ಆರ್ಎಸ್ಎಸ್, ಬಿಜೆಪಿಗರಿಂದ ಮೀರ್ ಸಾದಿಕ್ ಕೆಲಸ: ಸಿದ್ದರಾಮಯ್ಯ

ಚಾಮರಾಜನಗರ: ‘ನಾನು ಮೀರ್ ಸಾದಿಕ್ ಕೆಲಸ ಮಾಡಿಲ್ಲ. ಆರ್‌ಎಸ್ಎಸ್, ಸಂಘಪರಿವಾರ ಹಾಗೂ ಬಿಜೆಪಿಯವರು ಆ ಕೆಲಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ತಿರುಗೇಟು ನೀಡಿದರು.
ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಿತೂರಿ ಇದೆ ಎಂದು ಆರೋಪಿಸಿ ಹಾಗೂ ಸಿದ್ದರಾಮಯ್ಯ ಅವರನ್ನು ಮೀರ್ ಸಾದಿಕ್ ಎಂದು ಉಲ್ಲೇಖಿಸಿ ರಾಜ್ಯ ಬಿಜೆಪಿ ಮಾಡಿರುವ ಟ್ವೀಟ್‌ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಹುಬ್ಬಳ್ಳಿಯಲ್ಲಿ ಗಲಭೆಯನ್ನು ಮೊದಲು ಹುಟ್ಟು ಹಾಕಿದ್ದು ಯಾರು? ಮೊದಲು ವಿಡಿಯೊ ಪೋಸ್ಟ್ ಮಾಡಿದವನು ಯಾರು? ಆತ ಬಜರಂಗದಳದ ಕಾರ್ಯಕರ್ತ. ಈಗ ಆತನನ್ನು ಬಂಧಿಸಲಾಗಿದೆ. ಆತ ಪೋಸ್ಟ್ ಹಾಕಿದ ನಂತರ ಗಲಾಟೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಶಿಕ್ಷೆಯನ್ನೂ ಕೊಡಲಿ. ಆದರೆ, ತಮ್ಮ ತಪ್ಪು, ಭ್ರಷ್ಟಾಚಾರ ಹಾಗೂ ಸುಳ್ಳುಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್ ಮೇಲೆ ಆರೋಪಿಸುತ್ತಿದ್ದಾರೆ’ ಎಂದರು.
ದ್ವೇಷದ ರಾಜಕಾರಣ: ಸಣ್ಣ ವಿಚಾರವನ್ನು (ಸಂತೋಷ್ ಪಾಟೀಲ ಆತ್ಮಹತ್ಯೆ) ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ‘ವ್ಯಕ್ತಿಯೊಬ್ಬ ಮೃತಪಟ್ಟಿರುವ ವಿಷಯಕ್ಕೆ ಹೋರಾಟ ಮಾಡುತ್ತಿರುವುದು ಸಣ್ಣ ವಿಚಾರವೇ? ಶಿವಮೊಗ್ಗದಲ್ಲಿ ಹರ್ಷನ ಶವ ಇಟ್ಟುಕೊಂಡು ನಿಷೇಧಾಜ್ಷೆ ಇದ್ದರೂ ಇವರು ಶವಯಾತ್ರೆ ಮಾಡಿದ್ದರು. ಬೆಳ್ತಂಗಡಿಯಲ್ಲಿ ದಿನೇಶ್ ಸತ್ತಾಗ ಯಾಕೆ ಪಾದಯಾತ್ರೆ ಮಾಡಲಿಲ್ಲ? ನರಗುಂದ ಮುಸ್ಲಿಂ ವ್ಯಕ್ತಿ ಸತ್ತಾಗ ಯಾಕೆ ಮಾಡಲಿಲ್ಲ? ಹರ್ಷನ ಕುಟುಂಬಕ್ಕೆ ₹25 ಲಕ್ಷ ಕೊಟ್ಟರು. ದಿನೇಶ್ ಕುಟುಂಬಕ್ಕೆ ಯಾಕೆ ಕೊಡಲಿಲ್ಲ? ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ಜನರ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.