ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ‘ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ಕೊಡುಗೆ ಸ್ಮರಣೀಯ’

ವಿವಿಧೆಡೆ ನೇತಾಜಿ ಸುಭಾಸ್‌ಚಂದ್ರ ಬೋಸ್ 125ನೇ ಜನ್ಮ ಜಯಂತಿ ಆಚರಣೆ
Last Updated 24 ಜನವರಿ 2022, 4:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವಿವಿಧೆಡೆ ಕ್ರಾಂತಿಕಾರಿ ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ನೇತಾಜಿ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಬಿಜೆಪಿ ಕಚೇರಿ:ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ನೇತಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ವಕ್ತಾರ ರವಿ ನಾಯಕ, ‘ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಬೋಸ್ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದುದು. ನಿಮ್ಮ ಒಂದು ಹನಿ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂದಿದ್ದ ಅವರು, ಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತ ಹೋರಾಟಕ್ಕೆ ಕರೆ ಕೊಟ್ಟಿದ್ದರು’ ಎಂದರು.

‘ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿವಸ್ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.ಇಂದಿನ ಯುವಜನರು ನೇತಾಜಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು, ಸದೃಢ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಆಗ ಮಾತ್ರ ನಾವು ನೀಡುವ ಗೌರವಕ್ಕೆ ಅರ್ಥ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪಕ್ಷದ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಮುಖಂಡರಾದ ವಸಂತ ನಾಡಜೋಶಿ, ಮುರಗೇಶ ಹೊರಡಿ, ಧೀರೇಂದ್ರ ಪಾಟೀಲ ಹಾಗೂ ಗುರು ದೊಡ್ಡಮನಿ ಇದ್ದರು.

ಪತಂಜಲಿ ಯೋಗ ಸಮಿತಿ:ನಗರದಲ್ಲಿರುವ ಪತಂಜಲಿ ಯೋಗ ಸಮಿತಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ಭವರಲಾಲ್ ಅರ್ಯ ಅವರು, ನೇತಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ದೇಶ ಸ್ವತಂತ್ರಗೊಂಡು 75 ವರ್ಷಗಳನ್ನು ಪೂರೈಸಿದೆ. ಸ್ವಾತಂತ್ರ್ಯಕ್ಕಾಗಿ ಏಳು ಲಕ್ಷಕ್ಕೂ ಅಧಿಕ ಯೋಧರು ಬಲಿದಾನ ಮಾಡಿದ್ದಾರೆ. ಇದರಲ್ಲಿ ನೇತಾಜಿ ಅವರು ಆರಂಭಿಸಿದ ಹೋರಾಟ ಅಪ್ರತಿಮವಾದುದು. ಶೀಘ್ರ ಸ್ವಾತಂತ್ರ್ಯ ತಂದು ಕೊಡುವುದಕ್ಕಾಗಿ ವಿದೇಶಗಳಲ್ಲಿದ್ದ ನಾಗರಿಕರಿಗೆ ಕರೆ ಕೊಟ್ಟಿದ್ದರು. ಬ್ರಿಟಿಷರಿಗೆ ಅವರದೇ ರೀತಿಯಲ್ಲಿ ತಿರುಗೇಟು ನೀಡುವಲ್ಲಿ ಬೋಸ್ ಮುಂದಾಗಿದ್ದರು’ ಎಂದು ನೆನೆದರು.

‘ಯುವಜನರು ದೇಶ ಕಟ್ಟುವುದಕ್ಕಾಗಿ ಉತ್ತಮವಾದ ಆರೋಗ್ಯ ಹೊಂದಬೇಕಾಗಿದೆ. ಅದಕ್ಕಾಗಿ, ದುಶ್ಚಟಗಳನ್ನು ತ್ಯಜಿಸಬೇಕು. ದೇಶದ ಮಹಾನ್ ನಾಯಕರ ತ್ಯಾಗಗಳನ್ನು ಸ್ಮರಿಸುವ ಜೊತೆಗೆ, ಅವರ ತತ್ವಾದರ್ಶಗಳನ್ನು ಪಾಲಿಸಬೇಕು’ ಎಂದರು.

ಪತಂಜಲಿ ಯೋಗ ಸಮಿತಿಯ ಮಹೇಶ ಕೊಟ್ಟಿಗೇರಿ, ಬಸವರಾಜ್ ಹರಿವಿ, ವೀರೇಶ, ಕೃಷ್ಣ ಹಾಗೂ ಮುತ್ತಪ್ಪ ಇದ್ದರು.

ಟಿಯುಸಿಸಿ:ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಟ್ರೇಡ್ ಯೂನಿಯನ್ ಕೋಆರ್ಡಿನೇಷನ್ ಸೆಂಟರ್‌(ಟಿಯುಸಿಸಿ) ವತಿಯಿಂದ ಕಾರ್ಯಕ್ರಮ ನಡೆಯಿತು. ಸೆಂಟರ್ ಪದಾಧಿಕಾರಿಗಳು ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿದರು. ಹುಬ್ಬಳ್ಳಿ–ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಬಿಆರ್‌ಟಿಎಸ್ ಮಾರ್ಗಕ್ಕೆ ಬೋಸ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಸೆಂಟರ್ ಸದಸ್ಯರು ಒತ್ತಾಯಿಸಿದರು.

ಸೆಂಟರ್ ಸಂಚಾಲಕ ದ್ಯಾಮಣ್ಣ ಸವಣೂರ, ಉಪಾಧ್ಯಕ್ಷ ವಿನೋದಕುಮಾರ್ ವೀರಾಪುರ, ಪ್ರಧಾನ ಕಾರ್ಯದರ್ಶಿ ಅಶೋಕ ಬಾರ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT