ಗದಗ: ಜಿಲ್ಲೆಯ ಪ್ರಮುಖ ಬೆಳೆಯಾದ ಹೆಸರು ಈ ಬಾರಿ 1.31 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಮಳೆ ಕೂಡ ಚೆನ್ನಾಗಿ ಆಗಿದ್ದರಿಂದ ಉತ್ತಮ ಇಳುವರಿ ಸಿಕ್ಕಿದೆ. ಆದರೆ, ಹೆಸರುಕಾಳಿಗೆ ಬೆಲೆ ಸಿಗದೇ ರೈತರು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯ ಬಹುತೇಕ ರೈತರು ಪೂರ್ವ ಮುಂಗಾರಿನಿಂದಲೇ ಹೆಸರು ಬಿತ್ತನೆ ಮಾಡಿದ್ದರು. ಉಳಿದ ಕೆಲವರು ಮುಂಗಾರು ಆರಂಭಗೊಂಡ ನಂತರ ಹೆಸರು ಬಿತ್ತಿದ್ದರು. ಜಿಟಿಜಿಟಿ ಮಳೆ, ತುಂತುರು ಮಳೆ ಹೆಸರು ಬೆಳೆಗೆ ಉತ್ತಮ ಕಸುವು ನೀಡಿತು. ರೈತರ ಹೊಲದಲ್ಲಿ ಹೆಸರಿನ ಹಸಿರು ನಳನಳಿತು. ಗಿಡದಲ್ಲಿ ಗಟ್ಟಿಕಾಳು ಕಟ್ಟಿದವು. ಈಚೆಗೆ ಕೆಲವು ದಿನಗಳಿಂದ ಹೆಸರು ಕಟಾವು ಆರಂಭಗೊಂಡಿದ್ದು, ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಹೆಸರುಕಾಳಿನ ಆವಕ ಆಗುತ್ತಿದೆ. ಆದರೆ, ಹೆಸರುಕಾಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಸಿಗುತ್ತಿಲ್ಲ. ಇದರ ನಡುವೆ ದಲ್ಲಾಳಿಗಳ ‘ಬೆಲೆ ನಿಗದಿ’ ಆಟ ರೈತರನ್ನು ಸುಸ್ತಾಗಿಸಿದೆ.
ಒಬ್ಬೊಬ್ಬ ರೈತರು ಕನಿಷ್ಠ 5ರಿಂದ ಗರಿಷ್ಠ 40 ಎಕರೆಯಲ್ಲಿ ಹೆಸರು ಬೆಳೆದಿದ್ದಾರೆ. ಬಿತ್ತನೆ, ಕಳೆ ಕೀಳುವುದು, ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಬೆಳೆ ಕಟಾವು ಆಗಿ ಮಾರುಕಟ್ಟೆಗೆ ತರುವ ವೇಳೆಗೆ ಪ್ರತಿಯೊಬ್ಬ ರೈತರು ಕೂಡ ಎಕರೆಗೆ ಕನಿಷ್ಠ ₹10 ಸಾವಿರದಿಂದ ಗರಿಷ್ಠ ₹15 ಸಾವಿರದವರೆಗೆ ಖರ್ಚು ಮಾಡಿದ್ದಾರೆ. ಒಳ್ಳೆ ಇಳುವರಿ ಸಿಕ್ಕರೆ ಎಕರೆಗೆ ಆರು ಚೀಲ ಹೆಸರುಕಾಳು ಸಿಗುತ್ತದೆ. ಆದರೆ, ರೈತರಿಗೆ ಜಿಲ್ಲೆಯ ಎಪಿಎಂಸಿಗಳಲ್ಲಿ ₹4 ಸಾವಿರದಿಂದ ₹6 ಸಾವಿರದವರೆಗೆ ಮಾತ್ರ ಬೆಲೆ ಸಿಗುತ್ತಿದೆ. ಗುಣಮಟ್ಟ ಕಡಿಮೆ ಇರುವ ಹೆಸರುಕಾಳಿಗೆ ₹3,500ಕ್ಕಿಂತಲೂ ಕಡಿಮೆ ಬೆಲೆ ನಿಗದಿ ಆಗುತ್ತಿದೆ. ಇಷ್ಟು ಬೆಲೆ ಸಿಕ್ಕರೆ ಹಾಕಿದ ಖರ್ಚು, ಶ್ರಮಕ್ಕೆ ಬೆಲೆ ಸಿಗುವುದಾದರೂ ಹೇಗೆ ಎಂದು ರೈತರು ಚಿಂತೆಗೀಡಾಗಿದ್ದಾರೆ.
ರೋಣ ತಾಲ್ಲೂಕಿನ ಬೆಳವಣಿಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಸರುಕಾಳು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಒಣಗಲು ಹಾಕಿದ ಹೆಸರುಕಾಳು ತುಂತುರು ಮಳೆಗೆ ಸಿಲುಕಿ ಮೊಳಕೆ ಬಂದು, ಕಪ್ಪಾಗುತ್ತಿದೆ. ಒಂದು ತಿಂಗಳಿಂದ ಜಿಲ್ಲೆಯಲ್ಲಿ ಮಳೆ ಆಗುತ್ತಿರುವ ಕಾರಣ ಹೆಸರು ಬೆಳೆಗೆ ಹೆಚ್ಚು ತೇವಾಂಶವಾಗಿ ಇಳುವರಿ ಕುಂಠಿತಗೊಂಡಿದೆ. ಜತೆಗೆ ತುಂಗಭದ್ರಾ ಹಾಗೂ ಮಲಪ್ರಭಾ ನದಿ, ಬೆಣ್ಣೆ ಹಳ್ಳದ ಪ್ರವಾಹದಿಂದ ರೈತರ ಬೆಳೆ ಹಾಳಾಗಿದೆ. ಅಳಿದುಳಿದ ಹೆಸರು ಬೆಳೆ ಕಟಾವು ಮಾಡಿಕೊಂಡು ರೈತರು ಬೆಳೆಯನ್ನು ಎಪಿಎಂಸಿಗೆ ತಂದರೆ ಯೋಗ್ಯ ಬೆಲೆ ಸಿಗುತ್ತಿಲ್ಲ. ದಲ್ಲಾಳಿಗಳು ಕ್ವಿಂಟಲ್‌ಗೆ ₹4 ಸಾವಿರದಿಂದ ₹5 ಸಾವಿರಕ್ಕೆ ಕೇಳುತ್ತಿದ್ದಾರೆ. ಬೆಂಬಲ ಬೆಲೆ ಯೋಜನೆ ಅಡಿ ಹೆಸರು ಬೆಳೆ ಖರೀದಿ ಕೇಂದ್ರಗಳು ಸಕಾಲದಲ್ಲಿ ಆರಂಭಗೊಳ್ಳದ ಕಾರಣ ಅನೇಕ ರೈತರು ಹಣದ ಅಡಚಣೆಯಿಂದ ಈಗಾಗಲೇ ಹೆಸರುಕಾಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.
ಹೆಸರು ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕೆಂದು ಕಳೆದ ಮೂರು ವಾರಗಳಿಂದ ಹೆಸರು ಬೆಳೆಗಾರರು ಒತ್ತಾಯಿಸುತ್ತಲೇ ಇದ್ದಾರೆ. ಈಗಾಗಲೇ ಹೆಸರು ಬೆಳೆ ಮಾರಾಟಕ್ಕೆ ಬರುತ್ತಿದೆ. ಆದರೆ ಖರೀದಿ ಇನ್ನೂ ಆರಂಭ ಆಗದೆ ಇರುವುದರಿಂದ ವ್ಯಾಪಾರಸ್ಥರು ಕೇಳಿದ ಬೆಲೆಗೆ ರೈತರು ಫಸಲು ಮಾರುವಂತಾಗಿದೆ.
₹3 ಸಾವಿರದಿಂದ ಹಿಡಿದು ಗುಣಮಟ್ಟದ ಹೆಸರು ₹7 ಸಾವಿರದವರೆಗೆ ಮಾರಾಟವಾಗುತ್ತಿದೆ. ಸರ್ಕಾರ ₹8,682 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ. ಈಗಾಗಲೇ ಶೇ 40ರಿಂದ ಶೇ 70ರಷ್ಟು ರೈತರು ಹೆಸರು ಮಾರಿದ್ದಾರೆಂಬ ಮಾಹಿತಿ ಇದೆ.
‘ಕಳೆದ ಎರಡು ಮೂರು ದಿನಗಳ ಹಿಂದೆ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಕೇಂದ್ರ ಶುರುವಾದರೆ ಉಳಿದ ರೈತರಿಗಾದರೂ ಸ್ವಲ್ಪ ಲಾಭ ಆಗುತ್ತದೆ. ಇಲ್ಲದಿದ್ದರೆ ಅವರಿಗೆ ಬಹಳಷ್ಟು ನಷ್ಟ ಉಂಟಾಗುತ್ತದೆ.
ಆದಕಾರಣ ಬೇಗ ಹೆಸರು ಖರೀದಿ ಕೇಂದ್ರ ಆರಂಭಿಸಿ ಬೆಳೆಗಾರರ ಹಿತ ಕಾಪಾಡಬೇಕು’ ಎಂದು ಲಕ್ಷ್ಮೇಶ್ವರದ ಪ್ರಗತಿಪರ ರೈತ ಬಸವರಾಜ ಬೆಂಡಿಗೇರಿ ಆಗ್ರಹಿಸಿದ್ದಾರೆ.
ಪೂರಕ ಮಾಹಿತಿ: ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್.ಹಣಗಿ, ಬಸವರಾಜ ಹಲಕುರ್ಕಿ, ಶ್ರೀಶೈಲ ಎಂ.ಕುಂಬಾರ.
ಹೆಸರು ಬೆಳೆಯ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಈಗಾಗಲೇ ಹೋರಾಟ ಮಾಡಲಾಗಿದೆ. ಖರೀದಿ ಕೇಂದ್ರ ತೆರೆಯಲು ಸರ್ಕಾರ ಸಮ್ಮತಿಸಿದ್ದು ತಾಲ್ಲೂಕಿನ ಎರಡು ಹೋಬಳಿಗಳಲ್ಲಿ ತಕ್ಷಣ ಖರೀದಿ ಕೇಂದ್ರ ಆರಂಭಿಸಬೇಕುಶಿವಾನಂದ ಇಟಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುಂಡರಗಿ
ಅಗತ್ಯ ವಿದ್ದಾಗ ಬೆಂಬಲ ಬೆಲೆ ಕೇಂದ್ರ ಸ್ಥಾಪಿಸದೇ ರೈತರು ತಮ್ಮ ಫಸಲನ್ನು ಮಾರಿದ ಮೇಲೆ ವರ್ತಕರ ಹಿತಾಸಕ್ತಿಗೆ ಖರೀದಿ ಕೇಂದ್ರ ತೆರೆಯುವ ಸರ್ಕಾರದ ಕ್ರಮ ಖಂಡನೀಯ. ಆದ್ದರಿಂದ ಬೆಂಬಲ ಬೆಲೆ ಯೋಜನೆ ಅಡಿ ಶಾಶ್ವತ ಹೆಸರು ಬೆಳೆ ಖರೀದಿ ಕೇಂದ್ರ ಸ್ಥಾಪಿಸಬೇಕುವೀರೇಶ ಸೊಬರದಮಠ ಅಧ್ಯಕ್ಷರು ರೈತ ಸೇನೆ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.