ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟದಲ್ಲಿ ಹುಳು, ಕಲ್ಲು; ಮನೆಯಿಂದ ಬುತ್ತಿ ತರುವ ಮಕ್ಕಳು

ರೋಣದ ಗೌಡರ ಓಣಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ
Last Updated 5 ಡಿಸೆಂಬರ್ 2019, 13:50 IST
ಅಕ್ಷರ ಗಾತ್ರ

ರೋಣ: ಪಟ್ಟಣದ ಗೌಡರ ಓಣಿಯ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನ ನೀಡುವ ಬಿಸಿಯೂಟದಲ್ಲಿ ಹುಳು, ಕಲ್ಲು ಇರುವುದರಿಂದ 100ಕ್ಕೂ ಹೆಚ್ಚು ಮಕ್ಕಳು ಕಳೆದ ಮೂರು ವಾರಗಳಿಂದ ಮನೆಯಿಂದಲೇ ಬುತ್ತಿ ತಂದು ಮಧ್ಯಾಹ್ನ ಊಟ ಮಾಡುತ್ತಿದ್ದಾರೆ.

ಮಧ್ಯಾಹ್ನ ಊಟಕ್ಕೆ ಬಿಡುವ ಸಮಯದಲ್ಲಿ ಮನೆಯಿಂದ ಬುತ್ತಿ ತರುವ ಮಕ್ಕಳು ಪ್ರತ್ಯೇಕ ಸಾಲಿನಲ್ಲಿ ಕುಳಿತು ಊಟ ಮಾಡುತ್ತಾರೆ. ಕೆಲವು ಮಕ್ಕಳು ಶಾಲೆಯಲ್ಲಿ ನೀಡುವ ಬಿಸಿಯೂಟವನ್ನೇ ಊಟ ಮಾಡುತ್ತಿದ್ದಾರೆ. ‘ಬಿಸಿಯೂಟದಲ್ಲಿ ಹಲವು ಬಾರಿ ನುಸಿ, ಕಲ್ಲು ಕಾಣಿಸಿಕೊಂಡಿವೆ. ಶಾಲೆಗೆ ಬಂದ ಬಿಇಒ ಅವರಿಗೆ ಇದನ್ನು ತೋರಿಸಿದ್ದೇವೆ’ ಆದರೂ ಪರಿಸ್ಥಿತಿ ಸುಧಾರಿಸಿಲ್ಲ, ಹೀಗಾಗಿ ಮನೆಯಿಂದಲೇ ಬುತ್ತಿ ತಂದು ಊಟ ಮಾಡುತ್ತೇವೆ’ ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರು.

ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 430 ಮಕ್ಕಳು ಅಧ್ಯಯನ ಮಾಡುತ್ತಿದ್ದು, ಉತ್ತಮ ಹಾಜರಾತಿ ಇದೆ. ಸುಸಜ್ಜಿತ ಶಾಲಾ ಕೊಠಡಿ ಹಾಗೂ 16ಕ್ಕೂ ಹೆಚ್ಚು ಶಿಕ್ಷಕರು ಇದ್ದಾರೆ. ‘ಕಲಿಕಾ ಗುಣಮಟ್ಟದಲ್ಲೂ ಈ ಶಾಲೆ ತಾಲ್ಲೂಕಿನ ಉಳಿದ ಶಾಲೆಗಳಿಗೆ ಮಾದರಿಯಾಗಿದೆ. ಆದರೆ, ಮಕ್ಕಳಿಗೆ ಸಮರ್ಪಕ ಬಿಸಿಯೂಟ ಹಾಗೂ ಶುದ್ದ ಕುಡಿಯುವ ನೀರು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎನ್ನುತ್ತಾರೆ ಪಾಲಕರು.

‘ಗುಣಮಟ್ಟದ ಬಿಸಿಯೂಟ ನೀಡದ ಕಾರಣ, ಪ್ರತಿನಿತ್ಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮನೆಯಿಂದಲೇ ಊಟವನ್ನು ಕಟ್ಟಿಕೊಂಡು ಶಾಲೆಗೆ ಬರುತ್ತಿದ್ದಾರೆ. ಇದಕ್ಕೆ ಶಾಲೆಯ ಮುಖ್ಯೋಪಾದ್ಯಾಯರ ನಿರ್ಲಕ್ಷ್ಯವೇ ಕಾರಣವಾಗಿದೆ’ ಎಂದು ಎಸ್‌ಡಿಎಂಸಿ ಸದಸ್ಯ ಶಿವಾನಂದ ನವಲಗುಂದ ದೂರಿದರು.

‘ಈ ಕುರಿತು ನಮ್ಮನ್ನೇಕೆ ಪ್ರಶ್ನಿಸುತ್ತೀರಿ, ಬಿಸಿಯೂಟದ ಬಗ್ಗೆ ಅಕ್ಷರ ದಾಸೋಹ ಇಲಾಖೆಯ ಅಧಿಕಾರಿಯನ್ನು ಕೇಳಿ, ಶಾಲಾ ಮುಖ್ಯೋಪಾಧ್ಯಾಯರನ್ನು ಕೇಳಿ, ಇದಕ್ಕೆ ನಾನೇನು ಮಾಡಬೇಕು’ ಎಂದು ಪ್ರತಿಕ್ರಿಯಿಸಿದಕ್ಷೇತ್ರ ಶಿಕ್ಷಣಾಧಿಕಾರಿ ಎನ್.ನಂಜುಂಡಯ್ಯ, ನಂತರ ‘ಪರಿಶೀಲನೆ ನಡೆಸಿ ಸಮಸ್ಯೆ ಬಗೆ ಹರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT