ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಮಹದಾಯಿ ಜಾರಿಗೆ ಎರಡು ತಿಂಗಳ ಗಡುವು: ಶಂಕರಪ್ಪ ಆರ್‌. ಅಂಬಲಿ

Published 8 ಆಗಸ್ಟ್ 2023, 15:50 IST
Last Updated 8 ಆಗಸ್ಟ್ 2023, 15:50 IST
ಅಕ್ಷರ ಗಾತ್ರ

ಧಾರವಾಡ: ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಎರಡು ತಿಂಗಳೊಳಗೆ ಕೇಂದ್ರ ಸರ್ಕಾರದ ಅನುಮತಿ ಕೊಡಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಲು ಮಹದಾಯಿಗಾಗಿ ಮಹಾ ವೇದಿಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಅವರನ್ನು ಭೇಟಿಯಾಗುವುದು ಇದೇ ಕೊನೆಯ ಬಾರಿ. ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ’ ಎಂದು ವೇದಿಕೆಯ ಸಂಚಾಲಕ ಶಂಕರಪ್ಪ ಆರ್‌. ಅಂಬಲಿ ತಿಳಿಸಿದರು.

‘ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ಒಂಬತ್ತು ತಾಲ್ಲೂಕುಗಳ ಹೋರಾಟಗಾರರ ನಿಯೋಗ ತೆರಳಿ ಮನವಿ ಸಲ್ಲಿಸಲಿದೆ. ಯೋಜನೆ ಜಾರಿ ನಿಟ್ಟಿನಲ್ಲಿ ಅವರ ನಿಲುವೇನು ಎಂದು ಕೇಳುತ್ತೇವೆ. ಅವರು ಪ್ರಯತ್ನ ಮಾಡುವ ವಿಶ್ವಾಸ ಇದೆ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರ ಈ ಯೋಜನೆಯನ್ನು ಸಂದಿಗ್ಧ ಸ್ಥಿತಿಗೆ ತಂದಿಟ್ಟಿದೆ. ಯೋಜನೆ ಜಾರಿಗೊಳಿಸದಿದ್ದರೆ ಒಂಬತ್ತು ತಾಲ್ಲೂಕುಗಳ ಜನರಿಗೆ ಉಂಟಾಗುವ ಹಾನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆಯಾಗುತ್ತವೆ. ಹಲವು ರಾಜಕಾರಣಿಗಳು ಮಹದಾಯಿ ಜಾರಿಗೊಳಿಸುವುದಾಗಿ ಸುಳ್ಳು ಹೇಳಿ ಮೋಸ ಮಾಡಿದ್ಧಾರೆ. ಇನ್ನು ಮುಂದೆ ಚುನಾವಣಾ ರಾಜಕಾರಣಕ್ಕೆ ಯಾರೂ ಮಹದಾಯಿ ಹೆಸರು ಬಳಸಬಾರದು’ ಎಂದರು.

‘ಮಹದಾಯಿ (ಕಳಸಾ–ಬಂಡೂರಿ) ಯೋಜನೆಗೆ ಸಂಬಂಧಿಸಿದಂತೆ ಗೋವಾ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಯೋಜನೆ ಮತ್ತೆ ಕಾನೂನು ತೊಡಕಿನಲ್ಲಿ ಸಿಲುಕಿಕೊಂಡಿದೆ. ಜುಲೈ 8ರಿಂದ ಒಂದು ವರ್ಷ ಮಹದಾಯಿ ನ್ಯಾಯಾಧೀಕರಣ ಮುಂದುವರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಗೆಜೆಟ್‌ ಅಧಿಸೂಚನೆಯಾಗಿ, ವಿಸ್ತೃತ ಯೋಜನಾ ವರದಿ(ಡಿಪಿಆರ್‌) ಅನುಮೋದನೆ ಪಡೆದು, ಟೆಂಡರ್‌ ಆಹ್ವಾನ ಹಂತದಲ್ಲಿ ಮತ್ತೆ ನ್ಯಾಯಾಂಗ ವಿಚಾರಣೆಗೆ ನೀಡಲಾಗಿದೆ’ ಎಂದು ವಿವರಿಸಿದರು.

ಲೋಕನಾಥ ಹೆಬ್ಸೂರು ಮಾತನಾಡಿ, ‘ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಬಹುದು. ಮಹದಾಯಿ ಸಮಸ್ಯೆ ಪರಿಹಾರವಾಯಿತು ಎಂದು ವಿಜಯೋತ್ಸವ ಆಚರಿಸಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಯೋಜನೆ ಜಾರಿಗೊಳಿಸದಿದ್ದರೆ ಸರ್ಕಾರ ನಡೆಸುತ್ತಿರುವವರನ್ನು ಜನರೇ ಮುಂದಿನ ಚುನಾವಣೆಯಲ್ಲಿ ಮನೆಗೆ ಕಳಿಸುತ್ತಾರೆ. ನರಗುಂದದಲ್ಲಿ ಬಂಡಾಯದ ಬಾವುಟ ಹಾರಿಸುತ್ತೇವೆ’ ಎಂದು ಎಚ್ಚರಿಸಿದರು.

ಕೃಷ್ಣಾನಂದ ಸ್ವಾಮೀಜಿ, ಶಂಕರಗೌಡ ಆರ್‌.ಪಾಟೀಲ, ಶಂಕರ್‌, ಮಹಾದೇವಿ, ಲಕ್ಷ್ಮಣ ಬಕ್ಕಾಯ್‌ ಎಸ್‌.ಜಿ.ಪಾಟೀಲ, ನಿಂಗಪ್ಪ ಇದ್ದರು.

ನೀರು ಪೂರೈಕೆಗೆ ಕ್ರಮವಹಿಸದ ಸರ್ಕಾರಗಳು

‘ಕುಡಿಯುವ ನೀರಿಗಾಗಿ ಜಲಜೀವನ್‌ ಮಿಷನ್‌ ಅಡಿ ಮಲಪ್ರಭಾದಿಂದ 3.5 ಟಿ.ಎಂ.ಸಿ. ಅಡಿ ನೀರು ಬಳಕೆಗೆ ಆದೇಶ ನೀಡಿದೆ. ಮಲಪ್ರಭಾ ವ್ಯಾಪ್ತಿಯಲ್ಲಿ 1.96 ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶ ಇದೆ. ಕುಡಿಯುವ ನೀರು ಪೂರೈಕೆಗೆ ಮಲಪ್ರಭಾದ 0.21 ಟಿ.ಎಂ.ಸಿ ಅಡಿ ಬಳಕೆಗೆ ಆರಂಭದಲ್ಲಿ ಅವಕಾಶವಿತ್ತು. ಈಗ ಕುಡಿಯುವ ನೀರಿನ ಉದ್ದೇಶಕ್ಕೆ ಒಟ್ಟಾರೆ 5 ಟಿ.ಎಂ.ಸಿ ಅಡಿ ಪೂರೈಕೆಯಾಗುತ್ತಿದೆ. ಕೈಗಾರಿಕಾ ಯೋಜನೆಗಳಿಗೂ ನೀರು ಬಳಸಲಾಗುತ್ತಿದೆ. ನ್ಯಾಯಾಧಿಕರಣವು ಹುಬ್ಬಳ್ಳಿ–ಧಾರವಾಡ ನಗರಗಳಿಗೆ ಕುಡಿಯುವ ನೀರಿಗಾಗಿ 3.9 ಟಿ.ಎಂ.ಸಿ ಹಂಚಿಕೆ ಮಾಡಿದೆ ಹಂಚಿಕೆಯಾಗಿರುವ ನೀರು ಪೂರೈಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವಹಿಸಿಲ್ಲ’ ಎಂದು ಶಂಕರಪ್ಪ ಆರ್‌. ಅಂಬಲಿ ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT