ಮಂಗಳವಾರ, ಆಗಸ್ಟ್ 3, 2021
28 °C
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆ

ಗದಗ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಜಿಲ್ಲೆಯಲ್ಲಿ ವೈದ್ಯ ಸೇರಿ ನಾಲ್ವರಿಗೆ ಶನಿವಾರ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ 28 ವರ್ಷದ ಪುರುಷ (ಪಿ-5015) ಗದಗ ನಗರದ ಕಳಸಾಪುರ ರಸ್ತೆ ನಿವಾಸಿ 32 ವರ್ಷದ ಪುರುಷ (ಪಿ-5016) ಇವರಿಬ್ಬರಿಗೆ ಸೋಂಕಿತರೊಬ್ಬರ (ಪಿ–4079) ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಗದಗ ನಗರದ ಕೆವಿಎಸ್‌ ಕಾಲೊನಿಯ 29 ವರ್ಷದ ಪುರುಷ (ಪಿ-5014) ಮತ್ತು ಲಕ್ಕುಂಡಿ ಗ್ರಾಮದ 29 ವರ್ಷದ ಪುರುಷ (ಪಿ-5017) ಇವರಿಗೆ ಸೊಂಕು ಇರುವುದು ದೃಢಪಟ್ಟಿದೆ.

ಸೋಂಕಿತ ಪಿ–4079 ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್) ಡಯಾಲಿಸಿಸ್‌ ಮಾಡಿಸಿಕೊಂಡಿದ್ದರು. ಇವರು ಡಯಾಲಿಸಿಸ್ ಮಾಡಿಸಿಕೊಂಡ ದಿನವೇ ಹೊಳೆಆಲೂರಿನ ಯುವಕನಿಗೂ (ಪಿ–5015) ಅಲ್ಲೇ ಡಯಾಲಿಸಿಸ್ ಮಾಡಲಾಗಿತ್ತು. ಈ ಯುವಕನಿಗೆ ಮತ್ತು ಡಯಾಲಿಸಿಸ್ ಮಾಡಿದ ಲ್ಯಾಬ್ ಟೆಕ್ನಿಷಿಯನ್‌ಗೂ (ಪಿ-5016) ಸೊಂಕು ಧೃಡಪಟ್ಟಿದೆ.

‘ಜಿಮ್ಸ್‌’ನಲ್ಲೇ ವೈದ್ಯರಾಗಿರುವ 29 ವರ್ಷದ ಯುವಕ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಗಂಟಲು ದ್ರವದ ಮಾದರಿ ತಪಾಸಣೆ ಮಾಡಿದಾಗ ಅವರಿಗೂ ಸೋಂಕು ಇರುವುದು ಪತ್ತೆಯಾಗಿದೆ.

ಜೂ.5ರಂದು ಒಂದೇ ದಿನ 9 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 9ಕ್ಕೆ ಇಳಿಕೆಯಾಗಿತ್ತು. ಇದರ ಜತೆಗೆ ಕಳೆದ ಎರಡು ವಾರಗಳಿಂದ ಹೊಸ ಪ್ರಕರಣ ಕಾಣಿಸಿಕೊಳ್ಳದಿರುವುದು ಜಿಲ್ಲಾಡಳಿತಕ್ಕೆ ಜಿಲ್ಲೆಯ ಜನತೆಗೆ ತುಸು ಸಮಾಧಾನ ತಂದಿತ್ತು. ಇದೀಗ ಶನಿವಾರ ಮತ್ತೆ 4 ಪ್ರಕರಣ ವರದಿಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವೈದ್ಯ ವಾಸವಿದ್ದ ಗದುಗಿನ 28ನೇ ವಾರ್ಡ್‍ನ ಮನೆಯ ಸುತ್ತಲಿನ ಪ್ರದೇಶ, ಲಕ್ಕುಂಡಿಯ 11ನೇ ವಾರ್ಡ್‍ನಲ್ಲಿರುವ ಸೋಂಕಿತನ ಮನೆಯ ಸುತ್ತಲಿನ ಪ್ರದೇಶ, ಹೊಳೆಆಲೂರಿನ ಸೋಂಕಿತನ ಮನೆಯ ಸುತ್ತಲಿನ ಪ್ರದೇಶ ಮತ್ತು ಲ್ಯಾಬ್‍ಟೆಕ್ನಿಷಿಯನ್ ವಾಸವಿದ್ದ ಬೆಟಗೇರಿಯ ಮನೆಯ ಸುತ್ತಲಿನ ಪ್ರದೇಶವನ್ನು ಜಿಲ್ಲಾಡಳಿತ ಕಂಟೈನ್ಮೆಂಟ್‌ ಪ್ರದೇಶಗಳಾಗಿ ಘೋಷಿಸಿದೆ. ಈ ಮೂಲಕ ಜಿಲ್ಲೆಯ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆಯೂ 7ಕ್ಕೆ ಏರಿಕೆಯಾಗಿದೆ.

ಮುಂಬೈನಿಂದ ರೈಲಿನ ಮೂಲಕ ಶನಿವಾರ ಮತ್ತೆ 66 ಪ್ರಯಾಣಿಕರು ಗದಗ ರೈಲು ನಿಲ್ದಾಣಕ್ಕೆ ಬಂದಿಳಿದರು. 5 ದಿನಗಳಲ್ಲಿ ಒಟ್ಟು 384 ಪ್ರಯಾಣಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದಾರೆ. ಜಿಲ್ಲಾಡಳಿತವು ಈ ಎಲ್ಲ ಪ್ರಯಾಣಿಕರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದೆ.

ತವರಿಗೆ ತೆರಳಿದ 466 ಕಾರ್ಮಿಕರು: ಲಾಕ್‌ಡೌನ್‌ನಿಂದಾಗಿ ಊರಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಹೊರ ರಾಜ್ಯಗಳ 466 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತವು ಅವರ ತವರು ರಾಜ್ಯಗಳಿಗೆ ಶ್ರಮಿಕ ರೈಲಿನ ಮೂಲಕ ಕಳುಹಿಸಿದೆ. ಇದರಲ್ಲಿ ಬಿಹಾರದ 116, ಉತ್ತರ ಪ್ರದೇಶದ 193, ರಾಜಸ್ತಾನದ 24, ಜಾರ್ಖಂಡ್‌ನ 56, ಓಡಿಶಾದ 49, ಪಶ್ಚಿಮ ಬಂಗಾಳದ 16, ಆಂಧ್ರಪ್ರದೇಶದ 12 ವಲಸೆ ಕಾರ್ಮಿಕರು ಸೇರಿದ್ದಾರೆ. ಇವರೆಲ್ಲರ ವಿವರಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ದಾಖಲಿಸಿ ಜಿಲ್ಲಾಡಳಿತ ಭವನದಿಂದ ಜಿಲ್ಲಾಡಳಿತವು ವ್ಯವಸ್ಥೆ ಮಾಡಿದ್ದ ಬಸ್‌ಗಳ ಮೂಲಕ ಗದಗ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಕೊಪ್ಪಳಕ್ಕೆ ಕರೆದೊಯ್ದು, ಅಲ್ಲಿಂದ ಶ್ರಮಿಕ್ ರೈಲಿನಲ್ಲಿ ಕಳುಹಿಸಿ ಕೊಡಲಾಗಿದೆ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 25,080 ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಕಲ್ಯಾಣ ಕಾರ್ಮಿಕ ಮಂಡಳಿಯಿಂದ ತಲಾ ₹5 ಸಾವಿರ ಪರಿಹಾರಧನವನ್ನು 16,639 ಕಾರ್ಮಿಕರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು