ಗುರುವಾರ , ನವೆಂಬರ್ 26, 2020
19 °C
ಮನೆಗೆ ಹೋಗಿ ಪಾಠ: ಶಿಕ್ಷಕಿಯರ ಪ್ರಯತ್ನಕ್ಕೆ ಪೋಷಕರ ಶ್ಲಾಘನೆ

ಲಕ್ಷ್ಮೇಶ್ವರ | ಶಿಷ್ಯರ ಮನೆಗಳತ್ತ ಶಿಕ್ಷಕಿಯರ ಹೆಜ್ಜೆ

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಕೊರೊನಾ ಪರಿಣಾಮ ಶಾಲೆ ಆರಂಭವಾಗದಿದ್ದರೂ ಪಟ್ಟಣದ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಪ್ರಮೀಳಾ ಸಾಂಗ್ಲೀಕರ್ ಮತ್ತು ರಂಭಾಪುರಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜಯಶ್ರೀ ಹಬೀಬ ಅವರು ಮಕ್ಕಳ ಮನೆಗಳಿಗೆ ತೆರಳಿ ಪಾಠ ಮಾಡುತ್ತಿದ್ದಾರೆ. ಶಿಕ್ಷಕಿಯರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತಿವರ್ಷ ಈ ವೇಳೆಗೆ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದರು. ಆದರೆ ಕೊರೊನಾದಿಂದಾಗಿ ಇನ್ನೂ ಶಾಲೆಗಳು ತೆರೆದಿಲ್ಲ. ಹೀಗಾಗಿ ಇಡೀ ದಿನ ಮಕ್ಕಳು ಮನೆಯಲ್ಲಿಯೇ ಕಾಲ ಕಳೆಯುವ ಪರಿಸ್ಥಿತಿ ಇದ್ದು ಇದು ಪಾಲಕರಿಗೆ ತುಂಬ ಕಿರಿಕಿರಿ ಎನಿಸಿದೆ. ಈಗ ದಿನಾಲೂ ಮಕ್ಕಳನ್ನು ಸಂಭಾಳಿಸುವುದೇ ಅವರಿಗೆ ದೊಡ್ಡ ಸವಾಲಾಗಿದೆ. ಆದರೆ ಶಿಕ್ಷಕಿಯರ ಅಕ್ಷರ ಸೇವೆ ಮಕ್ಕಳಿಗೆ ವಿದ್ಯೆಯೊಂದಿಗೆ ಪಾಲಕರು ಅನುಭವಿಸುತ್ತಿದ್ದ ಸಮಸ್ಯೆಯನ್ನೂ ದೂರ ಮಾಡಿದೆ.

ಶಾಲೆ ವೇಳೆಗೆ ತೆರಳಿ ಅಕ್ಕಪಕ್ಕದ ಮನೆಗಳಲ್ಲಿ ಇರುವ ತಮ್ಮ ಶಾಲೆಯ ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ಪರಿಹಾರ ಬೋಧನೆ ಮಾಡುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಇಬ್ಬರೂ ಶಿಕ್ಷಕಿಯರು ತಮ್ಮ ಕರ್ತವ್ಯ ನಿರ್ವಹಿಸುತ್ತಿರುವುದು ಶಿಕ್ಷಕ ವಲಯದಲ್ಲಿ ಸಂಚಲನ ಮೂಡಿಸಿದೆ.

‘ಮಕ್ಕಳ ಪಾಲಕರ ಮೊಬೈಲ್ ನಂಬರ್‌ಗಳಿಗೆ ಫೋನ್ ಮಾಡಿ ನಾವು ಬರುವ ವಿಷಯವನ್ನು ತಿಳಿಸುತ್ತೇವೆ. ನಾವು ಹೋಗುವಷ್ಟರಲ್ಲಿ ಮಕ್ಕಳು ಸೇರಿರುತ್ತಾರೆ. ಅವರಿಗೆ ಅಕ್ಷರಭ್ಯಾಸ ಮಾಡಿಸುತ್ತೇವೆ. ಗಣಿತದಲ್ಲಿ ಮಗ್ಗಿ, ಸಂಕಲನ, ವ್ಯವಕಲನ ಲೆಕ್ಕಗಳನ್ನು ಹೇಳಿಕೊಡುತ್ತೇವೆ. ಇನ್ನು ಪ್ರತಿದಿನ 20 ಇಂಗ್ಲಿಷ್‌ ಶಬ್ದ ಮತ್ತು ಕನ್ನಡ ಒತ್ತಕ್ಷರಗಳನ್ನು ಹೇಳಿಕೊಡುತ್ತೇವೆ. ನಮ್ಮ ಈ ಕೆಲಸಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಪಾಲಕರು ಸಂತಸಗೊಂಡಿದ್ದಾರೆ. ನನ್ನ ಈ ಕಾರ್ಯಕ್ಕೆ ಶಾಲೆಯ ಶಿಕ್ಷಕರಾದ ಎ.ಎಫ್. ನೀಲಗುಂದ ಮತ್ತು ಬಿ.ಬಿ. ಹುಲಗೂರ ಹಾಗೂ ಸಿಆರ್‌ಪಿ ಸತೀಶ ಬೋಮಲೆ ಅವರ ಸಹಕಾರ ಬಲ ನೀಡಿದೆ’ ಎಂದು ಶಿಕ್ಷಕಿ ಪ್ರಮೀಳಾ ಸಾಂಗ್ಲಿಕರ ಹೇಳಿದರು.

‘ಸಾಲಿ ಸುರು ಆಗದ ಮಕ್ಕಳು ಖಾಲಿ ತಿರಗಾಕತ್ತಿದ್ದರು. ದಿನಾ ಅವರನ್ನು ಕಾಯದ ನಮಗ ಕೆಲಸ ಆಗಿತ್ತು. ಆದರ ಈಗ ಟೀಚರ್ ಮನಿಗೆ ಬಂದು ಪಾಠ ಹೇಳಿಕೊಡಾಕತ್ತಾರ. ಹಿಂಗಾಗಿ ಮಕ್ಕಳು ಓದಾಕತ್ತಾರ್ರೀ’ ಎಂದು ಪಾಲಕರಾದ ಎಸ್.ವೈ. ನಾಗಮ್ಮನವರ, ಗಂಗವ್ವ ಹುಲಕೋಟಿ, ಕೋಟೆಪ್ಪ ನಂದೆಣ್ಣವರ ಆನಂದ ವ್ಯಕ್ತಪಡಿಸಿದರು.

ಶಿಕ್ಷಕಿಯರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕೊರೊನಾ ಹೆಸರಿನಲ್ಲಿ ಮಕ್ಕಳ ಭವಿಷ್ಯ ಮಂಕಾಗಬಾರದು. ಈ ನಿಟ್ಟಿನಲ್ಲಿ ಉಳಿದ ಶಿಕ್ಷಕ ಶಿಕ್ಷಕಿಯರು ಚಿಂತನೆ ಮಾಡಬೇಕು ಎಂದು ಬಿಇಒ ಆರ್.ಎಸ್. ಬುರುಡಿ ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು