ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ಮೆಣಸಿನಕಾಯಿ ಕೃಷಿಗೆ ರೈತರ ಒಲವು

3 ತಿಂಗಳಲ್ಲಿ ಕೈಗೆ ಬರುವ ಬೆಳೆ: ಉತ್ತಮ ಆದಾಯದ ನಿರೀಕ್ಷೆ
Last Updated 30 ಜನವರಿ 2023, 4:36 IST
ಅಕ್ಷರ ಗಾತ್ರ

ಆಲೂರು: ಬೇಸಿಗೆ ಕಾಲದಲ್ಲಿ ರೈತರಿಗೆ ವರದಾನವಾಗಿರುವ ಐದು ತಿಂಗಳ ವಾಣಿಜ್ಯ ಬೆಳೆ ಮೆಣಸಿನಕಾಯಿ ಬೆಳೆಯಲು ರೈತರು ಎರಡು ತಿಂಗಳಿನಿಂದ ಕಾರ್ಯೋನ್ಮುಖರಾಗಿದ್ದಾರೆ.

ಶುಂಠಿ, ಜೋಳ ಕಟಾವು ಮಾಡಿದ ನಂತರ ಡಿಸೆಂಬರ್ ತಿಂಗಳಿನಿಂದ ಮೆಣಸಿನಕಾಯಿ ಗಿಡ ನೆಡಲು ಪ್ರಾರಂಭಿಸಲಾಗುತ್ತದೆ. ಮೂರು ತಿಂಗಳಲ್ಲಿ ಬೆಳೆ ಪ್ರಾರಂಭವಾಗುತ್ತದೆ. ಸುಮಾರು ನಾಲ್ಕರಿಂದ ಐದು ಕೊಯ್ಲು ಮಾಡಬಹುದು. ನಂತರ ಕೂಳೆಕಾಯಿ ಸಿಗುತ್ತವೆ.

ಕೊಳವೆಬಾವಿ ಹೊಂದಿರುವವರು ಮತ್ತು ಗದ್ದೆಗಳಲ್ಲಿಯೂ ಸಹ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಒಂದು ಎಕರೆ ಭೂಮಿಯಲ್ಲಿ 5-6 ಸಾವಿರ ಗಿಡಗಳನ್ನು ಬೆಳೆಸಲಾಗುತ್ತದೆ. ಪ್ರತಿ ಕೆಲಸಕ್ಕೆ ಕಾರ್ಮಿಕರನ್ನು ಅವಲಂಬಿಸಿದರೆ, ಸುಮಾರು ₹ 40 ಸಾವಿರ ಖರ್ಚಾಗುತ್ತದೆ. ಮನೆಯವರು ತೊಡಗಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಶೇ 90 ರಷ್ಟು ರೈತರು ಸ್ವತಃ ಕೆಲಸದಲ್ಲಿ ತೊಡಗುತ್ತಾರೆ.

ತಾಲ್ಲೂಕಿನಾದ್ಯಂತ ಬಹುತೇಕ ಹುಲ್ಕ, ವಾಸು, ಮೈಲಾರಿ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಜಡಿ ಮಳೆಯಾದರೆ ಮಾತ್ರ ಬೆಳೆ ಉದುರಿ ನಷ್ಟ ಉಂಟಾಗುತ್ತದೆ. ಒಂದು ಕೆ.ಜಿ.ಗೆ ಕನಿಷ್ಠ ₹ 30 ರಿಂದ ₹ 40 ಬೆಲೆ ಸಿಕ್ಕಿದರೆ ಉತ್ತಮ ಆದಾಯ ಪಡೆಯಬಹುದು. ಅದೃಷ್ಟ ಎಂಬಂತೆ ಕೆಲ ಸಂದರ್ಭದಲ್ಲಿ ₹ 70ರಿಂದ ₹ 80ರವರೆಗೆ ಬೆಲೆ ಸಿಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಉತ್ತಮ ಬೆಳೆ ಬಂದರೆ, ₹1..5 ಲಕ್ಷದಿಂದ ₹ 2 ಲಕ್ಷದವರೆಗೆ ಆದಾಯ ಗಳಿಸಬಹುದು ಎನ್ನುತ್ತಾರೆ ರೈತರು.

ಬಿಸಿಲಿನಿಂದ ಗಿಡಗಳು ಒಣಗದಂತೆ ತುಂತುರು ನೀರಾವರಿ ಮೂಲಕ ಆಗಾಗ ನೀರು ಸಿಂಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಗೊಬ್ಬರ, ಕ್ರಿಮಿನಾಶಕ ಸಿಂಪಡಿಸುತ್ತಿದ್ದರೆ ಉತ್ತಮ ಇಳುವರಿ ಪಡೆಯಬಹುದು.

ಕಸಬಾ, ಕುಂದೂರು ಹೋಬಳಿ ಹೊರತುಪಡಿಸಿದರೆ ಕೆ. ಹೊಸಕೋಟೆ, ಪಾಳ್ಯ ಹೋಬಳಿಯಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆ ಪಡೆಯಲು ಕಷ್ಟವಾಗುತ್ತದೆ. ಆನೆಗಳು ತಿರುಗಾಡುವಾಗ ಗಿಡಗಳನ್ನು ತುಳಿದು ನಾಶ ಮಾಡುತ್ತವೆ. ಒಮ್ಮೆ ಮುರಿದುಬಿದ್ದರೆ ಗಿಡ ನಾಶವಾಗುತ್ತದೆ.

’ಇತ್ತೀಚೆಗೆ ಹೈಬ್ರೀಡ್ ತಳಿಗಳು ಹೆಚ್ಚು ಆದಾಯ ನೀಡುತ್ತವೆ. ಆದರೆ ಅಷ್ಟೇ ರೋಗಕ್ಕೂ ತುತ್ತಾಗುತ್ತವೆ. ಮೆಣಸಿನಕಾಯಿ ಬೆಳೆಯಲು ಮನೆಯವರೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ಏಪ್ರಿಲ್ ವೇಳೆಗೆ ಬೆಳೆ ಮುಗಿಯುತ್ತದೆ. ತಾಲ್ಲೂಕಿನ ಹಸಿ ಮೆಣಸಿನಕಾಯಿಗೆ ಬೇಡಿಕೆ ಇದೆ. ಒಣ ಮೆಣಸಿನಕಾಯಿಗೆ ಅಷ್ಟಾಗಿ ಬೇಡಿಕೆ ಇಲ್ಲ ಎನ್ನುತ್ತಾರೆ ತಾಲ್ಲೂಕಿನ ಕೊಡಗೀಹಳ್ಳಿಯ ರೈತ ಪೃಥ್ವಿರಾಮ್‌.

3 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ
ಆಲೂರು ತಾಲ್ಲೂಕಿನಲ್ಲಿ ಮೆಣಸಿನಕಾಯಿ ಬೆಳೆಯಲು ಉತ್ತಮ ವಾತಾವರಣವಿದೆ. ತಾಲ್ಲೂಕಿನಾದ್ಯಂತ ಸುಮಾರು 3ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಿನ ಅನುಕೂಲ ಇರುವವರು ಬೆಳೆಯುತ್ತಾರೆ. ರೋಗ ಬರುವ ಮೊದಲೇ ರೈತ ಸಂಪರ್ಕ ಕೇಂದ್ರಗಳನ್ನು ಆಗಾಗ ಸಂಪರ್ಕಿಸಿ ಔಷಧಿ ಸಿಂಪಡಿಸಿದರೆ ಉತ್ತಮ ಬೆಳೆ ಪಡೆಯಬಹುದು ಎನ್ನುವುದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೇಶವ್‌ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT