ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಲಿಂ.ಹಾನಗಲ್ ಕುಮಾರ ಶಿವಯೋಗಿಗಳ 157ನೇ ಜಯಂತ್ಯುತ್ಸವದ ಅಂಗವಾಗಿ ನಾಡಿನ ವಿವಿಧ ಮಠಾಧೀಶರು ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸೋಮವಾರ ಸದ್ಭಾವನಾ ಪಾದಯಾತ್ರೆ ಕೈಗೊಂಡರು.
ಪಾದಯಾತ್ರೆಯು ಸಂಚರಿಸುವ ಮಾರ್ಗಗಳಲ್ಲಿ ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ರಸ್ತೆಗಳನ್ನು ಅಲಂಕರಿಸಿದ್ದರು. ಭಜನೆ ಹಾಗೂ ವಿವಿಧ ಮಂಗಳ ವಾದ್ಯಮೇಳಗಳು ಪಾದಯಾತ್ರೆಗೆ ಮೆರುಗು ನೀಡಿದವು.
ಪಾದಯಾತ್ರೆಯ ಉದ್ದಕ್ಕೂ ಭಕ್ತರು ಸ್ವಾಮೀಜಿಗಳು ಹಾಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಹೂವು ಮಳೆಗರೆದು ಸ್ವಾಗತಿಸಿದರು. ಸ್ವಾಮೀಜಿಗಳು ಹಾನಗಲ್ ಕುಮಾರೇಶ್ವರರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವುದರ ಜೊತೆಗೆ ಭಕ್ತರಿಗೆ ಉಚಿತವಾಗಿ ರುದ್ರಾಕ್ಷಿ, ಭಸ್ಮ ಧಾರಣೆ ಮಾಡಿದರು. ದುರಾಚಾರ ಹಾಗೂ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಸದಾಚಾರಿಗಳಾಗಿ ಬಾಳುವಂತೆ ತಿಳಿವಳಿಕೆ ಹೇಳಿದರು.
ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನವೀರ ಸ್ವಾಮೀಜಿ, ಡಾ.ಅಲ್ಲಮಪ್ರಭು ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಡಾ.ಹಿರಿಯ ಶಾಂತವೀರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಪ್ರವಚನಕಾರ ಅನ್ನದಾನೀಶ್ವರ ಶಾಸ್ತ್ರೀಗಳು, ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಶಿವಕುಮಾರ ದೇವರು, ಚೆನ್ನಬಸವ ಸ್ವಾಮೀಜಿ, ನಿರಂಜನ ದೇವರು ಹಾಗೂ ಮತ್ತಿತರ ಸ್ವಾಮೀಜಿಗಳು, ದೇವರುಗಳು ಪಾಲ್ಗೊಂಡಿದ್ದರು.
ಹಾರೋಗೇರಿ, ಹಿರೇವಡ್ಡಟ್ಟಿ: ಜಯಂತಿ ಅಂಗವಾಗಿ ನಾಡಿನ ವಿವಿಧ ಸ್ವಾಮೀಜಿಗಳ ತಂಡವು ತಾಲ್ಲೂಕಿನ ಹಾರೋಗೇರಿ ಹಾಗೂ ಹಿರೇವಡ್ಡಟ್ಟಿ ಗ್ರಾಮಗಳಲ್ಲಿ ಸೋಮವಾರ ಸದ್ಭಾವನಾ ಪಾದಯಾತ್ರೆ ಕೈಗೊಳ್ಳಲಾಯಿತು. ಗ್ರಾಮದ ವಿವಿಧ ಭಾಗಗಳಲ್ಲಿ ಸಂಚರಿಸಿ ಗ್ರಾಮಸ್ಥರಿಗೆ ವಿಭೂತಿ ಹಾಗೂ ರುದ್ರಾಕ್ಷಿ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.