ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಿ.ಸಿ.ಪಾಟೀಲ ವಿರುದ್ಧ ಕಾನೂನು ಹೋರಾಟ: ವೀರೇಶ ಸೊಬರದಮಠ

ರೈತಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿಕೆ
Last Updated 3 ಜನವರಿ 2023, 13:07 IST
ಅಕ್ಷರ ಗಾತ್ರ

ಗದಗ: ‘ಸಚಿವ ಸಿ.ಸಿ.ಪಾಟೀಲಗೆ ತಾಕತ್ತಿದ್ದರೆ ಮಹದಾಯಿ ಹೋರಾಟದಿಂದ ನಾನು ಎಷ್ಟು ಹಣ, ಆಸ್ತಿ ಮಾಡಿಕೊಂಡಿದ್ದೇನೆ ಎಂಬುದರ ತನಿಖೆ ಮಾಡಿಸುವಂತೆ ಸಿಎಂಗೆ ಒತ್ತಾಯಿಸಲಿ’ ಎಂದು ರೈತಸೇನಾ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಸವಾಲು ಹಾಕಿದರು.

ಜ.1ರಂದು ನರಗುಂದದಲ್ಲಿ ನಡೆದ ಕಳಸಾ ಬಂಡೂರಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸಿ.ಸಿ.ಪಾಟೀಲ, ‘ವೀರೇಶ ಸೊಬರದಮಠ ಅವರದ್ದು ಹೊಟ್ಟೆಪಾಡಿನ ಹೋರಾಟ’ ಎಂದು ಜರಿದಿದ್ದರು. ಅದಕ್ಕೆ ಸಂಬಂಧಿಸಿದಂತೆ ಸೊಬರದಮಠ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಸಚಿವರ ವಿರುದ್ಧ ಕಾನೂನು ಹೋರಾಟ ನಡೆಸುವ ನಿರ್ಧಾರ ಪ್ರಕಟಿಸಿದರು.

‘ಹೊಟ್ಟೆಪಾಡಿನ ಹೋರಾಟ’ ಎಂದು ಹೀಯಾಳಿಸಿರುವ ಸಚಿವ ಸಿ.ಸಿ.ಪಾಟೀಲ ವಿರುದ್ಧ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ನರಗುಂದ ವೇದಿಕೆ ಹೋರಾಟವನ್ನು ಅಪಮಾನಿಸಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್‌ವರೆಗೂ ಕೊಂಡೊಯ್ಯಲಾಗುವುದು’ ಎಂದು ಎಚ್ಚರಿಸಿದರು.

‘ಶರಣರು, ಮೌಲ್ವಿಗಳು, ಪಾದ್ರಿಗಳು ಪಂಚಪೀಠಗಳ ಶ್ರೀಗಳು ನಮ್ಮ ಸುದೀರ್ಘ ಹೋರಾಟವನ್ನು ಬೆಂಬಲಿಸಿ ವೇದಿಕೆಗೆ ಬಂದು ಹೋಗಿದ್ದಾರೆ. ನಾನೇನಾದರೂ ಹೊಟ್ಟೆಪಾಡಿಗಾಗಿ ಈ ಹೋರಾಟ ಮಾಡಿದ್ದೇನಾ? ಎಂದು ಕೇಳಿ ಎಲ್ಲರಿಗೂ ಪತ್ರ ಬರೆಯುವೆ. ಜತೆಗೆ ಅವರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಅಮಿತ್‌ ಶಾ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥರಿಗೂ ಪತ್ರ ಬರೆಯುವೆ’ ಎಂದರು.

‘ಮಹದಾಯಿ ಸಂಬಂಧ ಮೂರು ಬಾರಿ ಉಪಾವಾಸ ಸತ್ಯಾಗ್ರಹ ಮಾಡಿದ್ದೇವೆ. ನೂರಾರು ಜನರಿಗೆ ಲಾಠಿ ಹೊಡೆತಗಳು ಬಿದ್ದವು. 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಇವೆಲ್ಲ ನಡೆದಿದ್ದು ಹೊಟ್ಟೆಪಾಡಿಗಾಗಿಯೇ ಎಂಬುದರ ಸಂಪೂರ್ಣ ತನಿಖೆ ಆಗಬೇಕು. ಅಂತಿಮವಾಗಿ ನಮ್ಮ ಹೋರಾಟ ಹೊಟ್ಟೆಪಾಡಿನದ್ದೇ ಎಂಬುದನ್ನು ಕೋರ್ಟ್‌ ತೀರ್ಮಾನಿಸುತ್ತದೆ. ಜತೆಗೆ ಸಿ.ಸಿ.ಪಾಟೀಲರ ಮುಂದಿನ ರಾಜಕೀಯ ಭವಿಷ್ಯವನ್ನು ದೈವ ನಿರ್ಣಯ ಮಾಡುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT