ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷಗಳಾದರೂ ಸೌಲಭ್ಯಗಳಿಲ್ಲ!

ಅವೈಜ್ಞಾನಿಕ ಚರಂಡಿ, ಮನೆ ನಿರ್ಮಾಣ: ಎಲ್ಲೆಂದರಲ್ಲಿ ಕೊಳಚೆ ನೀರು
Last Updated 12 ಮೇ 2021, 5:30 IST
ಅಕ್ಷರ ಗಾತ್ರ

ಮುಳಗುಂದ: 2000ನೇ ಇಸವಿಯಲ್ಲಿ ಆಶ್ರಯ ಯೋಜನೆ ಅಡಿ ಪಟ್ಟಣದಲ್ಲಿ ನಿರ್ಮಾಣವಾದ ವಿದ್ಯಾನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಆಮೆ ವೇಗದಲ್ಲಿ ಸಾಗಿವೆ. ಅವೈಜ್ಞಾನಿಕ ಚರಂಡಿ ವ್ಯವಸ್ಥೆ, ಮನೆಗಳ ನಿರ್ಮಾಣದಿಂದ ಕೊಳಚೆ ನೀರು ಎಲ್ಲೆಂದರಲ್ಲಿ ಸಂಗ್ರಹವಾಗುತ್ತಿದೆ.

‌ಪಟ್ಟಣ ಪಂಚಾಯ್ತಿಯ 16ನೇ ವಾರ್ಡ್‌ನ ವ್ಯಾಪ್ತಿಗೆ ಬರುವ ವಿದ್ಯಾನಗರದಲ್ಲಿ ಸುಮಾರು 300 ಮನೆಗಳಿವೆ. ಮುಖ್ಯ ರಸ್ತೆಗೆ ಕಾಂಕ್ರೀಟ್‌ ಹಾಕಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಚರಂಡಿ ಚಿಕ್ಕದಾಗಿ ನಿರ್ಮಿಸಿದ್ದರಿಂದ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೇ ಅಲ್ಲೇ ನಿಂತು ಗಬ್ಬು ನಾರುತ್ತಿದೆ. ಅಲ್ಲದೇ ಮಳೆ ಆದರೆ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತದೆ. ಇದರಿಂದ 10ಕ್ಕೂ ಹೆಚ್ಚು ಮನೆಗಳ ಜಲಾವೃತವಾಗಿ ಸಂಕಷ್ಟ ಎದುರಿಸುವಂತಾಗಿದೆ.

ಇಲ್ಲಿನ ಕೆಲ ಮನೆಗಳ ಮುಂದೆ ಸಿಸಿ ರಸ್ತೆ ನಿರ್ಮಾಣ ಆಗಿಲ್ಲ. ಮನೆಗಳ ತ್ಯಾಜ್ಯ ನೀರು ಹೋಗಲು ಜಾಗವಿಲ್ಲದೇ ಅಲ್ಲೇ ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ತಾಣವಾಗಿದ್ದು ಸಂಜೆ ಸಮಯದಲ್ಲಿ ಹೊರಗೆ ಕುಳಿತುಕೊಳ್ಳುವುದೇ ಕಷ್ಟ
ವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇಲ್ಲಿನ ಪಟ್ಟಣ ಪಂಚಾಯ್ತಿ ವತಿಯಿಂದ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಕಾರ್ಯ ನಿತ್ಯವೂ ನಡೆಯುತ್ತಿದೆ. ಆದರೆ ಇಲ್ಲಿನವರು ಇದರ ಬಳಕೆ ಮಾಡಿಕೊಳ್ಳದೇ ನಗರದ ಕೊನೆಯಲ್ಲಿರುವ ಮನೆಗಳ ಹತ್ತಿರ ತ್ಯಾಜ್ಯ ತಂದು ಸುರಿಯುವುದರಿಂದ ಕಸದ ರಾಶಿ ಬಿದ್ದಿದೆ. ಇದರಿಂದ ಅಕ್ಕಪಕ್ಕದ ಮನೆಯವರು ವಾಸಿಸುವುದೇ ಕಷ್ಟವಾಗಿದೆ.

‘ಕಸ ತಂದು ಸುರಿಯಬೇಡಿ ಎಂದರೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ’ ಎಂದು ಕಮಲವ್ವ ಭಗವಂತಿ ದೂರಿದರು.

ತ್ಯಾಜ್ಯ ನಿರ್ವಹಣೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಸಹ ಬಡಾವಣೆ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಪಂಚಾಯ್ತಿಯ ತ್ಯಾಜ್ಯ ಸಂಗ್ರಹ ವಾಹನಕ್ಕೆ ಕಸ ಹಾಕಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಜನರ ಕರ್ತವ್ಯವಾಗಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ.

ಎರಡು ದಶಕಗಳಿಂದ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ವಿದ್ಯಾನಗರಕ್ಕೆ ವ್ಯವಸ್ಥಿತ ಚರಂಡಿ ವ್ಯವಸ್ಥೆಯನ್ನು ಬೇಗ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ..

ಕುಡಿಯುವ ನೀರಿನ ವಾಲ್ ಇರುವಲ್ಲಿಯೇ ಚರಂಡಿ ನೀರು ಸಂಗ್ರಹವಾಗಿ ನೀರಿನೊಂದಿಗೆ ಬೆರೆಯುತ್ತಿದೆ. ಈ ಬಗ್ಗೆ ವಾಲ್‌ಮನ್‌ಗೆ ಹೇಳಿದರೂ ದುರಸ್ತಿ ಮಾಡಿಲ್ಲ ಎಂದು ವಿದ್ಯಾನಗರದ ನಿವಾಸಿ ಈರಪ್ಪ ಹುಲಕೋಟಿ ದೂರಿದರು.

ಸಿಸಿ ರಸ್ತೆ ಕಾಮಗಾರಿ ವೇಳೆ ಚರಂಡಿ ಚಿಕ್ಕದಾಗಿ ಕಟ್ಟಿದ್ದಾರೆ. ಹೀಗಾಗಿ ನೀರು ಸರಾಗವಾಗಿ ಹೋಗುತ್ತಿಲ್ಲ. ದುರಸ್ತಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ.

ಚಂಪಾವತಿ ಗುಳೇದ, 16ನೇ ವಾರ್ಡ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT