ಶುಕ್ರವಾರ, ಫೆಬ್ರವರಿ 28, 2020
19 °C

ಧಾರವಾಡ: ಮಿಶ್ರ ಬೇಸಾಯದಲ್ಲಿ ಖುಷಿ ಕಂಡವರು

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಧಾರವಾಡ ಕೃಷಿ ಮೇಳದಲ್ಲಿ ನೀಡಲಾಗುವ ಜಿಲ್ಲಾ ಮಟ್ಟದ ‘ಶ್ರೇಷ್ಠ ಕೃಷಿ ಮಹಿಳೆ’ ಪ್ರಶಸ್ತಿಯನ್ನು ಈ ಭಾಗದ ಏಳು ಕೃಷಿಕ ಮಹಿಳೆಯರು ಶನಿವಾರ ಸ್ವೀಕರಿಸಿದರು. ಪ್ರಶಸ್ತಿಗೆ ಆಯ್ಕೆಯಾದ ಧಾರವಾಡದ ಅನುರಾಧಾ, ಬೆಳಗಾವಿ ಜಿಲ್ಲೆಯ ಮಾದೇವಿ ತೋಟಗಿರಿ, ಹಾವೇರಿ ಜಿಲ್ಲೆಯ ಸೌಭಾಗ್ಯ ಬಸನಗೌಡರ್‌, ಗದಗ ಜಿಲ್ಲೆಯ ಶಾರದಾ ರಾಥೋಡ, ವಿಜಯಪುರದ ಹಸೀನಾ ಬೇಗಂ, ಬಾಗಲಕೋಟೆಯ ಲಕ್ಷ್ಮಿ ಹೊಸೂರ ‘ಪ್ರಜಾವಾಣಿ’ಯೊಂದಿಗೆ ತಮ್ಮ ಕೃಷಿ ಸಾಧನೆಯನ್ನು ಹಂಚಿಕೊಂಡರು. ಇವರೆಲ್ಲರ ಮಾತಿನಲ್ಲಿ ವ್ಯಕ್ತವಾದ ಪ್ರಮುಖ ಅಂಶವೆಂದರೆ ಅದು ಮಿಶ್ರಬೆಳೆ ಬೇಸಾಯ ಅನುಸರಣೆ.

‘ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪುರಸ್ಕೃತರು’ ಏನೆಂದರು ಎಂಬುದರ ಸಾರಾಂಶ ಇಲ್ಲಿದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ

ನಮ್ಮದು 40 ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಮಿಶ್ರಬೆಳೆ ಬೇಸಾಯವನ್ನು ಮಾಡುತ್ತಿದ್ದೇವೆ. ನಮ್ಮದು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಎಂಬ ಧ್ಯೇಯ. ಮೊದಲು ರಸಗೊಬ್ಬರ ಬಳಸಿ ಮಾಡಿದ್ದೆವು. ಆದರೆ ನಾಲ್ಕು ವರ್ಷದಿಂದ ಸಾವಯವ ಪದ್ಧತಿ ಅನುಸರಿಸುತ್ತಿದ್ದೇವೆ. ಸಾವಯವ ಪದ್ಧತಿಯಿಂದ ಇಳುವರಿ ಕಡಿಮೆ ಎನಿಸಿದರೂ ಆರೋಗ್ಯ ಹಾಗೂ ತೃಪ್ತಿ ಸಿಕ್ಕಿದೆ. ನಾವು ಬಾಳೆ ದಿಂಡುಗಳನ್ನು ತೊಟ್ಟಿಯಾಗಿಸಿ ಅದರಲ್ಲಿ ಎರೆಹುಳು ಗೊಬ್ಬರ ಮಾಡುತ್ತೇವೆ.ಹಿಂಗಾರು, ಮುಂಗಾರಿಗೆ ತಕ್ಕ ಬೆಳೆ ಬೆಳೆಯುವುದರ ಜೊತೆಗೆ ದನಗಳಿಗೆ ಅಜೋಲಾವನ್ನು ನಾವೇ ಬೆಳೆದುಕೊಳ್ಳುತ್ತೇವೆ. ಕೃಷಿಯಲ್ಲಿ ಗೋಮೂತ್ರ ಔಷಧ ಸಿಂಪರಣೆ ಮಾಡುತ್ತೇವೆ. ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಪ್ರೋತ್ಸಾಹಿಸಿದಂತಾಗಿದೆ.‌

ಅನುರಾಧಾ ಅಮ್ಮಿನಬಾವಿ, ಧಾರವಾಡ

***

ರೇಷ್ಮೆ ಕೃಷಿಯಲ್ಲಿ ದಾಖಲೆ

ನಮ್ಮದು ಕೃಷಿಯಲ್ಲಿ ಖುಷಿ ಕಂಡ ಕುಟುಂಬ. ನಾನು, ನಮ್ಮೆಜಮಾನ್ರು, ಮಗ ಕೃಷಿಯನ್ನೇ ನೆಚ್ಚಿಕೊಂಡವರು. ರೇಷ್ಮೆ, ಕಬ್ಬು, ತೆಂಗು, ಬಾಳೆ, ಜೋಳ, ಲಿಂಬು, ತರಕಾರಿ, ಕರಿಬೇವು ಒಳಗೊಂಡ ಮಿಶ್ರಬೇಸಾಯ ಅನುಸರಿಸುತ್ತಿದ್ದೇವೆ. ಹನಿ ನೀರಾವರಿ ಅಳವಡಿಸಿಕೊಂಡಿದ್ದೇವೆ. 100 ಮೊಟ್ಟೆಯಲ್ಲಿ 1.30 ಕ್ವಿಂಟಲ್‌ ರೇಷ್ಮೆ ಗೂಡು ಬೆಳೆದ ದಾಖಲೆ ನಮ್ಮದು.

ಮಾದೇವಿ ತೋಟಗಿರಿ, ಹುದಲಿ, ಬೆಳಗಾವಿ

***

ಹೊಸತನಕ್ಕೆ ಹಾತೊರೆಯ ಮನ

ಕೃಷಿಯಲ್ಲಿ ಹೊಸತನ ನಮ್ಮನ್ನು ಸದಾ ಸೆಳೆಯುತ್ತಿರುತ್ತದೆ. ಅಡಿಕೆ, ಬಾಳೆ, ಭತ್ತವನ್ನು ತಂತ್ರಜ್ಞಾನ ಬಳಸಿ ಬೆಳೆಯುತ್ತಿದ್ದೇವೆ. ಸಾವಯವ ಪದ್ಧತಿಗಾಗಿ ಎರೆಹುಳು ಗೊಬ್ಬರ ತಯಾರಿ, ಹೈನುಗಾರಿಕೆ, ಕರಿಬೇವು ಎಲ್ಲವೂ ನಮ್ಮ ಕೈಹಿಡಿದಿವೆ. ಚಂದ್ರಬಕ್ಕೆ, ಪೇರಲವನ್ನು ದೊಡ್ಡ ಪ್ರಮಾಣದಲ್ಲಿ ಹಚ್ಚಿದ್ದೇವೆ. ಕೃಷಿಯಲ್ಲಿ ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದನ್ನು ಅಳವಡಿಸಿಕೊಳ್ಳಲು ಮನಸ್ಸು ಹಾತೊರೆಯುತ್ತಿರುತ್ತದೆ.

ಸೌಭಾಗ್ಯ ಬಸನಗೌಡರ, ಹಾವೇರಿ

***

ನೂರೆಕರೆಯಲ್ಲಿ ಕೃಷಿ ಕಾಯಕ

ನಮ್ಮದು ತಂದೆ ಮನೆ ಹಾಗೂ ಗಂಡನ ಮನೆ ಎರಡೂ ಕಡೆ ಕೃಷಿಯೇ ಪ್ರಮುಖ.ನೂರೆಕರೆ ಜಮೀನಿನಲ್ಲಿ ಎಲೆಬಳ್ಳಿ, ನಿಂಬೆ, ಮಾವು, ಚಿಕ್ಕು, ಗೇರು, ಹುಣಸಿ ಬೆಳೆಯುತ್ತಿದ್ದೇವೆ. ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಆಡು ಸಾಕಾಣಿಕೆ ಜೊತೆಗೆ ತರಕಾರಿಯನ್ನೂ ಬೆಳೆಯುತ್ತಿದ್ದೇವೆ. ಪ್ರಶಸ್ತಿಗೆ ಗುರುತಿಸಿದ್ದು ಖುಷಿ ತಂದಿದೆ.

ಶಾರದಾ ಕುಮಾರ ರಾಥೋಡ, ಗದಗ

***

ದ್ರಾಕ್ಷಿ ಜೊತೆ ಮಿಶ್ರಬೇಸಾಯ

ನಮ್ಮದು ಅವಿಭಕ್ತ ಕುಟುಂಬ. ನಮ್ಮಲ್ಲಿ ದ್ರಾಕ್ಷಿ ಪ್ರಮುಖ ಬೆಳೆ. ಲಿಂಬು, ಪೇರು, ಮಾವು, ಗೋಧಿ, ತೊಗರಿ, ಕಡ್ಲಿ, ಜೋಳದ ಜೊತೆ ಹೈನುಗಾರಿಕೆ, ಕೋಳಿ ಸಾಕಣೆ  ಮಾಡುತ್ತಿದ್ದೇವೆ. ಪ್ರತಿನಿತ್ಯ 10 ಜನ ಕೂಲಿಯಾಳುಗಳ ಜೊತೆ ಮನೆಯ ಸದಸ್ಯರೂ ಕೃಷಿಯಲ್ಲಿ ತೊಡಗಿಕೊಳ್ಳುತ್ತೇವೆ. ಕೃಷಿಯಲ್ಲಿ ಖುಷಿ ಕಂಡಿದ್ದೇವೆ. ಈಗ ಈ ಪ್ರಶಸ್ತಿ ಸಿಕ್ಕಿದ್ದು ಇನ್ನೂ ಹೆಚ್ಚು ಖುಷಿ ಕೊಟ್ಟಿದೆ.

ಹಸೀನಾ ಬೇಗಂ, ವಿಜಯಪುರ

***

ಕೃಷಿ ಎಂದರೆ ಇಷ್ಟ

ನಮ್ಮದು 35 ಎಕರೆಯಲ್ಲಿ ಕೃಷಿ ನಡೆಯುತ್ತಿದೆ.ಮೊದಲಿನಿಂದಲೂ ಕೃಷಿ ಎಂದರೆ ಇಷ್ಟ. ಕಬ್ಬು, ಮೆಕ್ಕೆ ಜೋಳ ಬೆಳೆಯುತ್ತೇವೆ. ಹೀರಿಕಾಯಿ, ಹಾಗಲಕಾಯಿ, ಕ್ಯಾಪ್ಸಿಕಂ ಅನ್ನು ಆಧುನಿಕ ತಂತ್ರಜ್ಞಾನ ಬಳಸಿ ಬೆಳೆಯುತ್ತಿದ್ದೇವೆ. ಪೇರು, ಚಿಕ್ಕು, ಬಾಳೆ, ಸೀತಾಫಲದಿಂದಲೂ ಹೆಚ್ಚು ಆದಾಯ ಸಿಗಲಿದೆ. ಆಡಿನ ಫಾರ್ಮ್‌ ಇದ್ದು, ನೂರು ಆಡುಗಳಿವೆ. ಮರಿಮಾಡಿ ಮಾರುತ್ತೇವೆ. ಟ್ರಾಕ್ಟರ್‌, ಹನಿನೀರಾವರಿಯನ್ನೂ ಅಳವಡಿಸಿಕೊಂಡಿದ್ದೇವೆ. ಪ್ರಶಸ್ತಿಗೆ ಗುರುತಿಸಿದ್ದು ಖುಷಿ ತಂದಿದೆ.

ಲಕ್ಷ್ಮಿ ಹೊಸೂರ, ಬಾಗಲಕೋಟೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು