ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಟಿಕೆಟ್‌ಗೆ ಫೋನ್‌ಪೇ: ಕಾಡದು ಚಿಲ್ಲರೆ ಚಿಂತೆ

ಯುಪಿಐ ತಂತ್ರಜ್ಞಾನ ಬಳಸಿ ಯಶಸ್ಸು ಕಂಡ ವಾಯವ್ಯ ಸಾರಿಗೆ ನಿಗಮ
Published 2 ಜೂನ್ 2024, 4:58 IST
Last Updated 2 ಜೂನ್ 2024, 4:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಎನ್‌ಡಬ್ಲುಕೆಆರ್‌ಟಿಸಿ) ಕ್ಯೂಆರ್‌ ಕೋಡ್‌ ಮೂಲಕ ಪ್ರಯಾಣಿಕರಿಂದ ಹಣ ಸ್ವೀಕರಿಸುವ ತಂತ್ರಜ್ಞಾನ ಪ್ರಯೋಗಿಸಿ, ಯಶಸ್ಸು ಕಂಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಈಗಷ್ಟೇ ಕ್ಯುಆರ್‌ ಕೋಡ್‌ ಪೂರ್ಣಪ್ರಮಾಣದಲ್ಲಿ ಅಳವಡಿಸಿಕೊಂಡು ನೂತನ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಆದರೆ, ಎನ್‌ಡಬ್ಲುಕೆಆರ್‌ಟಿಸಿ ನಿಗಮವು ಹೆಚ್ಚುವರಿ ವೆಚ್ಚವಿಲ್ಲದೆ ಇರುವ ವ್ಯವಸ್ಥೆಯಲ್ಲೇ, ಕ್ಯೂಆರ್‌ ಕೋಡ್‌ ತಂತ್ರಜ್ಞಾನ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ.

ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯುಳ್ಳ ವಾಯವ್ಯ ಸಾರಿಗೆ ನಿಗಮವು, ತನ್ನ ಎಲ್ಲ ಬಸ್‌ ನಿರ್ವಾಹಕರಿಗೆ (ಕಂಡಕ್ಟರ್) ಗುರುತಿನ ಚೀಟಿ ಮಾದರಿಯಲ್ಲಿ ಪ್ರತ್ಯೇಕ ಕ್ಯೂಆರ್‌ ಕೋಡ್‌ ನೀಡಿದೆ. ಕ್ಯೂಆರ್‌ ಕೋಡ್‌ ಮುದ್ರಣದ ಪ್ರತಿಯನ್ನು ನಿರ್ವಾಹಕರು ಕೊರಳಿಗೆ ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ. ಹೀಗಾಗಿ ಪ್ರಯಾಣಿಕರು ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ಪ್ರಯಾಣ ಶುಲ್ಕ ಪಾವತಿಸುತ್ತಾರೆ.

ಯಶಸ್ವಿ ಪ್ರಯೋಗ: ‘ಫೋನ್‌ಪೇ ಮೂಲಕ ಪ್ರಯಾಣ ಶುಲ್ಕ ಪಾವತಿಸುವ ವ್ಯವಸ್ಥೆ 2023ರ ಆಗಸ್ಟ್‌ನಲ್ಲಿ ಪ್ರಮುಖ ಮೂರು ಡಿಪೋಗಳಲ್ಲಿ ಮಾತ್ರ ಜಾರಿಗೊಳಿಸಿದ್ದೆವು. ಉತ್ತಮ ಸ್ಪಂದನೆ ಸಿಕ್ಕ ಕಾರಣ 2024ರ ಫೆಬ್ರುವರಿಯಿಂದ ನಿಗಮದ ಆರು ಜಿಲ್ಲೆಗಳಲ್ಲೂ ನಗದು ರಹಿತ ವ್ಯವಹಾರದ ಭಾಗವಾಗಿ ಯುಪಿಐ (ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌) ತಂತ್ರಜ್ಞಾನ ಅಳವಡಿಸಿದೆವು’ ಎಂದು ವಾಯವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಫೋನ್‌ಪೇ ಮೂಲಕ ಪಾವತಿಯಾಗುವ ಪ್ರಯಾಣ ಶುಲ್ಕವು ನೇರವಾಗಿ ನಿಗಮದ ಬ್ಯಾಂಕ್‌ ಖಾತೆಗೆ ಮರುದಿನವೇ ಜಮೆಯಾಗುತ್ತದೆ. ಇದರಿಂದ ಹಣ ಎಣಿಕೆ ಮಾಡುವ ಮಾನವ ಸಂಪನ್ಮೂಲ ಮತ್ತು ಸಮಯದ ಉಳಿತಾಯ ಆಗುತ್ತಿದೆ. ಇದರಿಂದ ನಿಗಮದ ನಷ್ಟವನ್ನೂ ತಗ್ಗಿಸಬಹುದು’ ಎಂದರು.

‘ಫೋನ್‌ಪೇ ಮೂಲಕ ಹಣ ಪಾವತಿಸುವ ವ್ಯವಸ್ಥೆ ಬಂದಿದ್ದರಿಂದ ಚಿಲ್ಲರೆಗಾಗಿ ಜಗಳ ನಡೆಯುವುದು ತಪ್ಪಿದೆ. ಚಿಲ್ಲರೆ ಬರೆದುಕೊಡಲು ಅಥವಾ ಎಣಿಸಲು ಸಮಯ ವ್ಯರ್ಥವಾಗಲ್ಲ. ಪ್ರಯಾಣಿಕರೂ ಖುಷಿಯಾಗಿದ್ದಾರೆ. ಇದರ ಬಳಕೆ ಹೆಚ್ಚಳವಾದಂತೆ ಎಲ್ಲರಿಗೂ ಅನುಕೂಲವಾಗಿದೆ’ ಎಂದು ಬಸ್‌ ನಿರ್ವಾಹಕ ಉಮೇಶ ಕೆ. ತಿಳಿಸಿದರು.

‘ಪಾನ್‌ ಅಂಗಡಿ ಸೇರಿ ಎಲ್ಲ ಕಡೆಗೂ ಕ್ಯೂಆರ್‌ ಕೋಡ್‌ ಹಾಕಿದ್ದಾರೆ. ಬಸ್‌ನಲ್ಲಿ ಪ್ರಯಾಣಿಸಲು ಮಾತ್ರ ನಾನು ನಗದು ಇಟ್ಟುಕೊಳ್ಳಬೇಕಿತ್ತು. ಈಗ ಬಸ್‌ನಲ್ಲೂ ಫೋನ್‌ಪೇ ಪಾವತಿ ವ್ಯವಸ್ಥೆ  ಬಂದಿರುವುದು ತುಂಬಾ ಅನುಕೂಲವಾಗಿದೆ. ಅನಗತ್ಯವಾಗಿ ನಗದು ಇಟ್ಟುಕೊಳ್ಳುವುದು ಮತ್ತು ಚಿಲ್ಲರೆಗಾಗಿ ಪರಿತಪಿಸುವುದು ತಪ್ಪಿದೆ’ ಎಂದು ಪ್ರಯಾಣಿಕ ಸಂತೋಷ ಗಾಯಕವಾಡ ತಿಳಿಸಿದರು.

ಪ್ರಯಾಣಿಕರಿಂದ ಉತ್ತಮ ಸ್ಪಂದನೆ

ವಾಯವ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 7 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಸರಾಸರಿ 21 ಸಾವಿರ ಪ್ರಯಾಣಿಕರು ಯುಪಿಐ ಮೂಲಕ ಪ್ರಯಾಣ ಶುಲ್ಕ ಪಾವತಿಸುತ್ತಾರೆ. ನಿಗಮದ ವ್ಯಾಪ್ತಿಯಲ್ಲಿ ಫೋನ್‌ಪೇ ಅಳವಡಿಸಿದ ಬಳಿಕ ಇದೇ ವರ್ಷ ಕಳೆದ ಏಪ್ರಿಲ್‌ 30ರವರೆಗೆ ಒಟ್ಟು ₹18.47 ಕೋಟಿ ಮೊತ್ತವು ಪ್ರಯಾಣಿಕರಿಂದ ನೇರವಾಗಿ ಜಮೆಯಾಗಿದೆ. ಒಟ್ಟು 18.5 ಲಕ್ಷ ವಹಿವಾಟು ದಾಖಲಾಗಿದೆ.

ಪ್ರಯಾಣ ಶುಲ್ಕ ಸ್ವೀಕೃತಿ ಇನ್ನಷ್ಟು ಪರಿಣಾಮಕಾರಿ ಮಾಡಲು ಟಿಕೆಟ್‌ ಮುದ್ರಿಸುವ ಯಂತ್ರ ಬದಲಿಸುವ ಯೋಜನೆ ಇದೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಖುಷಿ ತಂದಿದೆ.
-ಪ್ರಿಯಾಂಗಾ ಎಂ, ವ್ಯವಸ್ಥಾಪಕ ನಿರ್ದೇಶಕಿ, ಎನ್‌ಡಬ್ಲುಕೆಆರ್‌ಟಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT