ಗದಗ: ಜಿಲ್ಲೆಯಲ್ಲಿ ಹಲವಾರು ದಿನಗಳ ಕಾಲ ಬಿದ್ದ ಅಧಿಕ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಎಲೆಮಚ್ಚೆ ರೋಗ ಹಾಗೂ ಸುರಳಿ ರೋಗಗಳ ಬಾಧೆ ಕಂಡುಬಂದಿದೆ.
ಎಲೆಮಚ್ಚೆ ರೋಗಬಾಧಿತ ಗಿಡಗಳಲ್ಲಿ ಎಲೆಗಳ ಮೇಲೆ ಚಿಕ್ಕ ನೀರಿನಿಂದ ಆವೃತವಾದ ಗುಲಾಬಿ ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು, ವಾತಾವರಣದಲ್ಲಿ ತೇವಾಂಶ ಇದ್ದಾಗ ನೇರಳೆ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಬಾಧೆ ತೀವ್ರವಾದಂತೆ ಎಲೆ ಸಂಕುಚಿತಗೊಂಡು ಗಿಡಗಳು ಸಾಯುತ್ತವೆ. ಇದರ ಹತೋಟಿಗಾಗಿ 15 ಮಿ.ಲೀ. ಡೈವೆನ್‌ಕೊನಾಜೋಲ್ 25 ಇ.ಸಿ. ಅಥವಾ 15 ಮಿ.ಲೀ. ಹೆಕ್ಸಾಕೋನಾಜೋಲ್ 5 ಇ.ಸಿ. ಔಷಧಿಯನ್ನು ಮತ್ತು 30 ಗ್ರಾಂ ನೀರಿನಲ್ಲಿ ಕರುಗುವ 19:19:19 ಗೊಬ್ಬರವನ್ನು 15 ಲೀಟರ್ ಸಾಮರ್ಥ್ಯದ ಟಾಕಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು.
ಶಿಲೀಂಧ್ರಗಳ ಬಾಧೆ, ಅತಿ ಹೆಚ್ಚಿನ ತೇವಾಂಶ ಹಾಗೂ ಬೋರಾನ್ ಕೊರತೆಯಿಂದ ಸುರಳಿರೋಗ ಕಾಣಿಸಿಕೊಳ್ಳುತ್ತದೆ. ಒಂದರಿಂದ ಮೂರು ತಿಂಗಳ ಬೆಳೆಯು ಸುರಳಿ ರೋಗಕ್ಕೆ ಬಹುಬೇಗನೆ ತುತ್ತಾಗುತ್ತದೆ. ರೋಗದ ಬಾಧೆಗೊಳಗಾದ ಗಿಡವು ಸರಿಯಾಗಿ ಅಭಿವೃದ್ಧಿಯಾಗದೆ, ಎಲೆ ಹಾಗೂ ಕಾಂಡವು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಾಂಡದ ಅಸಹಜ ಉದ್ದನೆಯ ಬೆಳವಣಿಗೆಯಾಗಿ ಮುದುಡಿ ತಿರುಗಿದಂತೆ ಕಾಣಿಸುತ್ತದೆ.
ತೀವ್ರ ಬಾಧೆಗೊಳಗಾದಾಗ ಗಡ್ಡೆಗಳ ಬೆಳವಣಿಗೆ ಬಹಳಷ್ಟು ಕುಂಠಿತವಾಗಿ ಗಡ್ಡೆಯ ಕೊಳೆಯುವಿಕೆ ಪ್ರಾರಂಭವಾಗುತ್ತದೆ. ಇದರ ಹತೋಟಿಗಾಗಿ ರೈತರು ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ 15 ಮಿ.ಲೀ. ಅಜಾಕ್ಸಿಸ್ಟಾಬಿನ್ ಮತ್ತು ಟೆಬುಕೊನಾಜೋಲ್ ಶಿಲೀಂಧ್ರನಾಶಕ, 1 ಗ್ರಾಂ ಬೋರಾನ್ ಮತ್ತು 60 ಗ್ರಾಂ 0:0:50 ನೀರಿನಲ್ಲಿ ಕರಗುವ ಗೊಬ್ಬರಗಳನ್ನು 15 ಲೀಟರ್ ಸಾಮರ್ಥ್ಯದ ಟಾಕಿಗೆ ಬೆರೆಸಿ ಸಿಂಪಡಿಸಬೇಕು. ಅಥವಾ 90 ಗ್ರಾಂ ಟ್ರೈಕೋಡರ್ಮಾ ಹಾರ್ಜಿಯಾನಮ್, 90 ಗ್ರಾಂ ಬ್ಯಾಸಿಲಸ್ ನಬಿಲಸ್ ಮತ್ತು 90 ಗ್ರಾಂ ಸೂಡೋಮೋನಾಸ್ ಬ್ಲೊರೊನೆನ್ ಜೈವಿಕ ಶಿಲೀಂಧ್ರನಾಶಕಗಳನ್ನು 15 ಲೀಟರ್ ಸಾಮರ್ಥ್ಯದ ವಾಕಿಗೆ ಬೆರೆಸಿ ಸಿಂಪಡಿಸಬೇಕು. ಈ ಶಿಲೀಂಧ್ರನಾಶಕಗಳು ಮೋಡ ಕವಿದ ವಾತವರಣವದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತವೆ.
ಲಘು ಪೋಷಕಾಂಶಗಳ ನಿರ್ವಹಣೆಗಾಗಿ 45 ಗ್ರಾಂ ಲಘು ಪೋಷಕಾಂಶಗಳ ಮಿಶ್ರಣವಾದ ಅರ್ಕಾ ತರಕಾರಿ ಸ್ಪೆಷಲ್, ಒಂದು ಶ್ಯಾಂಪೂ ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು 15 ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ 40, 60 ಮತ್ತು 80 ದಿನಗಳ ಬೆಳೆಗೆ ಸಿಂಪಡಿಸುವುದರಿಂದ ಗುಣಮಟ್ಟದ ಗಡ್ಡೆಗಳನ್ನು ಪಡೆಯಬಹುದು ಎಂದು ಹುಲಕೋಟಿಯ ಐಸಿಎಆರ್– ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹೇಮಾವತಿ ಹಿರೇಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.