ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ | ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 1 ಮಾರ್ಚ್ 2024, 8:31 IST
Last Updated 1 ಮಾರ್ಚ್ 2024, 8:31 IST
ಅಕ್ಷರ ಗಾತ್ರ

ಹಾಸನ: ‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದ್ದು, ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಈ ರೀತಿ ಪ್ರತಿಕ್ರಿಯಿಸಿದರು.

‘ಜಯಪ್ರಕಾಶ ಹೆಗ್ಡೆ ಅವರು ಅಧ್ಯಕ್ಷರಲ್ಲವೇ? ಅವರು ವರದಿಯನ್ನು ಸಲ್ಲಿಸಿದ್ದಾರೆ, ಅದನ್ನು ಸ್ವೀಕರಿಸಿದ್ದೇವೆ. ಅದರಲ್ಲಿ ಏನಿದೆ? ಏನೆಲ್ಲ ವಿಷಯಗಳ ಬಗ್ಗೆ ಚರ್ಚೆ ಆಗಬೇಕು ಎಂಬುದನ್ನು ಸಂಪುಟದಲ್ಲಿ ವಿಸ್ತೃತವಾಗಿ ಚರ್ಚೆ ಮಾಡುತ್ತೇವೆ’ ಎಂದರು.

‘ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ ವರದಿ ಬಂದ ತಕ್ಷಣ ಬಹಿರಂಗ ಪಡಿಸಲಾಗುವುದು. ಬೇರೆ ದೇಶದ ಪರವಾಗಿ ಘೋಷಣೆ ಕೂಗುವುದು ತಪ್ಪು. ಆ ರೀತಿ ಯಾರಾದರೂ ಮಾಡಿದ್ದರೆ, ಕಠಿಣ ಶಿಕ್ಷೆ ವಿಧಿಸಲಾಗುವುದು’ ಎಂದು ಹೇಳಿದರು.

‘ದೇಶಕ್ಕೆ ಬಿಜೆಪಿಯವರು ಸ್ವಾತಂತ್ರ್ಯ ತಂದುಕೊಟ್ಟಿದ್ದಾರಾ? ಬಿಜೆಪಿಯವರಿಂದ ದೇಶಭಕ್ತಿ ಕಲಿಯಬೇಕಿಲ್ಲ. ರಾಜಕೀಯಕ್ಕಾಗಿ ಅವರು ಏನಾದರೂ ಹೇಳುತ್ತಾರೆ’ ಎಂದರು.

‘ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಒಬ್ಬ ಶಾಸಕರು ಅಡ್ಡಮತದಾನ ಮಾಡಿದರು, ಇನ್ನೊಬ್ಬರು ಮತದಾನದಿಂದ ದೂರ ಉಳಿದರು. ಜೆಡಿಎಸ್‌ ಜೊತೆಗಿನ ಅನೈತಿಕ ಮೈತ್ರಿಯನ್ನು ಒಪ್ಪುತ್ತಿಲ್ಲ. ಹೀಗಾಗಿಯೇ ಬಿಜೆಪಿಯವರು ಈ ರೀತಿ ರಾಜಕೀಯ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ನಾವು ಮಾಡಿದ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಉದ್ಘಾಟಿಸುತ್ತಿದ್ದಾರೆ’ ಎಂಬ ಜೆಡಿಎಸ್‌ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವು ಮಾಡಿದ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿಲ್ಲವೇ? ಸರ್ಕಾರ ಎನ್ನುವುದು ನಿರಂತರ. ಪಕ್ಷಗಳು ಬದಲಾಗಬಹುದು’ ಎಂದ ಅವರು, ‘ಬಿಜೆಪಿ ಅವಧಿಯಲ್ಲಿ ಆರಂಭಿಸಿದ ಕಾಮಗಾರಿಗಳು ನಮ್ಮ ಕಾಲದಲ್ಲಿ ಮುಕ್ತಾಯವಾದರೆ, ಉದ್ಘಾಟನೆಗೆ ಬಿಜೆಪಿಯವರನ್ನು ಕರೆಯಬೇಕೇ’ ಎಂದು ಪ್ರಶ್ನಿಸಿದರು.

‘ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಲಾಗುತ್ತಿದೆ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅದನ್ನು ಕಲಿತಿದ್ದು ಪ್ರಧಾನಿ ಮೋದಿ ಅವರಿಂದ. ಸಂಸತ್ತಿನಲ್ಲಿ ಮೋದಿ ಅವರು ಮಾತನಾಡುವುದು ಬರಿ ರಾಜಕೀಯ ವಿಷಯವೇ’ ಎಂದರು.

‘ಕುಪ್ಪೇಗಾಲ ಹಾಗೂ ಸಿದ್ಧರಾಮನಹುಂಡಿಯ ಶಾಲೆಗಳಿಗೆ ತಲಾ ₹10 ಲಕ್ಷ ನೀಡಿರುವುದು ಸಿಎಸ್‌ಆರ್‌ ನಿಧಿಯಿಂದ. ಅದು ಸರ್ಕಾರ ಹಣವಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT