ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್ | ಮಣ್ಣಿನ ಫಲವತ್ತತೆಗೆ ದೇಸಿ ಗೋವು ಬಿಡಾರ

Published 30 ಸೆಪ್ಟೆಂಬರ್ 2023, 4:39 IST
Last Updated 30 ಸೆಪ್ಟೆಂಬರ್ 2023, 4:39 IST
ಅಕ್ಷರ ಗಾತ್ರ

ವರದಿ : ಚಂದ್ರು ಎಂ. ರಾಥೋಡ್‌

ನರೇಗಲ್:‌ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಖಾಲಿಯಾಗಿರುವ ಹೊಲದಲ್ಲಿ ದೇಸಿ ಗೋವುಗಳನ್ನು ನಿಲ್ಲಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ರೈತ ಸಮುದಾಯ ಮುಂದಾಗಿದೆ. ಹೋಬಳಿಯ ನಿಡಗುಂದಿ ಸಮೀಪದ ಹೊಲಗಳಲ್ಲಿ ಕೊಪ್ಪಳ ಜಿಲ್ಲೆಯ ಗ್ರಾಮದ ನೂರಕ್ಕೂ ಹೆಚ್ಚು ದೇಸಿ ಗೋವುಗಳ ಹಿಂಡು ಬೀಡು ಬಿಟ್ಟಿವೆ.

ಪ್ರತಿ ವರ್ಷ ಹೊಲಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿಸುತ್ತಿದ್ದ ರೈತರು ಈಚೆಗೆ ಅದರ ಬೆಲೆಗೂ ಹೆಚ್ಚಾಗಿದೆ. ಅಧಿಕ ಹಣ ನೀಡಿದರೂ ಉತ್ತಮ ಸೆಗಣಿ ಗೊಬ್ಬರ ಸಿಗುತ್ತಿಲ್ಲ. ಆದ್ದರಿಂದ ರೈತರು ದೇಸಿ ಗೋವುಗಳ ಗುಂಪಿಗೆ ಮೊರೆ ಹೋಗಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗದ ಗೋಪಾಲಕರನ್ನು ಆಹ್ವಾನಿಸಿ ತಮ್ಮ ಹೊಲದಲ್ಲಿ ನಿಲ್ಲಿಸಿದ್ದಾರೆ.

ಇದರಿಂದ ಭೂಮಿ ಫಲವತ್ತತೆ ಹೆಚ್ಚಾಗಿ ಮಣ್ಣಿನ ರೋಗ ನಿರೋಧಕ ಶಕ್ತಿ ಬಲಗೊಳ್ಳಲಿದೆ ಹಾಗೂ ಇಳುವರಿಯೂ ಉತ್ತಮವಾಗಿ ಬರಲಿದೆ ಎಂಬ ನಂಬಿಕೆ ರೈತರಲ್ಲಿದೆ. ಜಮೀನಿನಲ್ಲಿ ದೇಸಿ ಗೋವುಗಳ ದಂಡು ಕಂಡ ಕೃಷಿಕರು ತಮ್ಮ ಜಮಿನುಗಳಿಗೆ ದನಗಳ ಬೀಡಾರು ಹೂಡುವಂತೆ ಹೋಬಳಿಯ ರೈತರು ಬೇಡಿಕೆ ಇಡುತ್ತಿದ್ದಾರೆ.

ದೇಶಿ ಗೋವುಗಳನ್ನು ಹೊಲದಲ್ಲಿ ನಿಲ್ಲಿಸುವುದರಿಂದ ಅದರ ಸೆಗಣಿ ಹಾಗೂ ಗಂಜಲುನಲ್ಲಿರುವ ಪೋಷಕಾಂಶಗಳಿಂದ ಗೋಮಾಳವಾಗುತ್ತದೆ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
ಗುರುನಾಥ ಕೋಟಿ, ರೈತ

ಸಾಮಾನ್ಯವಾಗಿ ಮಳೆಗಾಲ ಆರಂಭವಾಗುವ ಮೊದಲು ಬಳ್ಳಾರಿ, ಗಂಗಾವತಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ವಿವಿಧ ಭಾಗದ ರೈತರ ಜಮೀನುಗಳಿಗೆ ಹೋಗುತ್ತೇವೆ. ನೀರು, ಮೇವು ಸಿಗುವ ಪ್ರದೇಶಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಮಳೆಗಾಲದಲ್ಲಿ ಸೊಂಡೂರು, ಕೊಪ್ಪಳ ಗುಡ್ಡದಲ್ಲಿ ವಾಸ ಮಾಡುತ್ತೇವೆ. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಈಗ ಬಂದಿದ್ದೇವೆ. ಗೋವಿನ ಹಿಂಡಿನ ಜೊತೆಯಲ್ಲೇ ನಮ್ಮ ಸಂಸಾರ ಇರುತ್ತದೆ. ಕಾಲಕ್ಕನುಗುಣವಾಗಿ ಔಷಧೋಪಚಾರ, ರಕ್ಷಣೆ ಮಾಡುತ್ತೇವೆ ಎಂದು ಬಾಳಪ್ಪ, ಹೊನ್ನಪ್ಪ ಕೆರಳ್ಳಿ ತಿಳಿಸಿದರು.

ಗೋವುಗಳ ಜೊತೆಯಲ್ಲಿ ನೂರಾರು ಕುರಿಗಳನ್ನು ಸಹ ಸಾಕಲಾಗಿದ್ದು ಹೊಲಗಳಲ್ಲಿ ನಿಲ್ಲಿಸುತ್ತಾರೆ. ಜಮೀನಿನ ಮಾಲಿಕರು ಇಂತಿಷ್ಟು ಎಂದು ಹಣ, ಜೋಳ, ಕಾಳು ನೀಡಲಾಗುತ್ತದೆ. ಕೆಲವೊಮ್ಮೆ ಮೇವನ್ನು ಸಹ ನೀಡುವ ರೂಢಿ ಇರುತ್ತದೆ. ಕುರಿ, ದನಗಳ ಹಿಂಡು ಹೋದ ನಂತರ ರೈತರು ರಂಟೆ ಹೊಡೆಯಲು, ಹರಗಲು ಮುಂದಾಗುತ್ತೇವೆ. ನಂತರ ಮಳೆ ಪ್ರಭಾವ ನೋಡಿಕೊಂಡು ಬಿತ್ತನೆ ಕಾರ್ಯ ಮಾಡಲಾಗುತ್ತದೆ ಎಂದು ರೈತ ಶರಣಪ್ಪ ಕುರಿ ಹೇಳಿದರು.

ಹೋರಿ ಕರುಗಳ ವ್ಯಾಪಾರ ಬಲು ಜೋರು

ಹೊಲದಲ್ಲಿ ಬಿಡಾರ ಹೂಡಿರುವ ದೇಶಿ ದನಗಳ ಹೋರಿ ಕರುಗಳನ್ನು ಖರೀದಿ ಮಾಡಲು ಗ್ರಾಮೀಣ ಭಾಗದ ರೈತರಿಂದ ನಡೆಯುತ್ತದೆ. ಉಳುಮೆಗೆ ಉಪಯುಕ್ತವಾಗುವ ಹೋರಿ ಕರುಗಳಿಗೆ ಬೆಳವಣಿಗೆಗೆ ತಕ್ಕಂತೆ ₹ 10ರಿಂದ ₹15 ಸಾವಿರ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕುರಿಮರಿ ಟಗರು ಹೋತಗಳ ಮಾರಾಟವು ಜೋರಾಗಿದೆ. ಹೊಲದ ಮಾಲೀಕರು ಹಣ ಜೋಳ ಮೇವು ನೀಡುತ್ತಿರುವುದರಿಂದ ಹೋಬಳಿಯ ರೈತರಿಂದ ಗೋಪಾಲಕರು ಖುಷಿಯಾಗಿದ್ದಾರೆ.

ನರೇಗಲ್‌ ಹೋಬಳಿಯ ನಿಡಗಂದಿ ಗ್ರಾಮದ ಹೊಲವೊಂದರಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು ಹಾಗೂ ಕುರಿಗಳು
ನರೇಗಲ್‌ ಹೋಬಳಿಯ ನಿಡಗಂದಿ ಗ್ರಾಮದ ಹೊಲವೊಂದರಲ್ಲಿ ನಿಲ್ಲಿಸಿರುವ ದೇಸಿ ಗೋವುಗಳ ಹಿಂಡು ಹಾಗೂ ಕುರಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT