ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಟ್‌ ಅಪ್‌: ಅನ್ವೇಷಣೆಯ ‘ಹುಚ್ಚು’, ಸಾಧನೆಗೆ ಕಿಚ್ಚು

ಉತ್ತರ ಕರ್ನಾಟಕ ಭಾಗದ ಸ್ಟಾರ್ಟ್‌ ಅಪ್ ಸಾಧಕರ ಯಶೋಗಾಥೆ: ಸಂವಾದ
Published 24 ಫೆಬ್ರುವರಿ 2024, 15:38 IST
Last Updated 24 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ‘ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಶೃಂಗ’ದ ಎರಡನೇ ದಿನವಾದ ಶನಿವಾರ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯು ಉತ್ತರ ಕರ್ನಾಟಕ ಭಾಗದ ಸ್ಟಾರ್ಟ್‌ ಅಪ್ ಸಾಧಕರ ಯಶೋಗಾಥೆಗೆ ಸಾಕ್ಷಿಯಾಯಿತು.

ಫೋಟೊಥೆರಪಿಗೆ(ದ್ಯುತಿಚಿಕಿತ್ಸೆ) ಸಂಬಂಧಿಸಿದ ವೈದ್ಯಕೀಯ ಸಾಧನ ಅನ್ವೇಷಿಸಿರುವ ಲೈಫ್‌ಟ್ರನ್ಸ್‌ ಆರಾ ಸ್ಟಾರ್ಟ್‌ ಅಪ್‌ ಸಂಸ್ಥೆಯ ಡಾ.ಕಿರಣ್‌ ಕಾಂತಿ ಮಾತನಾಡಿ, ಹುಟ್ಟಿದ ಪ್ರತಿ ಮಗುವಿಗೂ ಜಾಂಡೀಸ್ ಇರುತ್ತದೆ. ಜಾಂಡೀಸ್ ಆದಾಗ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಬೇಕಾಗುತ್ತದೆ. ಈ ವೇಳೆ ಮಗುವನ್ನು ತಾಯಿಯಿಂದ ದೂರ ಇರಿಸುವುದು ಅನಿವಾರ್ಯ. ತಾಯಿ, ಮಗುವನ್ನು ಬೇರೆಯಾಗಿಸದೆ ‘ಲೈಫ್‌ಟ್ರನ್ಸ್‌ ಆರಾ’ದ  ಪೋರ್ಟಬಲ್‌ ಸಾಧನ ಬಳಸಿ ಚಿಕಿತ್ಸೆ ನೀಡಲು ಸಾಧ್ಯ. ಕೇವಲ ಎರಡು ಕೆ.ಜಿ ಭಾರವಿರುವ ಈ ಸಾಧನವನ್ನು ಹಳ್ಳಿಗಳಿಗೂ ತಲುಪಿಸಬಹುದು ಎಂದು ತಿಳಿಸಿದರು.

ಎಂಟು ವೈದ್ಯಕೀಯ ಕಾಲೇಜುಗಳು ಹಾಗೂ 60 ಆಸ್ಪತ್ರೆಗಳು ಈ ಸಾಧನವನ್ನು ಬಳಸುತ್ತಿದ್ದು, ರಾಜ್ಯದಾದ್ಯಂತ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಆರಂಭದಲ್ಲಿ ಹಲವರು, ‘ನಿನಗೇನು ಹುಚ್ಚು ಹಿಡಿದಿದೆಯಾ’ ಎಂದು ಬೈದರು. ನನಗೆ ಸ್ವಲ್ಪ ಹೆಚ್ಚೇ ಹುಚ್ಚು ಇತ್ತು. ಇಂತಹ ಹುಚ್ಚು ಇದ್ದಾಗಲೇ ಹೊಸ ಅನ್ವೇಷಣೆಗಳು ಸಾಧ್ಯ ಎಂದು ನುಡಿದರು.

‘ಅಸ್ತ್ರ ಡಿಫೆನ್ಸ್‌’ನ ಸ್ಥಾಪಕ, ಅಂಕುಶ್ ಕೊರವಿ, ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ದೇಶದ ಸೇನಾ ಮುಖ್ಯಸ್ಥರಿಗೆ ನಮ್ಮ ಸೇನೆ ಬಳಸುತ್ತಿರುವ ಪಿಸ್ತೂಲ್‌ನಲ್ಲಿರುವ ಸಮಸ್ಯೆಗಳ‌ ಕುರಿತು ಇ– ಮೇಲ್ ಕಳುಹಿಸಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ಹೊಸ ಅನ್ವೇಷಣೆಗೆ ಅವಕಾಶ ಮಾಡಿಕೊಟ್ಟರು. ನಂತರ ಸೇನೆಯ ಎಲ್ಲಾ ಕಾರ್ಯಪ್ರದೇಶಗಳಿಗೆ ಭೇಟಿ ನೀಡಿ ಪಿಸ್ತೂಲ್‌ಗಳ ನಿರಂತರ ಅಧ್ಯಯನ ನಡೆಸಿದೆ. ಪ್ರಸ್ತುತ ನಮ್ಮ ಸಂಸ್ಥೆಯ ಪಿಸ್ತೂಲ್‌ಗಳನ್ನು ಭಾರತದಾದ್ಯಂತ ಮಾರಾಟ ಮಾಡಲಾಗುತ್ತಿದೆ ಎಂದರು.

ವಿಶಿಷ್ಟ ವಿನ್ಯಾಸದ ತ್ರಿಚಕ್ರ ವಾಹನ ತಯಾರಿಸಿರುವ ‘ಸ್ಪಾಟರ್‌ ಮೊಬಿಲಿಟಿ’ ಸ್ಟಾರ್ಟ್‌ ಅಪ್‌ನ ಅರುಣ್ ಹಾಗೂ ಪ್ರಸಾದ್‌, ಕೃತಕ ಬುದ್ಧಿಮತ್ತೆ ಬಳಸಿ ವಾಹನ ದಟ್ಟಣೆ ನಿಯಂತ್ರಿಸುವ ‘ಬೆಲ್‌ಟೆಕ್‌ ಎ.ಐ’ ಸಂಸ್ಥೆಯ ಸ್ಥಾಪಕ ಅಗಸ್ತ್ಯ ಬೆಲ್ಲದ ತಮ್ಮ ಅನುಭವ ಹಂಚಿಕೊಂಡರು.

ವೇದಿಕೆಯ ಮುಖ್ಯ ಸಂಚಾಲಕ ಸಂತೋಷ್‌ ಕೆಂಚಾಂಬ ಮಾತನಾಡಿದರು. ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ಅವಿನಾಶ್‌ ಪಳ್ಳೆಗಾರ, ರಮೇಶ ಪಾಟೀಲ, ಚನ್ನು ಹೊಸಮನಿ, ರವಿರಾಜ ಕಮ್ಮಾರ ಇದ್ದರು.

ವಿವಿಧ ಕಾರ್ಯಕ್ರಮ: ಇದೇ ವೇದಿಕೆಯಲ್ಲಿ ಔದ್ಯೋಗಿಕ ಕ್ಷೇತ್ರದ ಸಾಧಕರ ಒಳನೋಟ, ವಾಣಿಜ್ಯೋದ್ಯಮ ಪಯಣ, ಬಹುಮುಖಿ ವಾಣಿಜ್ಯೋದ್ಯಮ, ಸಂದರ್ಶನ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇಲೆಕ್ಟ್ರಿಕ್‌ ವಾಹನ: ಕಾಶ್ಮೀರದಿಂದ ಬುಕ್ಕಿಂಗ್‌

ಇಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ನಿರ್ಮಾಣ ಸಂಸ್ಥೆ ‘ರಿವೋಟ್‌ ಮೋಟಾರ್ಸ್‌’ನ ಸ್ಥಾಪಕ ಅಜಿತ್ ಪಾಟೀಲ್ ಮಾತನಾಡಿ ನಮ್ಮ ಸಂಸ್ಥೆಯ ಇಲೆಕ್ಟ್ರಿಕ್ ವಾಹನಗಳ ಪ್ರತಿ ಭಾಗವೂ ಬೆಳಗಾವಿ ಹುಬ್ಬಳ್ಳಿ ಧಾರವಾಡದಲ್ಲಿ ತಯಾರಾಗುತ್ತವೆ. ಈಗಾಗಲೇ 5500 ವಾಹನಗಳ ಬುಕಿಂಗ್ ಆಗಿದ್ದು ಕಾಶ್ಮೀರ ರಾಜಸ್ಥಾನದಂತಹ ಹೊರರಾಜ್ಯಗಳ ಜನರೂ ಬುಕ್‌ ಮಾಡುತ್ತಿದ್ದಾರೆ ಎಂದರು. ಬಿಡಿಭಾಗಗಳ ತಯಾರಿ ದೇಶದ ಹಲವೆಡೆ ನಡೆಯುತ್ತದೆ. ಆದರೆ ಉತ್ಪನ್ನಗಳ ತಯಾರಿ ಒಂದು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಣಿಜ್ಯೋದ್ಯಮಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT