ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಗುಂದ: ಗಾಂಧಿ ಪ್ರತಿಮೆ ಸ್ಥಾಪನೆ ನನೆಗುದಿಗೆ

Last Updated 2 ಅಕ್ಟೋಬರ್ 2021, 2:32 IST
ಅಕ್ಷರ ಗಾತ್ರ

ಮುಳಗುಂದ: ಪಟ್ಟಣದ ಮಧ್ಯಭಾಗದಲ್ಲಿರುವ ಗಾಂಧಿ ಕಟ್ಟೆ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆ ಸ್ಥಾಪನೆ ಕೆಲಸ ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

ಹಲವು ವರ್ಷಗಳಿಂದ ಇಲ್ಲಿ ಗಾಂಧೀಜಿ ಅವರ ಪ್ರತಿಮೆ ಸ್ಥಾಪನೆ ಮಾಡಬೇಕು ಎನ್ನುವ ಸಾರ್ವಜನಿಕರ ಒತ್ತಾಯದಿಂದ 2015-16ರಲ್ಲಿ ಪಟ್ಟಣ ಪಂಚಾಯ್ತಿ ಆಡಳಿತ ಮಂಡಳಿ ಕಟ್ಟೆ ಜಾಗದಲ್ಲಿ 5X5 ಅಳತೆಯಲ್ಲಿ ಗಾಂಧಿ ಪ್ರತಿಮೆ ಸ್ಥಾಪನೆಗೆ ಎಸ್‌ಎಫ್‌ಸಿ ₹4.28 ಲಕ್ಷ ಅನುದಾನದಲ್ಲಿ ಕಾಮಗಾರಿ ಆರಂಭಿಸಿತ್ತು. ಆದರೆ ಪ್ರತಿಮೆ ಸುತ್ತಲೂ ಜಾಗದ ಕೊರತೆ ಆಗುತ್ತಿದೆ ಎನ್ನುವ ಕಾರಣಕ್ಕೆ ಕಾಮಗಾರಿ ನಿಲ್ಲಿಸಿದೆ.

ಹೆಚ್ಚುವರಿ ಜಾಗದ ಸಲುವಾಗಿ ಕೃಷಿ ಪತ್ತಿನ ಸಹಕಾರಿ ಸಂಘದ ಜಾಗ ಖರೀದಿಗೆ ಮುಂದಾಗಿ ಪಟ್ಟಣ ಪಂಚಾಯ್ತಿ ಮಾರ್ಚ್‌ 2017ರ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿದೆ. ಆದರೆ ಇಲ್ಲೀವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸಭೆ ಸಮಾರಂಭಗಳಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜಿಸಿ, ಅವರ ಆದರ್ಶಗಳನ್ನು ಅನುಸರಿಸುವಂತೆ ಭಾಷಣ ಮಾಡುವ ಜನಪ್ರತಿನಿಧಿಗಳು ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ನೋವಿನ ಸಂಗತಿಯಾಗಿದೆ ಎಂದು ಎಂ.ಎಸ್.ಕಣವಿ ಹೇಳಿದರು.

2017ರಲ್ಲಿ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿದಂತೆ ಸ್ಥಳೀಯ ನಿಧಿಯನ್ನು ಬಳಸಿಕೊಂಡು ಜಾಗ ಖರೀದಿ ಮಾಡಬೇಕಾಗಿದೆ. ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಪಂಚಾಯ್ತಿ ಆದಾಯ ಕಡಿಮೆ ಆಗಿದೆ. ಆದಾಯ ಸಂಗ್ರಹವಾದಲ್ಲಿ ಜಾಗ ಖರೀದಿ ನಂತರ ಗಾಂಧಿ ಪ್ರತಿಮೆ ಸ್ಥಾಪನೆ ಕಾಮಗಾರಿ ಆರಂಭಿಸಲಾಗುವುದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

ಜಾಗ ಕೊಡುವಂತೆ ಸಹಕಾರಿ ಸಂಘದ ನಿಬಂಧಕರಿಗೆ ಕೇಳಲಾಗಿತ್ತು. ಆದರೆ ಮಾರಾಟಕ್ಕೆ ಅವಕಾಶವಿಲ್ಲ ಎಂಬ ಆದೇಶ ಬಂದಿದೆ. ಕಾಮಗಾರಿಗೂ ಮುನ್ನ ಸಂಘದ ಅಭಿಪ್ರಾಯ ಕೇಳದೆ ಪಟ್ಟಣ ಪಂಚಾಯ್ತಿಯವರು ಸಂಘದ ಜಾಗ ಒತ್ತುವರಿ ಮಾಡಿ ಕಾಮಗಾರಿ ಮಾಡಿದ್ದರಿಂದ ಕೆಲಸ ಅಪೂರ್ಣವಾಗಿದೆ ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಂ.ವಾಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT