ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ಚೆಂಡು ಹೂವು ಬೆಳೆದು ಲಾಭ ಕಂಡ ರೈತ

Published 17 ಮೇ 2024, 6:16 IST
Last Updated 17 ಮೇ 2024, 6:16 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿ, ಕೃಷಿ ಕೂಲಿಕಾರರ ಸಮಸ್ಯೆ, ಹೆಚ್ಚುತ್ತಿರುವ ಖರ್ಚು, ರೋಗರುಜಿನಗಳ ಬಾಧೆ ಸೇರಿದಂತೆ ಮತ್ತಿತರ ಸಮಸ್ಯೆಗಳಿಂದಾಗಿ ರೈತರು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಆದರೆ ಸಮಸ್ಯೆಗಳನ್ನು ಎದುರಿಸಿ ಕಷ್ಟಪಟ್ಟು ದುಡಿದು ಕೃಷಿಯಲ್ಲಿಯೇ ಯಶಸ್ಸು ಕಂಡ ರೈತರು ಕಡಿಮೆ. ಇಂಥವರಲ್ಲಿ ಲಕ್ಷ್ಮೇಶ್ವರದ ಪ್ರಗತಿಪರ ರೈತ ಶಿವನಗೌಡ ಪಾಟೀಲರೂ ಒಬ್ಬರು.

ಶಿವನಗೌಡ ರೈತ ಕುಟುಂಬದಿಂದ ಬಂದವರು. ಸದ್ಯ 13 ಎಕರೆ ಸ್ವಂತ ಮತ್ತು ಏಳು ಎಕರೆ ಬಾಡಿಗೆ ಆಧಾರದ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತ ಪ್ರಯೋಗಶೀಲ ರೈತ ಎನಿಸಿದ್ದಾರೆ. ಏಳು ಎಕರೆಯಲ್ಲಿ ಚೆಂಡು ಹೂವು ಬೆಳೆಯುತ್ತಿರುವ ಇವರು, ಅಂತರ್ ಬೆಳೆಯಾಗಿ ಪಪ್ಪಾಯ, ಅಡಿಕೆಯನ್ನೂ ಬೆಳೆಯುತ್ತಿದ್ದಾರೆ.

ಎರಡು ಎಕರೆಯಲ್ಲಿ ಉಪ್ಪಿನಕಾಯಿ ತಯಾರಿಸಲು ಬಳಸುವ ಗರಕಿನ್ ತಳಿಯ ಮಿಡಿ ಸೌತೆ ಬೆಳೆಯುತ್ತಿದ್ದು ಅದೇ ಭೂಮಿಯಲ್ಲಿ ಅಂತರ್ ಬೆಳೆಯಾಗಿ ಪಪ್ಪಾಯ ಸಸಿಗಳನ್ನೂ ನಾಟಿ ಮಾಡಿದ್ದಾರೆ. ಹುಬ್ಬಳ್ಳಿಯ ಕ್ಯಾನ್ ಆಗ್ರೋಟೆಕ್ ಕಂಪನಿಯವರು ಮಿಡಿ ಸೌತೆ ಬೆಳೆದುಕೊಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದಾಗಿ ಇವರಿಗೆ ಸವತೇಕಾಯಿ ಮಾರಾಟದ ಸಮಸ್ಯೆ ಇಲ್ಲ. ಇದರೊಂದಿಗೆ ಎರಡು ಎಕರೆಯಲ್ಲಿ ಹೀರೇಕಾಯಿ ಕೂಡ ಬೆಳೆಯುತ್ತಿದ್ದು, ಒಂದೆರಡು ವಾರಗಳಲ್ಲಿ ಕಟಾವು ಶುರುವಾಗಲಿದೆ.

ಮುಖ್ಯವಾಗಿ ಇವರಿಗೆ ಚೆಂಡು ಹೂವಿನ ಕೃಷಿ ಲಾಭ ತಂದು ಕೊಡುತ್ತಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಪ್ರತಿ ಸಸಿಗೆ ಮೂರು ದರದಲ್ಲಿ ಒಟ್ಟು 70 ಸಾವಿರ ಹೂವಿನ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ನಾಟಿ ಮಾಡಿದ ಒಂದು ತಿಂಗಳ ನಂತರ ಕಟಾವು ಪ್ರಾರಂಭವಾಗುತ್ತದೆ.

ಪ್ರತಿ ಎಕರೆಗೆ ₹25ಸಾವಿರದಿಂದ ₹30 ಸಾವಿರ ಖರ್ಚು ಮಾಡಿದ್ದಾರೆ. ಕೆಜಿ ಹೂವಿನ ₹20ಸಾವಿರ ₹25 ಸಾವಿರ ಇದ್ದು, ಚೆಂಡು ಹೂವಿನ ಕೃಷಿಯಿಂದ ಎಕರೆಗೆ ₹50ಸಾವಿರದಿಂದ ₹60 ಸಾವಿರ ಆದಾಯ ಬರುತ್ತಿದ್ದು, ಎಲ್ಲ ಖರ್ಚು ತೆಗೆದು ಎಕರೆಗೆ ₹25ಸಾವಿರದಿಂದ ₹30 ಸಾವಿರ ಲಾಭ ಆಗುತ್ತದೆ ಎಂದು ಶಿವನಗೌಡ ಹೇಳುತ್ತಾರೆ.

ಹೂವನ್ನು ಸ್ಥಳೀಯ ಮಾರುಕಟ್ಟೆಯಲ್ಲಿಯೇ ಹೋಲ್‍ಸೇಲ್ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಮಿಡಿ ಸೌತೆ ಕೆಜಿಗೆ ₹9 ದರದಲ್ಲಿ ಖರೀದಿಸಲು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಉತ್ತಮ ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇರುವ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತ ಲಾಭ ಮಾಡಿಕೊಳ್ಳುತ್ತಿರುವ ಇವರು ಇತರ ರೈತರಿಗೆ ಮಾದರಿ ಆಗಿದ್ದಾರೆ.

ಲಕ್ಷ್ಮೇಶ್ವರದ ರೈತ ಶಿವನಗೌಡ ಪಾಟೀಲರು ಬೆಳೆಯುತ್ತಿರುವ ಉಪ್ಪಿನಕಾಯಿ ಸವತೇಕಾಯಿ
ಲಕ್ಷ್ಮೇಶ್ವರದ ರೈತ ಶಿವನಗೌಡ ಪಾಟೀಲರು ಬೆಳೆಯುತ್ತಿರುವ ಉಪ್ಪಿನಕಾಯಿ ಸವತೇಕಾಯಿ
ಲಕ್ಷ್ಮೇಶ್ವರದ ರೈತ ಶಿವನಗೌಡ ಪಾಟೀಲರ ಚಂಡು ಹೂವಿನ ಹೊಲ
ಲಕ್ಷ್ಮೇಶ್ವರದ ರೈತ ಶಿವನಗೌಡ ಪಾಟೀಲರ ಚಂಡು ಹೂವಿನ ಹೊಲ
ಬರಗಾಲದಲ್ಲೂ ಕೊಳವೆ ಬಾವಿ ನೀರಿನಿಂದ ಚೆಂಡು ಹೂವು ಬೆಳೆಯುತ್ತಿದ್ದೇನೆ. ಒಳ್ಳೆ ಲಾಭ ಆಗುತ್ತಿದೆ. ಇದೇ ಬೆಳೆಯಲ್ಲಿ ಅಂತರ್ ಬೆಳೆಯಾಗಿ ನಾಟಿ ಮಾಡಿದ ಪಪ್ಪಾಯ ಸಸಿಗಳು ತೇವಾಂಶದ ಕೊರತೆಯಿಂದಾಗಿ ಹಾಳಾಗಿವೆ
–ರೈತ ಶಿವನಗೌಡ ಪಾಟೀಲ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT