ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ಒಂದು ವಾರದಲ್ಲಿ 11 ಮಂದಿ ಗುಣಮುಖ

10 ದಿನಗಳಿಂದ ಹೊಸ ಪಾಸಿಟಿವ್‌ ಪ್ರಕರಣ ಇಲ್ಲ; ಜನರು ನಿರಾಳ
Last Updated 4 ಜೂನ್ 2020, 3:33 IST
ಅಕ್ಷರ ಗಾತ್ರ

ಗದಗ: ಕೊರೊನಾ ಸೋಂಕು ದೃಢಪಟ್ಟು, ಇಲ್ಲಿನ ಕೋವಿಡ್‌–19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಕಳೆದೊಂದು ವಾರದಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿರುವುದು ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲೆಯ ಜನತೆಗೆ ದೊಡ್ಡ ಮಟ್ಟದಲ್ಲಿ ಸಮಾಧಾನ ತಂದಿದೆ.

ಕಳೆದ 10 ದಿನಗಳಲ್ಲಿ ಹೊರ ರಾಜ್ಯದಿಂದ ಬಂದವರಿಗಾಗಲಿ, ಜಿಲ್ಲೆಯ ಒಳಗಿನವರಿಗಾಗಲಿ ಯಾರಲ್ಲೂ ಹೊಸ ಪಾಸಿಟಿವ್‌ ಪ್ರಕರಣ ವರದಿಯಾಗದಿರುವುದು ಕೂಡ ಆತಂಕದ ಕಾರ್ಮೋಡ ಕರಗುವಂತೆ ಮಾಡಿದೆ.

ಮೇ 26ರಂದು ನಗರದ ಗಂಜೀ ಬಸವೇಶ್ವರ ಓಣಿ ನಿವಾಸಿ 65 ವರ್ಷದ ವೃದ್ಧ (ಪಿ-913) ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದರು. ಮೇ 28ರಂದು ಒಂದೇ ದಿನ 5 ಮಂದಿ ಗುಣಮುಖರಾಗಿದ್ದರು. ಮೇ 31ರಂದು ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಜೂನ್‌ 2ರಂದು ಮತ್ತೆ ಮೂವರು ಗುಣಮುಖರಾಗಿದ್ದಾರೆ. ಹೀಗೆ ಒಂದು ವಾರದಲ್ಲಿ 11 ಜನ ಬಿಡುಗಡೆಯಾಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ (ಮೇ) ಒಟ್ಟು 17 ಜನರು ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ 17 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಏ. 6ರಂದು 80 ವರ್ಷದ ವೃದ್ಧೆಗೆ (ಪಿ–166) ಸೋಂಕು ದೃಢಪಟ್ಟಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಏ. 8ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಇವರ ಸಂಪರ್ಕಕ್ಕೆ ಬಂದ 59 ವರ್ಷದ ಮಹಿಳೆಗೆ (ಪಿ–304) ಏ.16ರಂದು ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆಯ ನಂತರ ಇವರು ಗುಣಮುಖರಾಗಿ ಮೇ 1ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಹೊಸ ಪ್ರಕರಣಗಳಿಲ್ಲ: ಜಿಲ್ಲೆಯಲ್ಲಿ ಮೇ 23ರಂದು ಒಂದೇ ದಿನ 15 ಮಂದಿಗೆ ಕೋವಿಡ್‌–19 ದೃಢಪಟ್ಟಿತ್ತು. 9 ಮಂದಿ ಸ್ಥಳೀಯರು ಮತ್ತು ಹೊರ ರಾಜ್ಯಗಳಿಂದ ಬಂದ 6 ಜನರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಮೇ 23ರ ನಂತರ ಜೂನ್‌ 3ರವರೆಗೆ ಅಂದರೆ ಕಳೆದ 10 ದಿನಗಳಲ್ಲಿ ಯಾವುದೇ ಹೊಸ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ.

ಲಾಕ್‌ಡೌನ್‌ ಸಡಿಲಿಕೆ ನಂತರ ಮೇ 26ರವರೆಗೆ ದೆಹಲಿ, ಗುಜರಾತ್‌, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 8580 ಜನರು ಜಿಲ್ಲೆಗೆ ಮರಳಿದ್ದಾರೆ. ಇವರಲ್ಲಿ 7826 ವಲಸೆ ಕಾರ್ಮಿಕರು, 29 ಗರ್ಭಿಣಿಯರು, 264 ಪ್ರವಾಸಿಗರು, 151 ವಿದ್ಯಾರ್ಥಿಗಳು, 177 ಯಾತ್ರಾರ್ಥಿಗಳು ಸೇರಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 23 ಜನರು ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಬಂದಿದ್ದಾರೆ.

ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರು (ಮೇ 26ರವರೆಗೆ )
ಆಂಧ್ರಪ್ರದೇಶ 239
ಗೋವಾ 6545
ಗುಜರಾತ್‌ 126
ಕೇರಳ 411
ಮಹಾರಾಷ್ಟ್ರ 825
ತಮಿಳುನಾಡು 102
ತೆಲಂಗಾಣ 138
ಪಶ್ಚಿಮ ಬಂಗಾಳ 12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT