ಶುಕ್ರವಾರ, ಮಾರ್ಚ್ 5, 2021
30 °C
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮನವಿಗೆ ಸ್ಪಂದಿಸಿದ ಪುರಾತತ್ವ ಇಲಾಖೆ

ಬಸ್ತಿಹಳ್ಳಿ: ಜೈನ ಸ್ಮಾರಕಗಳ ಅವಶೇಷಗಳ ಉತ್ಖನನ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಬಸ್ತಿಹಳ್ಳಿಯ ಜಿನ ಮಂದಿರದ ಹಿಂಭಾಗದಲ್ಲಿರುವ ಹೊಯ್ಸಳರ ಕಾಲದ ಜೈನ ಸ್ಮಾರಕಗಳ ಅವಶೇಷಗಳ ಉತ್ಖನನ ಕಾರ್ಯ ಬುಧವಾರ ಆರಂಭವಾಯಿತು.

ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಾದೇಶಿಕ ನಿರ್ದೇಶಕಿ ಮಹೇಶ್ವರಿ ಅವರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಯಿತು.

2 ವರ್ಷದ ಹಿಂದೆ ಜಿನ ಮಂದಿರದ ಹಿಂಭಾಗ ಕಾಂಪೌಂಡ್ ಕೆಲಸಕ್ಕೆ ಜೆಸಿಬಿ ಯಂತ್ರ ಬಳಸಿ ತಳಪಾಯ ತೆಗೆಯುತ್ತಿದ್ದಾಗ ಜಿನಮೂರ್ತಿಗಳು ಕಾಣಿಸಿಕೊಂಡವು. ಕೆಲಸ ಕೈಗೊಂಡಿದ್ದ ವ್ಯಾಪಕೋಸ್ ಕಂಪನಿಯವರ ಅಜಾಗರೂಕತೆಯಿಂದ ಕೆಲ ಮೂರ್ತಿಗಳಿಗೆ ಹಾನಿಯಾಗಿತ್ತು. ಇತಿಹಾಸ ಆಸಕ್ತರಿಂದ ಆಕ್ಷೇಪಣೆ ವ್ಯಕ್ತವಾದ ನಂತರ ಕೆಲಸ ಸ್ಥಗಿತಗೊಳಿಸಲಾಗಿತ್ತು. ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಅಂದು ಸ್ಥಳಕ್ಕೆ ಭೇಟಿ ನೀಡಿ ಉತ್ಖನನ ಕೈಗೊಂಡು ಇತಿಹಾಸದ ಅವಶೇಷಗಳನ್ನು ಉಳಿಸಿಕೊಡಬೇಕು ಎಂದು ಪುರಾತತ್ವ ಅಧಿಕಾರಿಗಳಲ್ಲಿ ಕೋರಿದ್ದರು. ಅವರ ಆಶಯದಂತೆ ಈಗ ಉತ್ಖನನ ಕಾರ್ಯ ಶುರುವಾಗಿದೆ.

‘ಬಸ್ತಿಹಳ್ಳಿಯ ಜಿನಮಂದಿರಗಳ ಸುತ್ತಮುತ್ತ ನೂರಾರು ಜೈನ ಸ್ಮಾರಕಗಳು ಭೂಮಿಯಲ್ಲಿ ಹುದುಗಿವೆ. ದ್ವಾರಸಮುದ್ರ ಕೆರೆ ಅಂಚಿನವರೆಗೆ ಸುಮಾರು 3 ಕಿ.ಮೀ ಪ್ರದೇಶ ಜೈನ ಸ್ಮಾರಗಳಿಂದ ತುಂಬಿ ಹೋಗಿತ್ತು. ಆ ಸ್ಥಳದಲ್ಲಿ ಜೈನ ಮಠವೂ ಇತ್ತು. ಜೈನ ಮುನಿಗಳ ನಿಷಿಧಿ (ಸಮಾಧಿ)ಗಳು ಇದ್ದವು ಎಂದು ಪುರಾತತ್ವ ಶಾಸ್ತ್ರಜ್ಞರು ಹೇಳುತ್ತಾರೆ. ಈಗಲಾದರೂ ಉತ್ಖನನ ಆರಂಭವಾಗಿದ್ದು ಸಂತಸದ ವಿಚಾರ’ ಎಂದರು ಅಡಗೂರು ಜೈನ ಸಮಾಜದವರು.

ಪುರಾತತ್ವ ಅಧೀಕ್ಷಕ ಡಾ.ಶಿವಕಾಂತ ಭಾಜಪೇಯಿ, ಸಹಾಯಕ ಪುರಾತತ್ವ ಅಧೀಕ್ಷಕರಾದ ಡಾ.ಎ.ವಿ.ನಾಗನೂರು, ಶ್ರೀಗುರು ಬಾಗಿ, ಪುರಾತತ್ವ ಶಾಸ್ತ್ರಜ್ಞರಾದ ಕುಮಾರನ್, ಮುರುಳಿ, ಸ್ಮಾರಕ ಸಂರಕ್ಷಣಾಧಿಕಾರಿ ಪಿ.ಕಿಶೋರ್ ಕುಮಾರ್ ರೆಡ್ಡಿ, ಛಾಯಾಗ್ರಾಹಕ ಬಸವರಾಜು, ಅರ್ಚಕ ಉದಯ್ ಕುಮಾರ್ ಇದ್ದರು.

‘ಉತ್ಖನನ ಕೈಗೊಂಡಿರುವ ಸ್ಥಳದ ಸುತ್ತಮುತ್ತ ಮತ್ತಷ್ಟು ಸ್ಮಾರಕಗಳ ಅವಶೇಷಗಳು ಇರುವುದು ಗಮನಕ್ಕೆ ಬಂದಿದೆ. ಕಂದಾಯ ಭೂಮಿಯಲ್ಲಿ ಅವಶೇಷಗಳು ಇರುವುದರಿಂದ ಭೂಸ್ವಾಧೀನ ಮಾಡಿಕೊಳ್ಳದೆ ಉತ್ಖನನ ಕೆಲಸಕ್ಕೆ ಪುರಾತತ್ವ ಇಲಾಖೆ ಕೈಹಾಕಲು ಸಾಧ್ಯವಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಾದೇಶಿಕ ನಿರ್ದೇಶಕಿ ಮಹೇಶ್ವರಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು