ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ: ಬರದಿಂದಾಗಿ ಮುಂಗಾರು, ಹಿಂಗಾರು ಬೆಳೆ ನಷ್ಟ

Published 22 ನವೆಂಬರ್ 2023, 4:35 IST
Last Updated 22 ನವೆಂಬರ್ 2023, 4:35 IST
ಅಕ್ಷರ ಗಾತ್ರ

ಗಜೇಂದ್ರಗಡ: ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬರ ಆವರಿಸಿದೆ. ಈಗಾಗಲೇ ಮುಂಗಾರು ಬೆಳೆಗಳೆಲ್ಲ ಒಣಗಿ ಆರ್ಥಿಕ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಬೆಳೆಗಳಾದರೂ ಕೈ ಹಿಡಿಯುತ್ತವೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಹಿಂಗಾರು ಬೆಳೆಗಳೂ ಹಾಳಾಗುವ ಹಂತ ತಲುಪಿದ್ದು, ರೈತರಿಗೆ ಬರ ಸಿಡಿಲು ಬಡಿದಂತಾಗಿದೆ.

ಗಜೇಂದ್ರಗಡ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿ ಮಳೆಯಾಶ್ರಿತ ಬೆಳೆಗಳಾದ ಹೆಸರು 3,839 ಹೆಕ್ಟೇರ್‌, ಗೋವಿನಜೋಳ 9,840 ಹೆಕ್ಟೇರ್‌, ಶೇಂಗಾ 3,210 ಹೆಕ್ಟೇರ್‌, ಸೂರ್ಯಕಾಂತಿ 248 ಹೆಕ್ಟೆರ್‌, ಹತ್ತಿ 1,161 ಹೆಕ್ಟೇರ್‌, ಜೋಳ 962 ಹೆಕ್ಟೇರ್‌, ತೊಗರಿ 163 ಹೆಕ್ಟೇರ್‌, ಮೆಣಸಿನಕಾಯಿ 2,321 ಹೆಕ್ಟೇರ್‌, ಉಳ್ಳಾಗಡ್ಡಿ 997 ಹೆಕ್ಟೇರ್‌, ಸಜ್ಜೆ 500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.

ಈಗಾಗಲೇ ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿರುವ ರೈತರು ಹಿಂಗಾರಿಯಲ್ಲಿ ಆರ್ಥಿಕ ನಷ್ಟ ಸರಿದೂಗಿಸಿಕೊಳ್ಳುವ ನಿರೀಕ್ಷೆಯಲ್ಲಿ ಕಳೆದ ವರ್ಷ ಉತ್ತಮ ಇಳುವರಿ ಹಾಗೂ ಬೆಲೆ ಸಿಕ್ಕಿದ್ದ ಮೆಣಸಿನಕಾಯಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಮಳೆ, ತೇವಾಂಶ ಕೊರತೆ ಹಾಗೂ ಬಿಸಿಲಿನ ಪ್ರಖರತೆಗೆ ಗಿಡಗಳೆಲ್ಲ ಚೈತನ್ಯ ಕಳೆದುಕೊಂಡಿದ್ದು, ಇಳುವರಿಯಲ್ಲಿ ತೀವ್ರ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಅಲ್ಲದೆ ಕಡಲೆ, ಜೋಳ, ಕುಸುಬಿ ಬೆಳೆಗಳಿಗೂ ತೇವಾಂಶ ಕೊರತೆ ಹಾಗೂ ಕೀಟಬಾಧೆ ಉಂಟಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ ಕೊಳವೆಬಾವಿ ಹೊಂದಿರುವ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ನೀರು ಹಾಯಿಸಿ ಶೇಂಗಾ, ಮೆಣಸಿನಕಾಯಿ, ಅಲಸಂದಿ, ಸೂರ್ಯಕಾಂತಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ವಿದ್ಯುತ್‌ ಕಣ್ಣಾಮುಚ್ಚಾಲೆ, ರೋಗ ಬಾಧೆ ಹಾಗೂ ಬಿಸಿಲಿನ ತಾಪದಿಂದ ಇಳುವರಿ ಕುಂಠಿತವಾಗುವ ಆತಂಕದಲ್ಲಿದ್ದಾರೆ.

ಕೃಷಿ ಹೊಂಡ, ಹಳ್ಳ, ಕೆರೆಗಳಲ್ಲಿ ಅಲ್ಪ ಸ್ವಲ್ಪ ಸಂಗ್ರಹವಾಗಿದ್ದ ನೀರು ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗೆ ಪೂರಕವಾಗಿತ್ತು. ಆದರೆ ಮಳೆ ಬಾರದ ಹಿನ್ನೆಲೆಯಲ್ಲಿ ಆ ನೀರನ್ನು ರೈತರು ಆಯಿಲ್‌ ಎಂಜಿನ್‌, ಪಂಪ್‌ ಮೂಲಕ ಬೆಳೆಗಳಿಗೆ ಹಾಯಿಸಿರುವುದರಿಂದ ಪ್ರಾಣಿ ಪಕ್ಷಿಗಳು ಪರದಾಡುವಂತಾಗಿದೆ. ಹಿಂಗಾರಿ ಹಂಗಾಮಿನ ಬೆಳೆಗಳೂ ಕೈಕೊಟ್ಟರೆ ಜಾನುವಾರುಗಳಿಗೂ ಮೇವಿನ ಕೊರತೆ ಉಂಟಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಬಿಳಿ ಜೋಳದ ಬೆಳೆಯ ಸುಳಿಯನ್ನು ಲದ್ದಿ ಹುಳು ತಿಂದಿರುವುದು
ಬಿಳಿ ಜೋಳದ ಬೆಳೆಯ ಸುಳಿಯನ್ನು ಲದ್ದಿ ಹುಳು ತಿಂದಿರುವುದು
ಮೆಣಸಿನಕಾಯಿ ಗಿಡಕ್ಕೆ ಬೂದು ರೋಗ ಬಂದಿರುವುದು
ಮೆಣಸಿನಕಾಯಿ ಗಿಡಕ್ಕೆ ಬೂದು ರೋಗ ಬಂದಿರುವುದು
ಗಜೇಂದ್ರಗಡ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ವಿವಿಧ ಬೆಳೆಗಳನ್ನು ಒಳಗೊಂಡಂತೆ ಒಟ್ಟು 15861 ಹೆಕ್ಟೆರ್‌ ಪ್ರದೇಶದಲ್ಲಿ ನಷ್ಟ ಉಂಟಾಗಿದೆ.
– ರವಿಂದ್ರಗೌಡ ಪಾಟೀಲ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ ರೋಣ
ತಾಲ್ಲೂಕಿನಲ್ಲಿ ಸದ್ಯ ಮೇವಿನ ಕೊರತೆಯಿಲ್ಲ. ಜnವರಿವರೆಗೆ ಮೇವಿನ ಕೊರತೆ ಆಗುವುದಿಲ್ಲ. ನಮ್ಮ ಆಸ್ಪತ್ರೆಗೆ ಮೇವಿನ ಕೊರತೆಯಿದೆ ಎಂದು ಯಾವ ರೈತರು ಬಂದಿಲ್ಲ
– ಡಾ.ಜಯಶ್ರೀ ಪಾಟೀಲ, ಪಶು ವೈದ್ಯಾಧಿಕಾರಿ ಗಜೇಂದ್ರಗಡ

ನೀರಾವರಿ ಉಪಕರಣಗಳ ರೈತರ ವಂತಿಕೆ ದುಪ್ಪಟ್ಟು

ಕೊಳವೆ ಬಾವಿ ಹೊಂದಿರುವ ರೈತರು ತುಂತುರು ನೀರಾವರಿ ಮೂಲಕ ಕೃಷಿ ಮಾಡಲು ಸರ್ಕಾರ ಸೂಕ್ಷ್ಮ ನೀರಾವರಿ ಯೋಜನೆ ಅಡಿಯಲ್ಲಿ ರೈತರಿಂದ ಶೇ 10 ಹಾಗೂ ಸರ್ಕಾರ ಶೇ 90ರಷ್ಟು ಸಬ್ಸಿಡಿಯೊಂದಿಗೆ ತುಂತುರು ನೀರಾವರಿ ಉಪಕರಣಗಳನ್ನು ಪೂರೈಸುತ್ತಿತ್ತು. ಹೀಗಾಗಿ 2 ಇಂಚಿನ ತುಂತುರು ನೀರಾವರಿ ಉಪಕರಣಗಳ ಯುನಿಟ್‌ಗೆ ಮೂಲ ದರ ₹17786ರಲ್ಲಿ ರೈತರು ₹1746 ಕಟ್ಟಬೇಕಿತ್ತು. ಆದರೆ ಈ ಬಾರಿ ರಾಜ್ಯದಾದ್ಯಂತ ಟೆಂಡರ್‌ನಲ್ಲಿ ಉಪಕರಣಗಳ ಯುನಿಟ್‌ ದರ ಪರಿಷ್ಕರಣೆ ಮಾಡಿದ್ದು ಒಂದು ಯುನಿಟ್‌ಗೆ ಜಿಎಸ್‌ಟಿ ಸೇರಿದಂತೆ ಒಟ್ಟು ₹23568ರಲ್ಲಿ ₹19429ಗೆ ಸರ್ಕಾರ ಶೇ 90ರಷ್ಟು ಸಬ್ಸಿಡಿ ನೀಡುತ್ತಿದ್ದು ರೈತರು ₹4139 ವಂತಿಕೆ ಕಟ್ಟಬೇಕಿದೆ. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ದರ ಪರಿಷ್ಕರಣೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರೈತರಿಗೆ ನೆರವಾದ ಕೃಷಿ ಹೊಂಡ

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡರೆ ಕೆಂಪು ಭೂಮಿಯಿದ್ದರೆ ತಾಡಪತ್ರಿ ಸ್ಪಿಂಕ್ಲರ್‌ ಸೆಟ್‌ ಡಿಸೇಲ್‌ ಪಂಪ್‌ ಸೆಟ್‌ ಹಾಗೂ ಕಪ್ಪು ಭೂಮಿಗೆ ಸ್ಪಿಂಕ್ಲರ್‌ ಸೆಟ್‌ ಡಿಸೇಲ್‌ ಪಂಪ್‌ ನೀಡುವ ಯೋಜನೆಯಾಗಿತ್ತು. ಆ ಅವಧಿಯಲ್ಲಿ ಸಾಕಷ್ಟು ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದರು. ಮಳೆ ಕೈಕೊಟ್ಟಾಗ ಬೆಳೆಗಳನ್ನು ಉಳಿಸಿಕೊಳ್ಳಲು ಅಂದು ನಿರ್ಮಿಸಿದ ಕೃಷಿ ಹೊಂಡಗಳು ನೆರವಾಗುತ್ತಿವೆ. ಸದ್ಯ ಮೆಣಸಿನಕಾಯಿ ಕಡಲೆ ಜೋಳ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ‘ಕಳೆದ ವರ್ಷ ಮೆಣಸಿನಕಾಯಿ ಉತ್ತಮ ಫಸಲು ಹಾಗೂ ಬೆಲೆ ಸಿಕ್ಕಿದ್ದರಿಂದ ಈ ಬಾರಿಯೂ ಸುಮಾರು ₹80 ಸಾವಿರಕ್ಕೂ ಅಧಿಕ ಖರ್ಚು ಮಾಡಿ 3 ಎಕರೆಯಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದೇವೆ. ಈ ಬಾರಿ ಮಳೆ ಬರದ ಹಿನ್ನೆಲೆಯಲ್ಲಿ ಕೃಷಿ ಹೊಂಡದಲ್ಲಿರುವ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಬೆಳೆಗೆ ಬೂದು ರೋಗ ತಗುಲಿ ಬೆಳೆಯೆಲ್ಲ ಹಾಳಾಗುತ್ತಿದ್ದು ಆರ್ಥಿಕ ನಷ್ಟ ಉಂಟಾಗುವ ಭೀತಿ ಎದುರಾಗಿದೆʼ ಎಂದು ರಾಜೂರ ಗ್ರಾಮದ ಕಳಕೇಶ ಕಾಜಗಾರ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT