ಗದುಗಿನಲ್ಲಿ ‘ವಕಾರಸಾಲು’ ತೆರವು ಕಾರ್ಯಾಚರಣೆ ಆರಂಭ

ಮಂಗಳವಾರ, ಜೂಲೈ 16, 2019
28 °C

ಗದುಗಿನಲ್ಲಿ ‘ವಕಾರಸಾಲು’ ತೆರವು ಕಾರ್ಯಾಚರಣೆ ಆರಂಭ

Published:
Updated:

ಗದಗ: ಹಲವು ದಶಕಗಳಿಂದ ಲೀಜ್‌ದಾರರ ವಶದಲ್ಲಿದ್ದ ಗದಗ– ಬೆಟಗೇರಿ ನಗರಸಭೆಗೆ ಸೇರಿದ ಕೊಟ್ಯಂತರ ರೂಪಾಯಿ ಮೌಲ್ಯದ 54 ವಕಾರಸಾಲುಗಳನ್ನು (ಸರ್ಕಾರಿ ಜಾಗ) ವಾಪಸ್‌ ಪಡೆಯಲು ಶನಿವಾರ ನಸುಕಿನಲ್ಲೇ ಇಲ್ಲಿ ತೆರವು ಕಾರ್ಯಾಚರಣೆ ಪ್ರಾರಂಭವಾಯಿತು. 

ಜೆಸಿಬಿ ಬಳಸಿ ವಕಾರಸಾಲಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮಳಿಗೆಗಳು ಮತ್ತು ಮನೆಗಳನ್ನು ತೆರವುಗೊಳಿಸಲಾಯಿತು.

ಶನಿವಾರ ಬೆಳಿಗ್ಗೆ 5 ಗಂಟೆಯ ಒಳಗಾಗಿ ಸರಕುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಗರಸಭೆ, ಲೀಜ್‌ದಾರರಿಗೆ ಮತ್ತು ಇಲ್ಲಿನ ನಿವಾಸಿಗಳಿಗೆ ಸೂಚನೆ ನೀಡಿತ್ತು. ಇದರಿಂದ ಆತಂಕಗೊಂಡ ಮಳಿಗೆಗಳ ಮಾಲೀಕರು ಶುಕ್ರವಾರ ರಾತ್ರಿಯೇ ಸರಕುಗಳನ್ನು ಬೇರೆಡೆ ಸಾಗಿಸಿದ್ದರು. 

ಶುಕ್ರವಾರ ರಾತ್ರಿಯಿಡೀ ನಗರದಲ್ಲಿ ಪ್ರಕ್ಷುಬ್ದ ವಾತಾವರಣ ಇತ್ತು. ತೆರವು ಕಾರ್ಯಾಚರಣೆ ಮುಂದೂಡುವಂತೆ ಆಗ್ರಹಿಸಿ, ರಾತ್ರಿ 11 ಗಂಟೆಗೆ ಲೀಜ್‌ದಾರರು, ನಿವಾಸಿಗಳು ಜಿಲ್ಲಾಡಳಿತ ಭವನಕ್ಕೆ ತೆರಳಿ, ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ಪ್ರಯತ್ನ ನಡೆಸಿದರು. ಆದರೆ, ಇದಕ್ಕೆ ಜಿಲ್ಲಾಡಳಿತ ಮಣೆ ಹಾಕಲಿಲ್ಲ. 

ಕೋರ್ಟ್‌ ಆದೇಶದಂತೆ ಶನಿವಾರ ಬೆಳಿಗ್ಗೆ 6 ಗಂಟೆಗೆ ಜೆಸಿಬಿ ಬಳಸಿ ಕಾರ್ಯಾಚರಣೆ ಪ್ರಾರಂಭವಾಯಿತು. ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಕೆಲವು ನಿವಾಸಿಗಳು ಸರಕುಗಳನ್ನು ಬೇರೆಡೆಗೆ ಸಾಗಿಸಲು ಮಧ್ಯಾಹ್ನದವರೆಗೆ ಕಾಲಾವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಇದಕ್ಕೆ ಅವಕಾಶ ಲಭಿಸಿತು. 

ಕೋಟ್ಯಂತರ ಮೌಲ್ಯದ ಆಸ್ತಿ:  ಗದಗ ನಗರದ ಹೃದಯ ಭಾಗದಲ್ಲಿ 34 ಎಕರೆ ಪ್ರದೇಶದಲ್ಲಿ ಈ ವಕಾರಸಾಲುಗಳು ವಿಸ್ತರಿಸಿಕೊಂಡಿದ್ದು, ಇಲ್ಲಿ 3 ಸಾವಿರಕ್ಕೂ ಹೆಚ್ಚು ಮಳಿಗೆಗಳಿವೆ. ಹತ್ತಿ, ಶೇಂಗಾ ವ್ಯಾಪಾರ ಮಾಡುವ ಸಲುವಾಗಿ 1889ರಲ್ಲಿ 100 ವರ್ಷಗಳ ಒಪ್ಪಂದದ ಮೇರೆಗೆ ಇದನ್ನು ಲೀಜ್‌ದಾರರಿಗೆ ನೀಡಲಾಗಿತ್ತು. ಲೀಜ್‌ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್‌ ನೀಡಿರಲಿಲ್ಲ. 

‘ಜುಲೈ 13 ಮತ್ತು 14ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೂ ಸತತ ಕಾರ್ಯಾಚರಣೆ ನಡೆಯಲಿದೆ. ನಗರಸಭೆಗೆ ಸೇರಿದ ಆಸ್ತಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ ಅಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !