ಗುರುವಾರ , ಜೂನ್ 30, 2022
24 °C
ಉಪಲೋಕಾಯುಕ್ತ ಬಿ.ಎಸ್‌. ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ

ಆಡಳಿತ ಸುಧಾರಣೆಗೆ ‌ಕ್ರಮ ತೆಗೆದುಕೊಳ್ಳಿ: ಬಿ.ಎಸ್‌. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಹಿರಿಯ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿದರೆ, ಕೆಳ ಹಂತದ ಅಧಿಕಾರಿಗಳ ಕಾರ್ಯಕ್ಷಮತೆ ಹೆಚ್ಚಲಿದೆ. ಇದರಿಂದ ಆಡಳಿತ ಸುಧಾರಣೆ ಆಗಲಿದೆ’ ಎಂದು ಉಪಲೋಕಾಯುಕ್ತ ಬಿ.ಎಸ್‌.ಪಾಟೀಲ ಹೇಳಿದರು. 

ವಿವಿಧ ಇಲಾಖೆಯಲ್ಲಿ ಬಾಕಿ ಉಳಿದ ಲೋಕಾಯುಕ್ತ ಪ್ರಕರಣಗಳ ಪರಿಶೀಲನೆ ಹಾಗೂ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಇಲ್ಲಿನ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕಡತಗಳ ವಿಲೇವಾರಿಯನ್ನು ಕಾಲಮಿತಿಯಲ್ಲಿ ಮಾಡಿ. ನಗರದಲ್ಲಿ ಕಸ ವಿಲೇವಾರಿ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಕ್ರಮವಹಿಸಿ. ಬೆಳಿಗ್ಗೆ 9 ಗಂಟೆಯ ನಂತರವೂ ಕಸ ಸಂಗ್ರಹ ಮತ್ತು ರಸ್ತೆಗಳ ಸ್ವಚ್ಛತೆ ಮಾಡಲಾಗುತ್ತಿದೆ. ಇದನ್ನು ಬೇಗನೆ ಪೂರ್ಣಗೊಳಿಸಲು ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದರು. 

ಇದಕ್ಕೆ ಉತ್ತರಿಸಿದ ಹುಬ್ಬಳ್ಳಿ– ಧಾರವಾಡ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ‘ಈಗಾಗಲೇ ನಗರದಲ್ಲಿ ಕಸ ವಿಲೇವಾರಿ ಸುಧಾರಣೆಗೆ ಕ್ರಮ ವಹಿಸಲಾಗಿದ್ದು, ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆಯನ್ನು 657ರಿಂದ 187ಕ್ಕೆ ಇಳಿಸಲಾಗಿದೆ. ಕೆಲವೇ ದಿನಗಳಲ್ಲಿ ಶೂನ್ಯಕ್ಕೆ ಇಳಿಸುವ ಗುರಿ ಇದೆ. ಕಸ ಸಂಗ್ರಹಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುತ್ತಿದೆ’ ಎಂ‌ದರು. 

‘14 ಮತ್ತು 15ನೇ ಸಾಲಿನ ಹಣಕಾಸು ಯೋಜನೆ ಅಡಿ ತೆಗೆದುಕೊಂಡ ಹಲವು ಕಾಮಗಾರಿಗಳು ಪೂರ್ಣವಾಗಿಲ್ಲ ಹಾಗೂ ಮೇಲ್ವಿಚಾರಣೆಯಲ್ಲಿ ಲೋಪವಾಗಿರುವ ಬಗ್ಗೆ ದೂರು ಕೇಳಿಬಂದಿವೆ. ಈ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ’ ಎಂದು ನಿರ್ದೇಶನ ನೀಡಿದರು. 

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳ ಕುಟುಂಬಕ್ಕೆ ಪೋಷಕತ್ವ ನಿರ್ವಹಣೆಗೆ ನೆರವು ನೀಡಲಾಗುತ್ತಿದೆ’ ಎಂದರು.

‘ಕೋವಿಡ್‌ ಲಸಿಕೆ ನೀಡುವುದರಲ್ಲಿ ಪ್ರಗತಿ ಸಾಧಿಸಲಾಗಿದೆ. ಮೊದಲ ಡೋಸ್‌ 104 ಪ್ರತಿಶತ ಹಾಗೂ ಎರಡನೇ ಡೋಸ್‌ ಕೋವಿಡ್‌ ಲಸಿಕೆ ಶೇ 99ರಷ್ಟು ಜನರಿಗೆ ನೀಡಲಾಗಿದೆ. ಮುಂಜಾಗ್ರತಾ ಡೋಸ್‌ ನೀಡಲು ಕ್ರಮ ವಹಿಸಲಾಗುತ್ತಿದೆ. ಶಾಲೆಗಳಿಗೆ ರಜೆ ಇರುವುದರಿಂದ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವುದು ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ’ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ ಇಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್, ಡಿಸಿಪಿ ಸಾಹಿಲ್‌ ಬಾಗ್ಲಾ, ಲಸಿಕಾಧಿಕಾರಿ ಎಸ್‌.ಎಂ. ಹೊನಕೇರಿ, ಲೋಕಾಯುಕ್ತ ಎಸ್.ಪಿ. ವಿಜಯಕುಮಾರ್ ಬಿಸನಳ್ಳಿ, ಡಿಎಸ್‌ಪಿ ಹುಸೇನ್‌ಖಾನ್ ಪಠಾಣ, ಲೋಕೋಪಯೋಗಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್.ಬಿ.ಚೌಡಣ್ಣವರ, ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ್ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ್‌ ಪ್ರಕಾಶ್ ನಾಶಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ ಕಂದಕೂರ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು