ಭಾನುವಾರ, ಏಪ್ರಿಲ್ 18, 2021
31 °C
ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಪರಿಷತ್‌ ಸಮಾರೋಪ ಸಮಾರಂಭ

‘ಕನ್ನಡದ ಉಳಿವಿಗೆ ಸಂಕಲ್ಪವೇ ಸಾಧನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಕನ್ನಡ ಇಂದು ಸಂಕಷ್ಟದಲ್ಲಿದೆ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಲು ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿವೆ. ಸಮ್ಮೇಳನಗಳನ್ನು ನಡೆಸುವುದರಿಂದ ಕನ್ನಡ ಉಳಿಯುವುದಿಲ್ಲ. ಕನ್ನಡದ ಉಳಿಸಲು, ಬೆಳೆಸಲು ಪ್ರತಿಯೊಬ್ಬರಲ್ಲೂ ಬದ್ಧತೆ ಇರಬೇಕು’ ಎಂದು ಮಾಜಿ ಸಚಿವ ಎಸ್‌.ಎಸ್‌.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಭಾನುವಾರ ನಡೆದ ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಿದ್ದೇವೆ. ಈಗ ತಾಯಂದಿರಲ್ಲೂ ಮಾತೃಭಾಷೆ ಉಳಿದಿಲ್ಲ. ಈ ಕಾರಣಕ್ಕಾಗಿ ಕನ್ನಡಕ್ಕೆ ಕುತ್ತು ಬರಲಾರಂಭಿಸಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಪ್ರತ್ಯೇಕತೆಯ ಕೂಗು ಎದ್ದಿರುವುದು ವಿಷಾದನೀಯ. ಉತ್ತರ ಕರ್ನಾಟಕವು ನಿರೀಕ್ಷಿತ ‍ಪ್ರಮಾಣದಲ್ಲಿ ಅಭಿವೃದ್ಧಿ ಆಗದಿರುವುದಕ್ಕೆ ರಾಜಕಾರಣಿಗಳೇ ಕಾರಣ. ಪ್ರತಿಯೊಬ್ಬ ಕನ್ನಡಿಗ ಕೂಡ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯನಾಗಬೇಕು. ಪ್ರತಿ ವರ್ಷ ಸದಸ್ಯತ್ವ ಶುಲ್ಕ ತುಂಬುವ ಕಸಾಪ ಆರ್ಥಿಕವಾಗಿ ಸಬಲತೆ ಸಾಧಿಸಲು ನೆರವಾಗಬೇಕು. ಸಾಹಿತ್ಯ ಪರಿಷತ್ ಚುನಾವಣೆ ರಾಜಕೀಯ ಚುನಾವಣೆಯಂತೆ ನಡೆಯಬಾರದು. ಈ ನಿಟ್ಟಿನಲ್ಲಿ ಗದಗ ಜಿಲ್ಲೆ ಕಸಾಪ ಚುನಾವಣೆ ಮಾದರಿಯಾಗಿ ನಡೆಯಲಿ’ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ಸಾಹಿತ್ಯ, ಸಂಗೀತ, ವ್ಯಾಪಾರ, ಉದ್ದಿಮೆ ಕ್ಷೇತ್ರಗಳಲ್ಲಿ ಗದಗ ಜಿಲ್ಲೆ ತನ್ನದೇ ಛಾಪು ಮೂಡಿಸಿದೆ. ಕನ್ನಡ ನೆಲ, ಜಲ ಸಂರಕ್ಷಣೆ ಕಾರ್ಯ ನಿರಂತರವಾಗಿ ನಡೆಯಬೇಕು. ಕನ್ನಡತನದ ಬದುಕು ನಮ್ಮದಾಗಬೇಕು. ಮನೆತನದಲ್ಲಿ ಕನ್ನಡ ಬೆಳೆದು ಬರಬೇಕು. ಇಲ್ಲವಾದರೆ ತಾಯಿಯನ್ನೇ ಮರೆತಂತೆ. ಓದುವುದು ಕೂಡ ಭಾಷೆಯನ್ನು ಉಳಿಸುವ ಕೆಲಸವೇ ಆಗಿದೆ. ಹಾಗಾಗಿ, ಎಲ್ಲರೂ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎ. ಹಿರೇಮಠ ಸ್ವಾಗತಿಸಿದರು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಎಂ.ಎ.ಯರಗುಡಿ, ಹನುಮರಡ್ಡಿ ಇಟಗಿ, ವಿಶ್ವನಾಥ ಉಳ್ಳಾಗಡ್ಡಿ , ಎಚ್.ಎಸ್.ದಳವಾಯಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಿದ ಅನೇಕ ಸಾಧರಕರನ್ನು ಸನ್ಮಾನಿಸಲಾಯಿತು.

‘ಅನುಭವದ ಪರಂಪರೆ ಬೇಕು’
‘ಸಾಹಿತ್ಯ ಸಮ್ಮೇಳನಗಳಿಗೆ ಜನರ ಕೊರತೆ ಇದೆ ಎಂದು ಎಲ್ಲರೂ ಮಾತನಾಡುತ್ತಾರೆ. ಆದರೆ, ಊಟೋಪಚಾರ ಇಲ್ಲದಿದ್ದರೆ ಮಠ ಮಾನ್ಯಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೂ ಜನರು ಬರುವುದಿಲ್ಲ ಎಂದು ಸಮ್ಮೇಳನದ ಸರ್ವಾಧ್ಯಕ್ಷರಾದ ರವೀಂದ್ರ ಕೊಪ್ಪರ ಅಭಿಪ್ರಾಯಪಟ್ಟರು.

‘ಎಲ್ಲದಕ್ಕೂ ಅನುಭವದ ಪರಂಪರೆ ಎಂಬುದು ಇರುತ್ತದೆ. ಸಮ್ಮೇಳನಗಳು ಕೂಡ ಇಂತಹ ಅನುಭವದ ಆಧಾರದ ಮೇಲೆಯೇ ಬದಾವಣೆಗೆ ಒಳಪಡುತ್ತವೆ’ ಎಂದು ಹೇಳಿದರು.

‘ಕನ್ನಡ ಶಿಕ್ಷಣದ ಮಾಧ್ಯಮವಾಗಲಿ ಎನ್ನುತ್ತೇವೆ. ನಾವೇ ನಮ್ಮ ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಿಗೆ ಸೇರಿಸುತ್ತೇವೆ. ಇಂತಹ ದ್ವಂದ್ವ ಬೇಡ. ಕನ್ನಡ ಉಳಿಸಿ, ಬೆಳೆಸುವಲ್ಲಿ ಕನ್ನಡ ಪರ ಸಂಘಟನೆ ಹೊಣೆಗಾರಿಕೆ ಜಾಸ್ತಿ ಇದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು