ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಲೋಕಸಭಾ ಕ್ಷೇತ್ರ: ರಾಷ್ಟ್ರೀಯ ಪಕ್ಷಗಳೆಡೆ ಮತದಾರರ ನಿಷ್ಠೆ

Published 23 ಮಾರ್ಚ್ 2024, 5:07 IST
Last Updated 23 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದಲ್ಲಿ ವಿದ್ಯಾಕಾಶಿ ಎಂದು ಹೆಸರಾದ ಧಾರವಾಡ ಜಿಲ್ಲೆಯಲ್ಲಿ 18ನೇ ಲೋಕಸಭಾ ಚುನಾವಣೆ ರಂಗೇರಿದೆ. ಈವರೆಗೆ ನಡೆದ ಬಹುತೇಕ ಎಲ್ಲ ಚುನಾವಣೆಗಳಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕಿದ್ದಾರೆ. ಮೊದಲ ಸತತ 10 ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಇದ್ದ ಅಲೆ, ನಂತರದ ಚುನಾವಣೆಗಳಲ್ಲಿ ಸಂಪೂರ್ಣವಾಗಿ ಬಿಜೆಪಿ ಪರ ವಾಲಿದೆ. ಮುಂಬರುವ ಚುನಾವಣೆಯಲ್ಲೂ ಇದೇ ಟ್ರೆಂಡ್‌ ಮುಂದುವರಿಯುವುದೇ ಸದ್ಯದ ಕುತೂಹಲ.

1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಧಾರವಾಡ ಉತ್ತರ ಹಾಗೂ ಧಾರವಾಡ ದಕ್ಷಿಣ ಎಂಬ ಎರಡು ಕ್ಷೇತ್ರಗಳಿದ್ದವು. ಆಗ ಇವೆರಡೂ ಕ್ಷೇತ್ರಗಳು ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿದ್ದವು. ಧಾರವಾಡ ಉತ್ತರದಿಂದ ದತ್ತಾತ್ರೇಯ ಪರಶುರಾಮ ಕರ್ಮಾಕರ (ಕಾಂಗ್ರೆಸ್‌) ಹಾಗೂ ಧಾರವಾಡ ದಕ್ಷಿಣ ಕ್ಷೇತ್ರದಿಂದ ತಿಮ್ಮಪ್ಪ ರುದ್ರಪ್ಪ ನೆಸ್ವಿ (ಕಾಂಗ್ರೆಸ್‌) ಆಯ್ಕೆಯಾಗಿದ್ದರು.

ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಪುನರ್‌ರಚಿಸಿದ ನಂತರ 1957ರಲ್ಲಿ ನಡೆದ ಚುನಾವಣೆಯಲ್ಲಿ ಧಾರವಾಡ ಉತ್ತರ ಮತ್ತು ಧಾರವಾಡ ದಕ್ಷಿಣ ಕ್ಷೇತ್ರಗಳು ಮೈಸೂರು ರಾಜ್ಯಕ್ಕೆ ಒಳಪಟ್ಟವು. ಮೊದಲ ಚುನಾವಣೆಯಲ್ಲಿ ಜಯಗಳಿಸಿದ್ದ ಅಭ್ಯರ್ಥಿಗಳೇ ಇಲ್ಲೂ ಜಯಗಳಿಸಿದ್ದರು.

1962ರಲ್ಲಿ ನಡೆದ ಚುನಾವಣೆಯಲ್ಲಿ ಧಾರವಾಡ ಉತ್ತರ ಕ್ಷೇತ್ರದಿಂದ ಸರೋಜಿನಿ ಮಹಿಷಿ (ಕಾಂಗ್ರೆಸ್‌) ಜಯಗಳಿಸಿದ್ದರು. ರಾಜ್ಯದಿಂದ ಆಯ್ಕೆಯಾದ ಮೊದಲ ಸಂಸದೆ ಅವರು. ಅವರು ಶೇ 71.64 ಮತ  ಪಡೆದಿದ್ದು ದಾಖಲೆಯಾಗಿದೆ. ಧಾರವಾಡ ದಕ್ಷಿಣದಿಂದ ಫಕ್ರುದ್ದೀನ್‌ ಹುಸೇನಸಾಬ್‌ ಮೊಹಸಿನ್‌ (ಕಾಂಗ್ರೆಸ್‌) ಜಯಗಳಿಸಿದ್ದರು. 1967, 1971 ಹಾಗೂ 1977ರ ಚುನಾವಣೆಯಲ್ಲೂ ಸರೋಜಿನಿ ಹಾಗೂ ಫಕ್ರುದ್ದೀನ್‌ ಜೋಡಿ ಜಯದ ಯಾತ್ರೆ ಮುಂದುವರಿದಿತ್ತು. 

1980ರಲ್ಲಿ ಸರೋಜಿನಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿಲ್ಲ. ಆಗ ಅವರು ಜನತಾ ಪಕ್ಷದಿಂದ ಸ್ಪರ್ಧಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುರುಬ ಸಮುದಾಯದ ಡಿ.ಕೆ.ನಾಯ್ಕರ್‌ ಅನಾಯಾಸವಾಗಿ ಜಯಗಳಿಸಿದರು. ಧಾರವಾಡ ದಕ್ಷಿಣದಿಂದ ಸ್ಪರ್ಧಿಸಿದ್ದ ಫಕ್ರುದ್ದೀನ್‌ ಜಯದ ಯಾತ್ರೆ ಮುಂದುವರಿಸಿದರು.

ಡಿ.ಕೆ. ನಾಯ್ಕರ್‌ 1984, 1989 ಹಾಗೂ 1991ರ ಚುನಾವಣೆಗಳಲ್ಲೂ ಜಯಗಳಿಸಿದರು. ಧಾರವಾಡ ದಕ್ಷಿಣ ಕ್ಷೇತ್ರದಿಂದ ಕ್ರಮವಾಗಿ ಅಜೀಜ್‌ ಸೇಠ್‌, ಮುಜಾಹಿದ್‌ ಬಿ.ಎಂ ಹಾಗೂ ಮುಜಾಹಿದ್‌ ಬಿ.ಎಂ. ಆಯ್ಕೆಯಾದರು.

ಈದ್ಗಾ ತಿರುವು:

1991–92ರ ವೇಳೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂಬಂಧ ನಡೆದ ಹೋರಾಟ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ದೊಡ್ಡ ತಿರುವು ತಂದಿತು. ಇದರ ಪರಿಣಾಮ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಉತ್ತರ ಕ್ಷೇತ್ರದಿಂದ ಮೊದಲ ಬಾರಿ ಬಿಜೆಪಿ ಜಯಗಳಿಸಿತು. ಬಣಜಿಗ ಲಿಂಗಾಯತ ಸಮುದಾಯದ ವಿಜಯ ಸಂಕೇಶ್ವರ ಅವರು ಶೇ 39.14ರಷ್ಟು ಮತಗಳನ್ನು ಪಡೆದು ಅಭೂತಪೂರ್ವ ಜಯ ದಾಖಲಿಸಿದರು. ನಾಲ್ಕು ಬಾರಿ ಸಂಸದರಾಗಿದ್ದ ಡಿ.ಕೆ. ನಾಯ್ಕರ್‌ ಮೂರನೇ ಸ್ಥಾನಕ್ಕೆ ತಳಲ್ಪಟ್ಟರು. ಜನತಾ ದಳದಿಂದ ಸ್ಪರ್ಧಿಸಿದ್ದ ಶಂಕರಣ್ಣ ಮುನವಳ್ಳಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಧಾರವಾಡ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರೊ.ಐ.ಜಿ. ಸನದಿ ಜಯಗಳಿಸಿದರು. ವಿಜಯ ಸಂಕೇಶ್ವರ ಅವರು 1998 ಹಾಗೂ 1999ರಲ್ಲಿಯೂ ಸಂಸತ್ತಿನ ಮೆಟ್ಟಿಲು ತುಳಿದರು.

ರಾಮಕೃಷ್ಣ ಹೆಗಡೆ ಪ್ರಭಾವ:

1999ರಲ್ಲಿ ರಾಮಕೃಷ್ಣ ಹೆಗಡೆ ಸ್ಥಾಪಿಸಿದ್ದ ಲೋಕ ಶಕ್ತಿ ಪಕ್ಷದಿಂದ ಧಾರವಾಡ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಎಂ. ಮೆಣಸಿನಕಾಯಿ ಜಯಗಳಿಸಿದ್ದರು. ತಮ್ಮ ಪ್ರತಿಸ್ಪರ್ಧಿ ಪ್ರೊ.ಐ.ಜಿ. ಸನದಿ (ಕಾಂಗ್ರೆಸ್‌) ಅವರನ್ನು ಪರಾಭವಗೊಳಿಸಿದ್ದರು.

ಜೋಶಿ ರಂಗಪ್ರವೇಶ:

ಧಾರವಾಡ ಉತ್ತರ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಜಯಗಳಿಸಿದ್ದ ವಿಜಯ ಸಂಕೇಶ್ವರ ಅವರನ್ನು 2004ರಲ್ಲಿ ಬಿಜೆಪಿ ಬದಲಾಯಿಸಿ, ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ ಅವರಿಗೆ ಅವಕಾಶ ನೀಡಿತು. ಕಾಂಗ್ರೆಸ್‌ನ ಬಿ.ಎಸ್‌. ಪಾಟೀಲ ಜೊತೆ ನಡೆದ ತೀವ್ರ ಹಣಾಹಣಿಯಲ್ಲಿ ಜಯ ದಾಖಲಿಸಿದರು. ಧಾರವಾಡ ದಕ್ಷಿಣದಿಂದ ಮೊದಲ ಬಾರಿಗೆ ಬಿಜೆಪಿ ಜಯದ ರುಚಿಕಂಡಿತು. ಮಂಜುನಾಥ ಕುನ್ನೂರ ಅವರು ಕಾಂಗ್ರೆಸ್‌ನ ಪ್ರೊ.ಐ.ಜಿ. ಸನದಿ ಅವರನ್ನು ಸೋಲಿಸಿದರು.

ಕ್ಷೇತ್ರ ಪುನರ್‌ರಚನೆ:

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರ ಹಾಗೂ ಪಕ್ಕದ ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಧಾರವಾಡ ಲೋಕಸಭಾ ಕ್ಷೇತ್ರವನ್ನು 2009ರಲ್ಲಿ ಪುನರ್‌ರಚಿಸಲಾಯಿತು. 2009, 2014 ಹಾಗೂ 2019ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ ಸತತ ಜಯಗಳಿಸಿದ್ದಾರೆ. ಸತತ ನಾಲ್ಕು ಬಾರಿ ಜಯಗಳಿಸಿದ್ದ ಕಾಂಗ್ರೆಸ್‌ನ ಸರೋಜಿನಿ ಮಹಿಷಿ ಹಾಗೂ ಡಿ.ಕೆ. ನಾಯ್ಕರ್‌ ಅವರ ದಾಖಲೆ ಸರಿಗಟ್ಟಿದ್ದಾರೆ. ಮೇ ತಿಂಗಳಲ್ಲಿ ನಡೆಯುವ 18ನೇ ಲೋಕಸಭಾ ಚುನಾವಣೆಗೂ ಸ್ಪರ್ಧಿಸಿರುವ ಅವರು, ಈ ದಾಖಲೆಯನ್ನು ಮುರಿದು, ಹೊಸ ದಾಖಲೆ ಸೃಷ್ಟಿಸುವರೇ ಎನ್ನುವುದೆ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT