ಮಂಗಳವಾರ, ಫೆಬ್ರವರಿ 7, 2023
25 °C

ಹುಬ್ಬಳ್ಳಿ: ವಿರೋಧದ ನಡುವೆ ‘ಈದ್ಗಾ’ದಲ್ಲಿ ಟಿಪ್ಪು ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿರೋಧದ ನಡುವೆಯೇ ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಎಐಎಂಐಎಂ ಪಕ್ಷ ಮತ್ತು ಸಮತಾ ಸೈನಿಕ ದಳದ (ಎಸ್‌ಎಸ್‌ಡಿ) ಕಾರ್ಯಕರ್ತರು ಗುರುವಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದರು. ಜಯಂತಿ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಲು ಮುಂದಾದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ವಿರೋಧ ಪಕ್ಷಗಳ ವಿರೋಧವನ್ನು ಲೆಕ್ಕಿಸದೆ ಬುಧವಾರ ಜಯಂತಿಗೆ ಅನುಮತಿ ಕೊಟ್ಟಿದ್ದರು. ಮೈದಾನದಲ್ಲಿ ಜಯಂತಿ ಬೇಡ ಎಂದರೂ, ಎಐಎಂಐಎಂ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಅವರು ಪೊಲೀಸ್ ಮತ್ತು ಪಾಲಿಕೆಯ ಅನುಮತಿ ಪಡೆದು, ತಮ್ಮ ಬೆಂಬಲಿಗರು ಹಾಗೂ ದಳದ ಕಾರ್ಯಕರ್ತರೊಂದಿಗೆ ಜಯಂತಿ ಆಚರಿಸಿದರು.

ಕಾರ್ಯಕರ್ತರು ಟಿಪ್ಪು ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಹಜಹಾನ್ ದೇಸಾಯಿ ಮೌಲ್ವಿ ಅವರು, ಕುರಾನ್ ಪಠಣ ಮಾಡಿದರು. ಟಿಪ್ಪು ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ, ಮಧ್ಯಾಹ್ನ 12ಕ್ಕೆ ನಿಗದಿಯಾಗಿದ್ದ ಜಯಂತಿಯು ಬೆಳಿಗ್ಗೆ 11.30ಕ್ಕೆ ನಡೆಯಿತು. ನಂತರ, ಆಯೋಜಕರು ಚಿತ್ರ ತೆರವು ಮಾಡಿದ ಮೇಲೆ ಪೊಲೀಸರು ಮೈದಾನದ ಗೇಟ್‌ಗೆ ಬೀಗ ಹಾಕಿದರು. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮೈದಾನದ ಸುತ್ತ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.  

‘ಹುಬ್ಬಳ್ಳಿಯಲ್ಲಿ ಇಂದು‌ ಚರಿತ್ರೆ ಸೃಷ್ಟಿಯಾಗಿದೆ. ಕೋಮುವಾದಿ ರಾಜಕಾರಣಕ್ಕಾಗಿ ಟಿಪ್ಪುವನ್ನು ಖಳನನ್ನಾಗಿ ಬಿಂಬಿಸಲಾಗುತ್ತಿದೆ’ ಎಂದು ವಿಜಯ ಗುಂಟ್ರಾಳ ಹೇಳಿದರು.

ಈದ್ಗಾ ಮೈದಾನದ ಕಾರ್ಯಕ್ರಮದ ನಂತರ ಪಾಲಿಕೆ ಕಚೇರಿಯಲ್ಲಿ ವಿರೋಧ ಪಕ್ಷದ ನಾಯಕ ದೊರೈರಾಜ ಮಣಿಕುಂಟ್ಲ ಅವರು ಟಿಪ್ಪು ಜಯಂತಿ ಆಚರಿಸಿದರು. ಕಾಂಗ್ರೆಸ್‌ ಸದಸ್ಯರು, ಪಕ್ಷದ ಹುಬ್ಬಳ್ಳಿ–ಧಾರವಾಡ ಮಹಾನಗರ ಮತ್ತು ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಈ ಕುರಿತು ಕಾರಣ ಕೇಳಿ ಪರಿಷತ್ ಕಾರ್ಯದರ್ಶಿ, ಮಣಿಕುಂಟ್ಲ ಅವರಿಗೆ ನೋಟಿಸ್ ನೀಡಿದ್ದಾರೆ.

*
ಈದ್ಗಾ ಮೈದಾನದಲ್ಲಿ ಟಿಪ್ಪು‌ ಜಯಂತಿ ಆಚರಣೆಯನ್ನು ಬಿಜೆಪಿ ತಡೆಯಬಹುದಿತ್ತು. ಆದರೆ, ರಾಜಕೀಯ ಲಾಭಕ್ಕಾಗಿ ಅವರೇ ಈ ತಂತ್ರಗಾರಿಕೆ ಮಾಡಿದ್ದಾರೆ.
-ಪ್ರಮೋದ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು