ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್ ಸಿದ್ದಾಂತಗಳಿಂದ ಅಶಾಂತಿ: ಎಲ್.ನಾರಾಯಣಸ್ವಾಮಿ

‘ಆರ್‌ಎಸ್‌ಎಸ್ ಆಳ ಅಗಲ’ ಪುಸ್ತಕ ಬಿಡುಗಡೆ
Last Updated 22 ಜುಲೈ 2022, 5:16 IST
ಅಕ್ಷರ ಗಾತ್ರ

ಗದಗ: ‘ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕವಾಗುತ್ತಿರುವ ಆರ್‌ಎಸ್‌ಎಸ್ ಸಿದ್ದಾಂತಗಳು ದೇಶದಲ್ಲಿ ಅಶಾಂತಿಯನ್ನುಂಟು ಮಾಡುತ್ತಿವೆ. ಈ ಬಗ್ಗೆ ದೇವನೂರ ಮಹದೇವ ಅವರು ಸ್ಪಷ್ಟವಾಗಿ ಬರೆಯುವ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಪ್ರತಿಯೊಬ್ಬ ಯುವಕನೂ ಈ ಪುಸ್ತಕ ಓದಬೇಕು’ ಎಂದು ಹಿರಿಯ ಹೋರಾಟಗಾರ ಎಲ್.ನಾರಾಯಣಸ್ವಾಮಿ ಹೇಳಿದರು.

ಹಿರಿಯ ಸಾಹಿತಿ ದೇವನೂರ ಮಹದೇವ ಅವರು ಬರೆದಿರುವ ‘ಆರ್‌ಎಸ್‌ಎಸ್‌ ಆಳ ಅಗಲ’ ಪುಸ್ತಕವನ್ನು ದಲಿತ ಕಲಾ ಮಂಡಳಿ ವತಿಯಿಂದ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಮಾಜಿಕ ಹೋರಾಟಗಾರ ಷರೀಫ್ ಬಿಳೆಯಲಿ ಮಾತನಾಡಿ, ‘ದೇಶದಲ್ಲಿ ಅಶಾಂತಿಯನ್ನುಂಟು ಮಾಡಿ ಪ್ರಜಾಪ್ರಭುತ್ವದ ಆಶಯಗಳಿಗೆ ಯಾವುದೇ ಬೆಲೆ ಕೊಡದೆ, ದೇಶ ಭಾಷೆ ಧರ್ಮದ ಹೆಸರಿನಲ್ಲಿ ಯುವಕರನ್ನು ದಾರಿತಪ್ಪಿಸುತ್ತಿರುವ ಆರ್‌ಎಸ್‌ಎಸ್ ಈ ದೇಶದಲ್ಲಿ ಬ್ಯಾನ್ ಆಗಬೇಕು. ಇದನ್ನು ಬಹಳ ಹಿಂದೆಯೇ ಸರ್ದಾರ್‌ ಪಟೇಲ್ ಸಹ ಹೇಳಿದ್ದಾರೆ’ ಎಂದು ಹೇಳಿದರು.

‘ಆರ್‌ಎಸ್‌ಎಸ್ ಸಿದ್ದಾಂತ ಮುಂದೊಂದು ದಿನ ದೇಶಕ್ಕೆ ಮಾರಕವಾಗಲಿದೆ. ಈ ವಿಚಾರವನ್ನೇ ದೇವನೂರು ಅವರು ಸಹ ಈ ಪುಸ್ತಕದಲ್ಲಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೆವಾರ್ ಮತ್ತು ಗೋಲ್ವಾಲ್ಕರ ಅವರ ಚಾತುರ್ವರ್ಣ ಸಿದ್ದಾಂತವನ್ನೇ ಉಲ್ಲೇಖಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಂದೇ ವಿರೋಧಿಸಿದ್ದ ಇವರು, ತಳ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಸ್ವಾತಂತ್ರ್ಯ ಕೊಡುವುದಾದರೆ ಅಂತಹ ಸ್ವಾತಂತ್ರ್ಯ ನಮಗೆ ಬೇಕಿಲ್ಲ ಎಂಬ ಮಾತುಗಳನ್ನಾಡಿದ್ದರು. ಅಂಬೇಡ್ಕರ್ ಅವರ ಬಗ್ಗೆಯೂ ಲಘುವಾಗಿ ಮಾತನಾಡಿದ್ದರು. ಅಂತಹ ಎಲ್ಲ ಮಾದರಿಯನ್ನು ಇಂದು ಈ ಪುಸ್ತಕದಲ್ಲಿ ತಿಳಿಸಲಾಗಿದೆ’ ಎಂದು ಹೇಳಿದರು.

‘ಈ ಪುಸ್ತಕದ ಬಗ್ಗೆ ಟೀಕೆ ಮಾಡುವವರು ಮೊದಲು ಪುಸ್ತಕ ಓದಲಿ. ಬಳಿಕ ಮುಕ್ತ ಚರ್ಚೆಗೆ ಬರಲಿ. ಸುಖಾಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಅನಗತ್ಯ ಟೀಕೆ ಟಿಪ್ಪುಣಿಗಳನ್ನು ಮಾಡಿದರೆ ಅಂತವರ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಸಂಘಟಕರಾದ ಮುತ್ತು ಬಿಳೆಯಲಿ, ಆನಂದ ಶಿಂಗಾಡಿ, ಹಾಜಿ ಅಲಿ ಕೊಪ್ಪಳ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ಅನಿಲ್ ಕಾಳೆ, ಬಸವರಾಜ ಬಿಳೆಯಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT