್‌ ಮಾಲೀಕತ್ವದ ಹುಬ್ಬಳ್ಳಿ ಟೈಗರ್ಸ್‌ ತಂಡ 2014–15ರಿಂದ ನಿರಂತರವಾಗಿ ಆಡುತ್ತಿದೆ. ಪ್ರತಿವರ್ಷ ಉತ್ತಮ ಪ್ರದರ್ಶನ ನೀಡಿದೆ. ಮೊದಲ ವರ್ಷ ಐದನೇ ಸ್ಥಾನ ಪಡೆದಿದ್ದ ತಂಡ ನಂತರದ ಎರಡೂ ವರ್ಷ (2015 ಹಾಗೂ 2016) ಫೈನಲ್‌ ತಲುಪಿ ಕ್ರಮವಾಗಿ ಬಿಜಾಪುರ ಬುಲ್ಸ್‌ ಹಾಗೂ ಬಳ್ಳಾರಿ ಟಸ್ಕರ್ಸ್‌ ಎದುರು ಸೋಲು ಕಂಡು ಪ್ರಶಸ್ತಿಯ ಅಂಚಿನಲ್ಲಿ ಎಡವಿತ್ತು. ಹಿಂದಿನ ಎರಡೂ ವರ್ಷ ಸೆಮಿಫೈನಲ್‌ನಲ್ಲಿ ಮುಗ್ಗರಿಸಿತ್ತು. ಪ್ರತಿ ಆವೃತ್ತಿಯಲ್ಲಿಯೂ ಪ್ರಶಸ್ತಿ ಹತ್ತಿರ ಬಂದು ಸೋಲುತ್ತಿರುವ ಕಾರಣ ‘ಟೈಗರ್ಸ್‌’ ಆಟಗಾರರ ಮೇಲೆ ಅಭಿಮಾನಿಗಳ ಬೇಸರ ಪಟ್ಟುಕೊಳ್ಳುತ್ತಿದ್ದಾರೆ.ಭಾರತ ತಂಡದಲ್ಲಿ ಆಡಿದ ಅನುಭವಿ, ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ಬಲಗೈ ವೇಗದ ಬೌಲರ್‌ ವಿನಯ್‌ಕುಮಾರ್‌ ಹುಬ್ಬಳ್ಳಿ ತಂಡದಲ್ಲಿದ್ದಾರೆ.

ರಾಜ್ಯ ರಣಜಿ ತಂಡದಲ್ಲಿ ಆಡಿರುವ ಬ್ಯಾಟ್ಸ್‌ಮನ್‌ ಕೆ.ಬಿ. ಪವನ್‌, ಶಿಶಿರ್‌ ಭವಾನೆ, ವಿವಿಧ ವಯೋಮಾನಗಳ ಟೂರ್ನಿಯಲ್ಲಿ ರಾಜ್ಯ ತಂಡ ಪ್ರತಿನಿಧಿಸಿರುವ ಆದಿತ್ಯ ಸೋಮಣ್ಣ, ಮೊಹಮ್ಮದ್‌ ತಹಾ, ಪರೀಕ್ಷಿತ್‌ ಶೆಟ್ಟಿ, ಡೇವಿಡ್‌ ಮಥಾಯಿಸ್‌, ಮಿತ್ರಕಾಂತ್ ಸಿಂಗ್ ಯಾದವ್‌ ಮತ್ತು ಪ್ರವೀಣ ದುಬೆ ಅವರಂಥ ಪ್ರಮುಖ ಆಟಗಾರರು ಟೈಗರ್ಸ್‌ನಲ್ಲಿದ್ದಾರೆ. ಯುವ ಆಟಗಾರರಿಗೆ ಸ್ಫೂರ್ತಿ ತುಂಬುವ ವಿನಯ್ ನಾಯಕರಾಗಿದ್ದಾರೆ. ಆದರೂ ತಂಡಕ್ಕೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತಿಲ್ಲ.

ಸಮ ಸೋಲು–ಗೆಲುವು: ಒಂದು ವಾರದ ಹಿಂದೆಯೇ ಬೆಂಗಳೂರಿನಲ್ಲಿ ಕೆಪಿಎಲ್‌ ಟೂರ್ನಿ ಆರಂಭವಾಗಿದ್ದು, ಹುಬ್ಬಳ್ಳಿ ಟೈಗರ್ಸ್ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಪಡೆದು, ಇನ್ನೆರಡು ಪಂದ್ಯಗಳಲ್ಲಿ ಸೋತಿದೆ. ಮೊದಲ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ಮತ್ತು ಎರಡನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ಸೋಲು ಕಂಡು ಆರಂಭದಲ್ಲಿಯೇ ನಿರಾಸೆ ಮೂಡಿಸಿತ್ತು. ನಂತರದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಬೆಳಗಾವಿ ಪ್ಯಾಂಥರ್ಸ್‌ ಹಾಗೂ ಬಿಜಾಪುರ ಬುಲ್ಸ್ ತಂಡಗಳನ್ನು ಮಣಿಸಿ ಟ್ರೋಫಿ ಗೆಲ್ಲಲು ನಾವೂ ಸಮರ್ಥರು ಎನ್ನುವುದನ್ನು ಸಾಬೀತು ಮಾಡಿದೆ.

ಪ್ರತಿ ತಂಡಗಳು ತಲಾ ಆರು ಪಂದ್ಯ ಆಡುತ್ತವೆ. ಟೈಗರ್ಸ್ ಇನ್ನುಳಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಆ. 25ರಂದು ಮೈಸೂರು ವಾರಿಯರ್ಸ್‌, 27ರಂದು ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ ಪಂದ್ಯಗಳನ್ನಾಡಲಿವೆ. ತಂಡದ ಖಾತೆಯಲ್ಲಿ ನಾಲ್ಕು ಅಂಕಗಳು ಇವೆ. ಉಳಿದ ತಂಡಗಳಾದ ಲಯನ್ಸ್‌, ಟಸ್ಕರ್ಸ್‌, ಬ್ಲಾಸ್ಟರ್ಸ್‌, ಬುಲ್ಸ್‌, ವಾರಿಯರ್ಸ್‌ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡಗಳು ಉತ್ತಮ ಆಟಗಾರರನ್ನು ಹೊಂದಿವೆ. ಆದ್ದರಿಂದ ಉಳಿದ ಪಂದ್ಯಗಳಲ್ಲಿ ಟೈಗರ್ಸ್‌ ಗೆಲ್ಲಲು ಕಠಿಣ ಹೋರಾಟ ಮಾಡಲೇಬೇಕಿದೆ.

ಯುವ ಆಟಗಾರರೇ ತಂಡದ ಶಕ್ತಿ: ಮನೀಷ್‌

ತಂಡದಲ್ಲಿ ಹೆಚ್ಚು ಯುವ ಆಟಗಾರರು ಇರುವುದು ಈ ಬಾರಿ ನಮ್ಮ ಶಕ್ತಿ ಹೆಚ್ಚಿಸಿದೆ. ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಫೈನಲ್‌ಗೆ ಬಂದು ಎರಡು ಸಲ ಸೋತಿದ್ದೇವೆ. ಈ ಸಲ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂದು ಟೈಗರ್ಸ್ ತಂಡದ ಮ್ಯಾನೇಜರ್‌ ಹುಬ್ಬಳ್ಳಿಯ ಮನೀಷ್ ವಿಶ್ವಾಸ ವ್ಯಕ್ತಪಡಿಸಿದರು.

‘ವಿನಯ ಕುಮಾರ್‌, ಪವನ್‌, ಎಂ. ವಿಶ್ವನಾಥ ಮತ್ತು ಡೇವಿಡ್‌ ಮಥಾಯಿಸ್‌ ಅನುಭವಿ ಆಟಗಾರರು. ಇವರನ್ನು ಹೊರತುಪಡಿಸಿದರೆ ಎಲ್ಲರೂ ಹೊಸ ಪ್ರತಿಭೆಗಳು. ತಂಡದ ಹಿರಿಯರಿಂದಲೂ ಕಿರಿಯರಿಗೆ ಸೂಕ್ತ ಮಾರ್ಗದರ್ಶನ ಲಭಿಸುತ್ತಿದೆ. ಟೈಗರ್ಸ್ ತಂಡದ ಅಭಿಮಾನಿಗಳ ಟ್ರೋಫಿ ಗೆಲ್ಲುವ ಆಸೆಯನ್ನು ಈ ಬಾರಿ ಈಡೇರಿಸುತ್ತೇವೆ’ ಎಂದರು.

ಹುಬ್ಬಳ್ಳಿಯ ನಾಲ್ವರು ಹುಡುಗರು

ವಿವಿಧ ವಯೋಮಿತಿಯೊಳಗಿನ ಟೂರ್ನಿಯಲ್ಲಿ ಮಿಂಚಿರುವ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿಯ ಹಾರ್ದಿಕ್‌ ಓಜಾ, ಅರ್ಜುನ ಪಾಟೀಲ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಪ್ರತಿಭೆಗಳಾದ ಪರೀಕ್ಷಿತ್‌ ಶೆಟ್ಟಿ ಮತ್ತು ಶಿಶಿರ್‌ ಭವಾನೆ ಅವರು ಟೈಗರ್ಸ್ ತಂಡದಲ್ಲಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದಿದ್ದ ಮಧ್ಯಪ್ರದೇಶ ಎದುರಿನ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಗೆ ಎಡಗೈ ಬ್ಯಾಟ್ಸ್‌ಮನ್‌ ಪರೀಕ್ಷಿತ್‌ ಸ್ಥಾನ ಪಡೆದಿದ್ದರು.

ಪರೀಕ್ಷಿತ್‌, ಡಾ. ತಿಮ್ಮಪ್ಪಯ್ಯ ಅಖಿಲ ಭಾರತ ಆಹ್ವಾನಿತ ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ್ದಾರೆ. ಅವರು ಮೂಲತಃ ಕುಂದಾಪುರದವರು. ಹುಬ್ಬಳ್ಳಿಯಲ್ಲಿ ಶಾಲೆ, ಕಾಲೇಜು ಓದಿದ್ದಾರೆ. ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ನಲ್ಲಿ ಟೈಗರ್ಸ್‌ ತಂಡದಲ್ಲಿದ್ದರು. ಪರೀಕ್ಷಿತ್‌ ಎನ್‌.ಕೆ. ಠಕ್ಕರ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗ ಕ್ರಿಕೆಟ್‌ ಕಲಿಕೆ ಆರಂಭವಾಯಿತು. ಜಯರಾಜ್‌ ನೂಲ್ವಿ ಬಳಿ ಮೊದಲು ತರಬೇತಿ ಆರಂಭಿಸಿದರು. ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದಾರೆ. ಕೆಎಸ್‌ಸಿಎ ಆಯೋಜಿಸುವ ಅಂತರ ಮೊಫಿಷಿಯಲ್‌ ಟೂರ್ನಿ, ಎಸ್‌.ಎ. ಶ್ರೀನಿವಾಸನ್‌ ಟೂರ್ನಿ, 15 ವರ್ಷದ ಒಳಗಿನವರ ರಾಷ್ಟ್ರೀಯ ಮಟ್ಟದ ಶಾಲಾ ಟೂರ್ನಿಯಲ್ಲಿ ಆಡಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ಶಿಶಿರ್ ಭವಾನೆ 2015ರಲ್ಲಿ ಮಧ್ಯಪ್ರದೇಶ ಎದುರು ಪಂದ್ಯವಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೂ ಏಳು ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದರು. ಮೊದಲು ಮೈಸೂರು ವಾರಿಯರ್ಸ್‌ ತಂಡದ ಪರ ಆಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT