ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ–ಪುಣೆ ನಡುವೆ ವಂದೇ ಭಾರತ್ ರೈಲು

ಸೆ.15ರಂದು ವರ್ಚ್ಯುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ
Published : 11 ಸೆಪ್ಟೆಂಬರ್ 2024, 4:41 IST
Last Updated : 11 ಸೆಪ್ಟೆಂಬರ್ 2024, 4:41 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಹುಬ್ಬಳ್ಳಿ–ಪುಣೆ ನಡುವೆ ‘ವಂದೇ ಭಾರತ್‌’ ರೈಲು ಸಂಚಾರಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಸೆಪ್ಟೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

ಸೆಪ್ಟೆಂಬರ್ 13 ಅಥವಾ 14ರಂದು ಪ್ರಾಯೋಗಿಕ ಸಂಚಾರ ನಡೆಯಲಿದೆ. ರೈಲು 558 ಕಿ.ಮೀ ದೂರವನ್ನು 9 ಗಂಟೆ 15 ನಿಮಿಷಗಳಲ್ಲಿ ಕ್ರಮಿಸಲಿದೆ. ಬೆಳಿಗ್ಗೆ 5ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮಧ್ಯಾಹ್ನ 2.10ಕ್ಕೆ ಪುಣೆ ತಲುಪಲಿದೆ. ಅದೇ ರೀತಿ ಮಧ್ಯಾಹ್ನ 2.40ಕ್ಕೆ ಅಲ್ಲಿಂದ ಹೊರಡುವ ರೈಲು ರಾತ್ರಿ 11.50ಕ್ಕೆ ಹುಬ್ಬಳ್ಳಿಗೆ ಬರಲಿದೆ.

‘8 ಬೋಗಿಗಳನ್ನು ಹೊಂದಿರುವ ರೈಲು, ಧಾರವಾಡ, ಬೆಳಗಾವಿ, ಮೀರಜ್‌ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಸೋಮವಾರ ಹೊರತುಪಡಿಸಿ ಎಲ್ಲ ದಿನಗಳಲ್ಲೂ ರೈಲು ಸಂಚರಿಸಲಿದೆ. ರೈಲು ಗಂಟೆಗೆ 60 ಕಿ.ಮೀ ವೇಗದಲ್ಲಿ ಸಾಗಲಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದರು.

‘ವೇಳಾಪಟ್ಟಿಯನ್ನು ಈಗಾಗಲೇ ರೈಲ್ವೆ ಮಂಡಳಿಗೆ ಕಳಿಸಲಾಗಿದೆ. ಪುಣೆಯಿಂದ ಹುಬ್ಬಳ್ಳಿಗೆ ಬರುವಾಗ ರೈಲು ವಾರದಲ್ಲಿ ಒಂದು ದಿನ ಕೊಲ್ಲಾಪುರಕ್ಕೆ ಹೋಗಲಿದೆ. ಯಾವ ದಿನ ಎಂಬುದನ್ನು ರೈಲ್ವೆ ಮಂಡಳಿ ನಿರ್ಧರಿಸಲಿದೆ’ ಎಂದರು.

ನೈರುತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ, ಹುಬ್ಬಳ್ಳಿ–ಪುಣೆ ವಂದೇ ಭಾರತ್‌ ರೈಲು ಸಂಚಾರದಿಂದ ಈ ಭಾಗದ ಉದ್ಯಮಿಗಳು, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ. ಹಲವು ವರ್ಷಗಳ ಬೇಡಿಕೆಗೆ ಈಗ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.

ರೈಲು ಪುಣೆಯಿಂದ ಮೀರಜ್‌ಗೆ ಬಂದು ಅಲ್ಲಿಂದ ಕೊಲ್ಲಾಪುರಕ್ಕೆ ಹೋಗಿ, ಅಲ್ಲಿಂದ ವಾಪಸ್ ಮೀರಜ್‌ಗೆ ಬಂದು ನಂತರ ಹುಬ್ಬಳ್ಳಿಗೆ ಬರಲಿದೆ. ಸೆಂಟ್ರಲ್ ರೈಲ್ವೆ ಈ ಮಾರ್ಗವನ್ನು ಸೇರಿಸಿದೆ ಎಂಬ ಮಾಹಿತಿ ಇದೆ. ಇದರಿಂದ ಪ್ರಯಾಣ ಅವಧಿ ಒಂದೂವರೆ ಗಂಟೆ ಹೆಚ್ಚಾಗಲಿದೆ. ಕೊಲ್ಲಾಪುರಕ್ಕೆ ಹೋಗುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಧಾರವಾಡ–ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಇದಕ್ಕೆ 2023ರ ಜೂನ್ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.

'ವಂದೇ ಭಾರತ್‌'ಗೆ ವಿರೋಧ: ಬೆಂಗಳೂರು–ಧಾರವಾಡ ವಂದೇ ಭಾರತ್‌ ರೈಲು ಸಂಚಾರವನ್ನು ಬೆಳಗಾವಿಗೆ ವಿಸ್ತರಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸದೆ, ಹುಬ್ಬಳ್ಳಿ–ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುತ್ತಿರುವುದಕ್ಕೆ ಬೆಳಗಾವಿಯ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಹಾಕಿರುವ ಬೆಳಗಾವಿಯ ಪ್ರಸನ್ನ ಎಂಬುವರು, ‘ಬೆಂಗಳೂರು–ಧಾರವಾಡ ವಂದೇ ಭಾರತ್ ರೈಲಿನ ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಲು ತಾಂತ್ರಿಕ ಸಮಸ್ಯೆಯಿದೆ ಎನ್ನಲಾಗುತ್ತದೆ. ಆದರೆ, ಹುಬ್ಬಳ್ಳಿ-ಪುಣೆ ರೈಲು ಸಂಚರಿಸಲು ಯಾವ ತಾಂತ್ರಿಕ ಸಮಸ್ಯೆಗಳೂ ಅಡ್ಡಿ ಆಗುವುದಿಲ್ಲವೇ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಹಿಂದೆ ಬೆಂಗಳೂರು–ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು. ಇದಕ್ಕಾಗಿ ಕಳೆದ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.

ರೈಲು ಸಂಚಾರವನ್ನು ಬೆಳಗಾವಿಗೆ ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದರಿಂದ, ರೈಲು ಸೇವೆ ವಿಸ್ತರಿಸುವುದಾಗಿ ನೈರುತ್ಯ ರೈಲ್ವೆ ಹೇಳಿತ್ತು. ಈವರೆಗೂ ರೈಲ್ವೆ ಸೇವೆಯನ್ನು ಬೆಳಗಾವಿಗೆ ವಿಸ್ತರಣೆ ಮಾಡದಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ–ಪುಣೆ ನಡುವೆ ವಂದೇ ಭಾರತ್ ರೈಲು ಆರಂಭಿಸುವಂತೆ ಜುಲೈನಲ್ಲಿ ಪತ್ರ ಬರೆಯಲಾಗಿತ್ತು. ಅದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸ‌್ಪಂದಿಸಿದ್ದಾರೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಹುಬ್ಬಳ್ಳಿ–ಪುಣೆ ವಂದೇ ಭಾರತ್ ರೈಲು ಆರಂಭಿಸುವುದು ಸ್ವಾಗತಾರ್ಹ. ಅದೇ ರೀತಿ ಬೆಂಗಳೂರು–ಧಾರವಾಡ ವಂದೇ ಭಾರತ್ ರೈಲು ಬೆಳಗಾವಿಗೆ ವಿಸ್ತರಿಸಿದರೆ ಇನ್ನೂ ಅನುಕೂಲ.
ಸತೀಶ ತೆಂಡೂಲ್ಕರ್ ಉದ್ಯಮಿ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT