ಸೋಮವಾರ, ಮೇ 16, 2022
22 °C
ಆಹಾರ ಅರಸಿ ದಕ್ಷಿಣ ಭಾರತಕ್ಕೆ ವಲಸೆ ಬರುವ ಹಕ್ಕಿಗಳ ಹಿಂಡು

ಹಾಸನ: ಜಿಲ್ಲೆಯ ಕೆರೆಗಳಲ್ಲಿ ದೇಶ–ವಿದೇಶಿ ಹಕ್ಕಿಗಳ ಕಲರವ

ಜೆ.ಎಸ್‌. ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಋತುಮಾನ ಬದಲಾವಣೆಗೆ ಅನುಗುಣವಾಗಿ ಉತ್ತರ ಭಾರತ ಹಾಗೂ ವಿದೇಶಗಳಿಂದ ಸಾಕಷ್ಟು ಹಕ್ಕಿಗಳು ದಕ್ಷಿಣ ಭಾರತಕ್ಕೆ ವಲಸೆ ಬರುತ್ತವೆ. ಅದರಂತೆಯೇ ಗೊರೂರಿನ ಹೇಮಾವತಿ ಹಿನ್ನೀರು ಹಾಗೂ ನಗರ ಸುತ್ತಮುತ್ತಲಿನ ಕೆರೆಗಳಿಗೆ ಈಗಾಗಲೇ ಸಾಕಷ್ಟು ವಿದೇಶಿ ಹಕ್ಕಿಗಳು ವಲಸೆ ಬಂದಿವೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ಹಿಮಾಲಯ ಪ್ರದೇಶಗಳಲ್ಲಿ ವಿಪರೀತ ಹಿಮ ಬೀಳುವುದರಿಂದ ಹಕ್ಕಿಗಳಿಗೆ ಆಹಾರದ ಅಭಾವ ಉಂಟಾಗುತ್ತದೆ. ಜೊತೆಗೆ ವಿಪರೀತ ಚಳಿಯಿಂದ ತಪ್ಪಿಸಿಕೊಳ್ಳಲು ಹಕ್ಕಿಗಳು ವಲಸೆ ಬರುತ್ತದೆ. ಚಳಿಗಾಲ ಆರಂಭವಾದಾಗಿನಿಂದ ಮಾರ್ಚ್ ತಿಂಗಳವರೆಗೂ ಇಲ್ಲಿಯೇ ಇದ್ದು ಬಳಿಕ ಹಿಂತಿರುಗುತ್ತವೆ. ಪಕ್ಷಿ ಪ್ರಿಯರಿಗೆ ವೀಕ್ಷಕರಿಗೆ ಇದು ಸಕಾಲವಾಗಿದೆ.

ಮಂಗೋಲಿಯಾ, ಸೈಬೀರಿಯಾ, ಅಟ್ಲಾಂಟಿಕ್, ಹಿಮಾಲಯ ಪ್ರದೇಶ, ಟಿಬೆಟ್‌, ಜಮ್ಮು ಮತ್ತು ಕಾಶ್ಮೀರ ಭಾಗದಿಂದ ಜಿಲ್ಲೆಯ ಸತ್ಯಮಂಗಲ ಕೆರೆ, ಹುಣಸಿನಕೆರೆ, ಗವೇನಹಳ್ಳಿ ಕೆರೆ, ಗೊರೂರು ಹಿನ್ನೀರು ಶೆಟ್ಟಿಹಳ್ಳಿ ಚರ್ಚ್ ಹತ್ತಿರ, ಕುಪ್ಪಳ್ಳಿ ಹಿಂಭಾಗದ ಕೆರೆ, ಶ್ರವಣಬೆಳಗೊಳದ ಹತ್ತಿರ ಜನಿವಾರದ ಕೆರೆ, ವಳಗೆರ ಹಳ್ಳಿ ಸೇತುವೆ ಹಿನ್ನೀರು, ಕಾರಗೋಡು ಕೆರೆ (ರಾಯರ ಕೊಪ್ಪಲು) ಹೀಗೆ ವಿವಿಧ ಪ್ರದೇಶಗಳಿಗೆ ಹಕ್ಕಿಗಳು ಪ್ರತಿವರ್ಷ ವಲಸೆ ಬರುತ್ತವೆ.

ವಿದೇಶದಿಂದ ಇಲ್ಲಿಗೆ ವಲಸೆ ಬರುವ ಪ್ರಮುಖ ಹಕ್ಕಿಗಳೆಂದರೆ. ಉಲ್‌ ನೆಕ್ಡ್‌ ಸ್ಟೋರ್ಕ್, ಪೇಂಟೆಡ್ ಸ್ಟೋರ್ಕ್, ಗ್ರೇ ಹೆರಾನ್, ಬ್ಲಾಕ್ ಹೆಡ್ ಐಬಿಸ್, ಲಿಟಲ್ ಎಗ್ರೆಟ್, ಪರ್ಪಲ್‌ ಮೂರ್‌ ಹೆನ್‌, ಗ್ರೇ ಡಕ್‌, ಗ್ರೇಟ್‌ ಇಂಡಿಯನ್‌ ಕಾರ್ಮಾರಾಂಟ್‌, ಪೆಲಿಕಾನ್‌, ರೆಡ್‌ ಬ್ಯಾಟಲ್‌ ಲಾಪ್‌ವಿಂಗ್‌, ಬ್ಲಾಕ್‌ವಿಂಗ್‌ ಸ್ಟಿಲ್ಟ್‌, ಸ್ಟಾಟ್‌ ಬಿಲ್ಡ್‌ ಗ್ರೇ ಡಕ್‌, ಬಾರ್‌ ಹೆಡ್‌ ಗೂಸ್‌ ಹೀಗೆ ಅನೇಕ ಹಕ್ಕಿಗಳು ಬಂದಿವೆ.

ಹೇಮಾವತಿ ಹಿನ್ನೀರಿನಲ್ಲಿ ಪಟ್ಟೆತಲೆ ಬಾತುಕೋಳಿಗಳು ಬೀಡು ಬಿಟ್ಟಿವೆ. ಈಗ ನೀರು ಕಡಿಮೆಯಾಗುವುದರಿಂದ ವಿಶೇಷ ಗರಿಕೆಯ ಹುಲ್ಲು ಬೆಳೆದಿದ್ದು ಹುಲ್ಲಿನ ಬೀಜಗಳನ್ನು ಆರಿಸಿ ತಿನ್ನುವುದು ಬಾತು ಕೋಳಿಗಳ ಕಲೆಯಾಗಿದೆ. ಜತೆಗೆ ಭತ್ತದ ಗದ್ದೆಗಳಲ್ಲೂ ಆಹಾರ ಅರಸಿ ತಿರುಗುತ್ತವೆ.

‘ಮನುಷ್ಯರಿಂದ ದೂರವಿರಲು ಬಯಸುವ ಬಾತು ಕೋಳಿಗಳು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಮಾತ್ರ ಭೂಮಿಯಲ್ಲಿ ಅಲೆದಾಡಿ ಆಹಾರ ಸಂಪಾದಿಸುತ್ತವೆ. ರಾತ್ರಿಯಾಗುತ್ತಿದ್ದಂತೆ ನೀರಿನಲ್ಲಿ ಈಜುತ್ತಾ ಯಾರ ದಾಳಿಗೂ ಒಳಗಾಗದಂತೆ ಬದುಕುತ್ತವೆ ಎಂದು ತಿಳಿಸಿದ ಹಾಸನದ ಬಿ.ಎಸ್‌. ದೇಸಾಯಿ ಅವರು, ಪಕ್ಷಿಗಳನ್ನು ಬೇಟೆ ಆಡದಂತೆ ಎಚ್ಚರಿಕೆ ವಹಿಸಬೇಕು‘ ಎಂದರು.

‘ವಿದೇಶದಿಂದ ಇಲ್ಲಿಗೆ ಹಕ್ಕಿಗಳು ವಲಸೆ ಬರುವುದರಿಂದ ಹಕ್ಕಿಜ್ವರ ಭೀತಿ ಇರುವ ಕಾರಣ ಅರಣ್ಯ ಇಲಾಖೆಯ ಸಿಬ್ಬಂದಿ ಅನೇಕ ಬಾರಿ ಮಾಹಿತಿ ಪಡೆಯುತ್ತಾರೆ. ಜಿಲ್ಲೆಯಲ್ಲಿ ಎಲ್ಲಿಯೂ ಹಕ್ಕಿಗಳು ಸಾಮೂಹಿಕವಾಗಿ ಸತ್ತಿರುವ ಬಗ್ಗೆ ವರದಿಯಾಗಿಲ್ಲ’ ಎಂದು ದೇಸಾಯಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು