ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ಹಿರಿಯ, ಅಂಗವಿಕಲ ಮತದಾನ ಪ್ರಕ್ರಿಯೆಗೆ ಶ್ಲಾಘನೆ

Published 16 ಮೇ 2024, 6:33 IST
Last Updated 16 ಮೇ 2024, 6:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇ 7ರ ಸಾರ್ವತ್ರಿಕ ಚುನಾವಣೆ ಮುನ್ನ ಏಪ್ರಿಲ್ 25 ರಿಂದ ಏಪ್ರಿಲ್ 30ರವರೆಗೆ ಕ್ಷೇತ್ರ ವ್ಯಾಪ್ತಿಯ ಹಿರಿಯ ನಾಗರಿಕ ಮತ್ತು ಅಂಗವಿಕಲ ಮತದಾರರು ಮನೆಯಿಂದ ಮಾಡಿದ ಮತದಾನ ಹಾಗೂ ಕರ್ತವ್ಯನಿರತ ಅಧಿಕಾರಿಗಳು ಅಂಚೆ ಮೂಲಕ ಮಾಡಿದ ಮತದಾನ ಪ್ರಮಾಣ ಶೇ 78.01 ಇದೆ. 

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮತಗಟ್ಟೆಗಳಿಗೆ ಬಂದ ಮತದಾನ ಮಾಡಲು ಸಾಧ್ಯವಾಗದೇ ಇರುವಂತಹ ಹಿರಿಯ (85 ವರ್ಷ ಮೇಲ್ಪಟ್ಟ) ಹಾಗೂ ಅಂಗವಿಕಲ ಮತದಾರರಿಗೆ ಚುನಾವಣೆಯ ಆಯೋಗದ ಸೂಚನೆಯಂತೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿತ್ತು.  

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 18,679 ಹಿರಿಯ ನಾಗರಿಕ (85 ವರ್ಷ ಮೇಲ್ಪಟ್ಟ) ಹಾಗೂ ಅಂಗವಿಕಲ ಮತದಾರರಿದ್ದಾರೆ. ಚುನಾವಣಾ ಆಯೋಗದ ಸೂಚನೆಯಿಂದ ಚುನಾವಣಾ ಸೆಕ್ಟರ್‌ ಅಧಿಕಾರಿಗಳು ಹಾಗೂ ಬಿಎಲ್‌ಒ ಅಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ಪ್ರತಿ ಹಿರಿಯ ನಾಗರಿಕ ಹಾಗೂ ಅಂಗವಿಕಲ ಮತದಾರರ ಮನೆಗೆ ತೆರಳಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದ್ದರು. 

ಕೆಲ ಹಿರಿಯ ಮತದಾರರು ಹಾಗೂ ಅಂಗವಿಕಲ ಮತದಾರರು ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಕಷ್ಟವಾಗುತ್ತದೆ ಎಂದು ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಚುನಾವಣಾ ಆಯೋಗವು 12ಡಿ ಅರ್ಜಿ ಸಲ್ಲಿಸಿ, ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿತ್ತು.

‘ಅಂಚೆ ಮತದಾನಕ್ಕಾಗಿ ಧಾರವಾಡ ತಹಶೀಲ್ದಾರ್‌ ಕಚೇರಿಯಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿತ್ತು. ಅಂಚೆ ಮತಪತ್ರ ವಿನಿಮಯ ಕೇಂದ್ರವನ್ನೂ ಸ್ಥಾಪಿಸಿ, ಕ್ಷೇತ್ರ ವ್ಯಾಪ್ತಿಯ ಅರ್ಹ ಮತದಾರರು ಯಾರೂ ಮತದಾನ ಪ್ರಕ್ರಿಯೆಯಿಂದ ಹೊರಗೆ ಉಳಿಯಬಾರದು ಎಂಬುದು ಉದ್ದೇಶವಾಗಿತ್ತು’ ಎಂದು ಜಿಲ್ಲಾ ಚುನಾವಾಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು. 

‘ಅನ್ಯ ಜಿಲ್ಲೆಗಳ ನೌಕರರು ನಮ್ಮ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಅಂತಹ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅಂಚೆ ಮತಪತ್ರದ ವ್ಯವಸ್ಥೆ ಮಾಡಲಾಗಿತ್ತು. ಅಂತಹ ಮತದಾರರು ವಿನಿಮಯ ಕೇಂದ್ರಗಳ ಮೂಲಕ ಮತ ಚಲಾಯಿಸಿದರು‘ ಎಂದು ಮಾಹಿತಿ ನೀಡಿದರು. 

‘ಚುನಾವಣೆ ಕರ್ತವ್ಯ ನಿರತ (ವಿಒಇಡಿ) ಸಿಬ್ಬಂದಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅವರಿಗೂ ಚುನಾವಣಾ ಆಯೋಗದ ಸೂಚನೆಯಂತೆ ಮತಪತ್ರ ವಿತರಿಸಲಾಗಿತ್ತು. ಅವರು ಕರ್ತವ್ಯ ನಿರ್ವಹಿಸಿದ ಸ್ಥಳದಲ್ಲಿನ ಮತದಾನ ಕೇಂದ್ರಗಳಲ್ಲಿಯೇ ಮತದಾನ ಮಾಡಿದ್ದಾರೆ‘ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT