ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಸಂಜೀವಿನಿ’ಯಲ್ಲಿ ಔಷಧಕ್ಕೆ ಅಲೆದಾಟ!

ಕಿಮ್ಸ್‌ ಆಸ್ಪತ್ರೆ: ರಾತ್ರಿ 9ರ ನಂತರ ದೊರೆಯದ ಔಷಧ; ರೋಗಿಗಳ ಪರದಾಟ
Published 18 ಜೂನ್ 2023, 0:03 IST
Last Updated 18 ಜೂನ್ 2023, 0:03 IST
ಅಕ್ಷರ ಗಾತ್ರ

ನಾಗರಾಜ್‌ ಬಿ.ಎನ್‌.

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಡವರ ‘ಸಂಜೀವಿನಿ’ ಎಂದೇ ಖ್ಯಾತಿ ಪಡೆದ ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ರೋಗಿಗಳು ಔಷಧಕ್ಕಾಗಿ ಪರದಾಡುವಂತಾಗಿದೆ. ಒಳರೋಗಿಯಾಗಿದ್ದವರಿಗೆ ಅಥವಾ ಅಪಘಾತದಿಂದ ಗಾಯಗೊಂಡವರು ತುರ್ತು ಘಟಕಕ್ಕೆ ದಾಖಲಾದವರಿಗೆ, ವೈದ್ಯರು ತುರ್ತಾಗಿ ಬರೆದುಕೊಡುವ ಔಷಧಗಳು ದೊರೆಯದೆ ಸಂಬಂಧಿಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ–ಧಾರವಾಡ ಸೇರಿದಂತೆ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದವರಿಗೆ ಕಿಮ್ಸ್‌ ಆಸ್ಪತ್ರೆ ಸಂಜೀವಿನಿಯಾಗಿದೆ. ಹೊರರೋಗಿ ವಿಭಾಗಕ್ಕೆ ತಪಾಸಣೆಗೆಂದು ಪ್ರತಿನಿತ್ಯ 1,500ಕ್ಕೂ ಹೆಚ್ಚು ಮಂದಿ ಬರುತ್ತಾರೆ. ಅವರಲ್ಲಿ 100ಕ್ಕೂ ಹೆಚ್ಚು ಮಂದಿ ಒಳರೋಗಿಯಾಗಿ ದಾಖಲಾಗುತ್ತಾರೆ. ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಪ್ರತಿನಿತ್ಯ ತುರ್ತು ಘಟಕಕ್ಕೆ 200ಕ್ಕಿಂತಲೂ ಹೆಚ್ಚು ರೋಗಿಗಳು ಬರುತ್ತಾರೆ. ರಾತ್ರಿ ಒಂಬತ್ತರ ನಂತರ ಒಳರೋಗಿಗಳಿಗೆ ಹಾಗೂ ತುರ್ತು ಘಟಕಕ್ಕೆ ಬರುವವರಿಗೆ ವೈದ್ಯರು ತುರ್ತಾಗಿ ಬರೆದುಕೊಡುವ ಕೆಲವು ಔಷಧಗಳು ಅಲ್ಲಿಯ ‘ತುರ್ತು ಔಷಧ ವಿತರಣಾ ಕೇಂದ್ರ’ದಲ್ಲಿ ಲಭ್ಯವಿರುವುದಿಲ್ಲ. ಕೆಲವೊಮ್ಮೆ ಈ ಕೇಂದ್ರವೇ ರಾತ್ರಿ ವೇಳೆ ಬಾಗಿಲು ಮುಚ್ಚಿರುತ್ತದೆ!

ಕಿಮ್ಸ್‌ ಆವರಣದಲ್ಲಿ ಎರಡು ಜನೌಷಧಿ ಮಳಿಗೆಗಳಿದ್ದು, ಅವು ಸಹ ಬೆಳಿಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರವರೆಗೆ ಮಾತ್ರ ತೆರೆದಿರುತ್ತವೆ. ರಾತ್ರಿ ವೇಳೆ ತುರ್ತಾಗಿ ವೈದ್ಯರು ರೋಗಿಗಳಿಗೆ ಆಸ್ಪತ್ರೆಯಲ್ಲಿ ಲಭ್ಯವಿಲ್ಲದ ಕೆಲವು ಔಷಧಿಗಳನ್ನು ಬರೆದುಕೊಡುತ್ತಾರೆ. ಆವರಣದಲ್ಲಿನ ಔಷಧ ಅಂಗಡಿಗಳು ಬಂದ್‌ ಆಗಿರುವುದರಿಂದ, ಹೊರ ಭಾಗದಿಂದ ಬಂದ ರೋಗಿಗಳ ಸಂಬಂಧಿಕರು ದಿಕ್ಕು ತೋಚದಂತಾಗುತ್ತಾರೆ. ಎಲ್ಲಿಗೆ ಹೋಗಬೇಕು ಎಂದು ತಿಳಿಯದೆ, ಕ್ಯಾಂಪಸ್‌ ತುಂಬ ಓಡಾಡುತ್ತಾರೆ. ನಗರದ ಬಗ್ಗೆ ಮಾಹಿತಿಯಿದ್ದವರು ರಾತ್ರಿ ವೇಳೆ ತೆರೆದಿರುವ ಎರಡು, ಮೂರು ಕಿ.ಮೀ. ದೂರದಲ್ಲಿನ ಒಂದೆರಡು ಅಂಗಡಿ ಹೆಸರು ಹೇಳುತ್ತಾರೆ. ವಾಹನ ಸೌಲಭ್ಯವಿಲ್ಲದ, ಗೊತ್ತಿಲ್ಲದ ನಗರದಲ್ಲಿ ರಾತ್ರಿ 12, 1ರ ವೇಳೆ ಅವರು ಎಲ್ಲಿಗೆ ಹೋಗಬೇಕು ಎಂದು ತಿಳಿಯದೆ ಆತಂಕಗೊಳ್ಳುತ್ತಾರೆ.

‘ಅಣ್ಣನ ಮಗ ಬೈಕ್‌ನಿಂದ ಬಿದ್ದು ತಲೆಗೆ ಪೆಟ್ಟುಮಾಡಿಕೊಂಡಿದ್ದ. ಊರಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಸಿ ಇಲ್ಲಿಗೆ ಕರೆದುಕೊಂಡು ಬಂದಿದ್ದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಬ್ಯಾಂಡೇಜ್‌, ಇಂಜೆಕ್ಸನ್‌ ಮಾಡಿದ್ದರು. ತುರ್ತಾಗಿ ಮಾತ್ರೆ ನೀಡಬೇಕು ಎಂದು ಚೀಟಿಯಲ್ಲಿ ಬರೆದುಕೊಟ್ಟಿದ್ದರು. ಇಲ್ಲೆಲ್ಲೂ ಔಷಧ ಅಂಗಡಿಯೇ ಇರಲಿಲ್ಲ. ಗೊತ್ತಿಲ್ಲದ ಊರಲ್ಲಿ ಮಧ್ಯರಾತ್ರಿ ಎಲ್ಲಿಗೆ ಹೋಗಬೇಕೆಂದು ತಿಳಿಯಲಿಲ್ಲ. ಕೊನೆಗೂ ಔಷಧ ಸಿಗದೆ ಹಾಗೆಯೇ ಮರಳಿದ್ದೆ’ ಎಂದು ಗಾಯಗೊಂಡಿದ್ದ ಮಗನನ್ನು ತಪಾಸಣೆಗೆ ಕರೆದುಕೊಂಡು ಬಂದಿದ್ದ ಶಿಗ್ಗಾವಿಯ ಯಮನಪ್ಪ ತಳವಾರ ಅಳಲು ತೋಡಿಕೊಂಡರು.

‘ಆಸ್ಪತ್ರೆ ಆವರಣದಲ್ಲಿ ಜೆನರಿಕ್‌ ಔಷಧ ಮಳಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುವಂತಾದರೆ ರೋಗಿಗಳಿಗೆ ಅನುಕೂಲ. ರಾತ್ರಿ ವೇಳೆಯೂ ಆಸ್ಪತ್ರೆಯಲ್ಲಿಯೇ ಔಷಧಗಳು ದೊರೆಯುವಂತಾಗಬೇಕು. ವೈದ್ಯರು ಚೀಟಿ ಬರೆದು ಹೊರಗಡೆಯಿಂದ ತರುವಂತೆ ಹೇಳಬಾರದು. ಇದರಿಂದ ನೂರಾರು ಬಡ, ಮಧ್ಯಮ ರೋಗಿಗಳ ಸಂಬಂಧಿಕರು ರಾತ್ರಿ ವೇಳೆ ಔಷಧಕ್ಕಾಗಿ ಅಲೆಯುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಕಿಮ್ಸ್‌ ನಿರ್ದೇಶಕರು ಕ್ರಮ ಕೈಗೊಳ್ಳಬೇಕು’ ಎಂದು ಮಹಾನಗರ ಪಾಲಿಕೆ ನಿವೃತ್ತ ವೈದ್ಯಾಧಿಕಾರಿ ವಿ.ಬಿ. ನಿಟಾಲಿ ಆಗ್ರಹಿಸಿದರು.

ಕಿಮ್ಸ್‌ನ ತುರ್ತು ಚಿಕಿತ್ಸಾ ಘಟಕದ ಹೊಸ ಕಟ್ಟಡದಲ್ಲಿ ಜನೌಷಧ ಮಳಿಗೆ ಸ್ಥಾಪಿಸಲು ಅನುಮತಿ ನೀಡಿ ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುವಂತೆ ಮಾಲೀಕರಿಗೆ ಸೂಚಿಸಲಾಗುವುದು
–ಡಾ. ಸಿದ್ಧೇಶ್ವರ ಕಡಕೋಳ ಮುಖ್ಯ ಔಷಧ ಅಧಿಕಾರಿ ಕಿಮ್ಸ್‌

ಗಮನಕ್ಕೆ ಬಂದಿದೆ; ಶೀಘ್ರ ಕ್ರಮ: ಡಾ. ಕಡಕೋಳ

‘ಕಿಮ್ಸ್‌ನಲ್ಲಿ ರಾತ್ರಿ ವೇಳೆ ಔಷಧಕ್ಕಾಗಿ ರೋಗಿಗಳ ಸಂಬಂಧಿಕರು ಪರದಾಡುವುದು ಗಮನಕ್ಕೆ ಬಂದಿದೆ. ಕೆಲವು ಬಾರಿ ತುರ್ತು ಔಷಧ ವಿತರಣಾ ಕೇಂದ್ರದಲ್ಲಿ ಲಭ್ಯವಿಲ್ಲದ ಔಷಧಗಳನ್ನು ಹೊರಗಿನಿಂದ ತರುವಂತೆ ವೈದ್ಯರು ಸೂಚಿಸುತ್ತಾರೆ. ರಾತ್ರಿವೇಳೆ ಜನೌಷಧ ಮಳಿಗೆಗಳು ಬಂದ್‌ ಆಗಿರುವುದರಿಂದ ರೋಗಿಗಳ ಸಂಬಂಧಿಕರು ಸಮಸ್ಯೆ ಅನುಭವಿಸುವಂತಾಗುತ್ತಿದೆ’ ಎಂದು ಕಿಮ್ಸ್‌ನ ಮುಖ್ಯ ಔಷಧ ಅಧಿಕಾರಿ ಡಾ. ಸಿದ್ಧೇಶ್ವರ ಕಡಕೋಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜನೌಷಧ ಮಳಿಗೆಗಳ ಮಾಲೀಕರಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಮಳಿಗೆಗಳನ್ನು ತೆರೆಯುವಂತೆ ಹೇಳಿದ್ದೇವೆ. ಭದ್ರತೆ ದೃಷ್ಟಿಯಿಂದ ರಾತ್ರಿ ವೇಳೆ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಅವರಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳಲಾಗುವುದು. ರಾತ್ರಿ ವೇಳೆ ಯಾರಾದರೂ ಜನೌಷಧ ಮಳಿಗೆ ತೆರೆಯಲು ಮುಂದೆ ಬಂದರೆ ಅವಕಾಶ ನೀಡಲಾಗುವುದು. ಖಾಸಗಿ ಔಷಧ ಮಳಿಗೆಗೆ ಅವಕಾಶ ನೀಡುವ ಕುರಿತು ಚರ್ಚಿಸಲಾಗುವುದು. ಈ ಕುರಿತು ಕಿಮ್ಸ್‌ ಆಡಳಿತ ಮಂಡಳಿ ಜೊತೆ ಚರ್ಚಿಸಿ ಒಂದು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT