ಶುಕ್ರವಾರ, ಸೆಪ್ಟೆಂಬರ್ 18, 2020
27 °C
ಐದು ದಶಕಗಳ ಹಿಂದೆ ಸುಸಜ್ಜಿತವಾಗಿ ನಿರ್ಮಾಣವಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ

ಹಾಸನ: ಅತ್ತಿಹಳ್ಳಿ ಆಸ್ಪತ್ರೆಗೆ ಬೇಕಿದೆ ತುರ್ತುಚಿಕಿತ್ಸೆ

ಜಾನೇಕೆರೆ ಆರ್‌.ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಪಶ್ಚಿಮಘಟ್ಟ ಬೆಟ್ಟಗಳ ಸಾಲಿನ ಅಂಚಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಅತ್ತಿಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್‌ನ ಒಬ್ಬ ನೌಕರ ಹೊರತುಪಡಿಸಿ, ವೈದ್ಯರ ಹುದ್ದೆಯೂ ಸೇರಿದಂತೆ ಎಲ್ಲ ಹುದ್ದೆಗಳು ಖಾಲಿ ಇವೆ.

ಇದರಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಭಾರೀ ಸಮಸ್ಯೆ ಉಂಟಾಗಿದೆ. ಜ್ವರ, ಕೆಮ್ಮು, ನೆಗಡಿ, ಸಕ್ಕರೆ ಕಾಯಿಲೆ, ಬಿಪಿ ಪರೀಕ್ಷೆಗೂ,   ಹೆತ್ತೂರು ಅಥವಾ ವಣಗೂರಿಗೆ ಹೋಗಬೇಕು. ಅಲ್ಲಿಗೂ ವಾರಕ್ಕೆ ಮೂರು ದಿನ ವೈದ್ಯರು ಬರುವುದರಿಂದ ದೂರದ ತಾಲ್ಲೂಕು ಕೇಂದ್ರಕ್ಕೇ ಈ ಭಾಗದ ಜನ ಹೋಗಬೇಕಾಗಿದೆ.

‘ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿ ಇರುವ ಅತ್ತಿಹಳ್ಳಿ ಗ್ರಾಮ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮ. ಸುಮಾರು 15 ಕಂದಾಯ ಗ್ರಾಮ ಗಳ ಕೇಂದ್ರವೂ ಸಹ ಇದಾಗಿದೆ. ಅತಿವೃಷ್ಠಿ ಹಾಗೂ ಅನಾವೃಷ್ಟಿಯ ಹೊಡೆತಕ್ಕೆ‌ ಸುತ್ತಮುತ್ತಲಿನ ಗ್ರಾಮಗಳು ತತ್ತರಿಸಿಹೋಗಿವೆ. ಪ್ರಯಾ ಣದ ದರ ಹಾಗೂ ಆಸ್ಪತ್ರೆ ವೆಚ್ಚ ಭರಿಸುವಷ್ಟೂ ಆರ್ಥಿಕ ಶಕ್ತಿ ಇಲ್ಲದೆ ಪರಿತಪಿಸುವಂತಾಗಿದೆ’ ಎಂದು ಅಸಮಾ ಧಾನ ವ್ಯಕ್ತಪಡಿಸುತ್ತಾರೆ ಈ ಭಾಗದ ಜನತೆ.

'ಕಣ್ಣ ಮುಂದೆ ದೊಡ್ಡ ಆಸ್ಪತ್ರೆ ಇದೆ ಆದರೆ, ಯಾವ ಉಪಯೋಗಕ್ಕೂ ಇಲ್ಲ. ನನಗೆ ಬಿಪಿ, ಶುಗರ್ ಕಾಯಿಲೆ ಇದೆ. ಬಿಪಿ ಪರೀಕ್ಷೆ ಮಾಡಿಸಿಕೊಳ್ಳಲು ವಣಗೂರು, ಹೆತ್ತೂರು ಅಲ್ಲಿ ವೈದ್ಯರಿಲ್ಲದಿದ್ದರೆ ಸಕಲೇಶಪುರಕ್ಕೆ ಹೋಗಬೇಕು. ನನಗೀಗ 85 ವರ್ಷ ಊರಿನಿಂದ ಹೊರಗಡೆ ಹೋಗುವಷ್ಟು ಶಕ್ತಿಯೂ ಇಲ್ಲ, ದುಡ್ಡೂ ಇಲ್ಲ ಪರಿಸ್ಥಿತಿ ಹೀನಾಯವಾಗಿದೆ' ಎಂದು ಗ್ರಾಮದ ವೆಂಕಟೇಶ್‍ಗೌಡ ಆಕ್ರೋಶ ವ್ಯಕ್ತಪಡಿಸುತ್ತಾರೆ.

'ಸಕಲೇಶಪುರ ಪಟ್ಟಣದ ಕ್ರಾಫರ್ಡ್‌ ಸರ್ಕಾರಿ ಆಸ್ಪತ್ರೆ ಹೊರತುಪಡಿಸಿದರೆ ತಾಲ್ಲೂಕಿಗೆ ನಮ್ಮೂರಿನದ್ದೇ ದೊಡ್ಡ ಆಸ್ಪತ್ರೆಯಾಗಿದೆ. ಸುಮಾರು 3 ಎಕರೆ ಪ್ರದೇಶದಲ್ಲಿ ಆಸ್ಪತ್ರೆ, ಒಳರೋಗಿಗಳಿಗೆ ಪ್ರತ್ಯೇಕ ಕೊಠಡಿ, ವೈದ್ಯಾಧಿಕಾರಿ ಹಾಗೂ ಶುಶ್ರೂಷಕರಿಗೆ ವ್ಯವಸ್ಥಿತವಾಗಿ ವಸತಿ ಕಟ್ಟಡಗಳನ್ನು ಸುಮಾರು ಐದು ದಶಕಗಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ತಾಲ್ಲೂಕಿನಲ್ಲಿಯೇ ಬಹಳ ಹಳೆಯದಾದ ಇದಕ್ಕೆ ತನ್ನದೇ ಆದ ಇತಿಹಾಸ ಇದೆ. ಆದರೆ ಇಂದು ಅನಾಥವಾಗಿರುವುದನ್ನು ನೋಡಿದರೆ ನೋವಾಗುತ್ತದೆ’ ಎನ್ನುತ್ತಾರೆ ಗ್ರಾಮದ ಹಿರಿಯರಾದ ಅಂಗಡಿ ಸುಬ್ಬಣ್ಣ. 

ಸುಸಜ್ಜಿತವಾಗಿದ್ದ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಆಸ್ಪತ್ರೆ, ಒಳರೋಗಿಗಳ ಕೊಠಡಿ, ವಸತಿ ಗೃಹಗಳ ಚಾವಣಿ ಕುಸಿಯುತ್ತಿದೆ. ಗೋಡೆಗಳು ಶಿಥಿಲಗೊಂಡಿದ್ದು ಕುಸಿಯುವ ಹಂತ ತಲುಪಿವೆ. ತಕ್ಷಣ ದುರಸ್ಥಿ ಕಾಮಗಾರಿ ನಡೆಸದೆ ಹೋದರೆ, ಪ್ರಸಕ್ತ ಮುಂಗಾರು ಮುಗಿಯುವುದರೊಳಗೆ ಕಟ್ಟಡಗಳು ನೆಲಸಮವಾಗುತ್ತವೆ. ಖಾಲಿ ಇರುವ ವೈದ್ಯ, ಶುಶ್ರೂಷಕ, ಲ್ಯಾಬ್‍ ಟೆಕ್ನೀಷಿಯನ್‍, ಪಾರ್ಮಾಸಿಸ್ಟ್‍ ಹುದ್ದೆಗಳನ್ನು ತುಂಬುವಂತೆ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾ.ಪಂ.ಮಾಜಿ ಸದಸ್ಯ ರಾಮಣ್ಣ ಆರೋಪಿಸಿದ್ದಾರೆ.

‘ತಾಲ್ಲೂಕಿನಲ್ಲಿ ಹತ್ತಕ್ಕೂ ಹೆಚ್ಚು ವೈದ್ಯರ ಹುದ್ದೆಗಳು ಖಾಲಿ ಇವೆ. ಚಂಗಡಿಹಳ್ಳಿ ಆರೋಗ್ಯ ಘಟಕದ ವೈದ್ಯರನ್ನು ವಾರದಲ್ಲಿ ಎರಡು ದಿನ ಅತ್ತಿಹಳ್ಳಿಗೆ ನಿಯೋಜನೆ ಮಾಡಲಾಗಿದೆ. ಹೆತ್ತೂರು ಮತ್ತು ವಣಗೂರು ಕೂಡುರಸ್ತೆ ಆರೋಗ್ಯ ಘಟಕದಿಂದ ವಾರದಲ್ಲಿ ಎರಡು ದಿನ ಶುಶ್ರೂಷಕಿಯರನ್ನು ನಿಯೋಜನೆ ಮಾಡಲಾಗಿದೆ. ನಿರ್ವಹಣೆ ಇಲ್ಲದೆ ಕಟ್ಟಡಗಳು ಶಿಥಿಲಗೊಂಡಿದ್ದು, ದುರಸ್ಥಿಗಾಗಿ ಜಿ.ಪಂ.ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಶ್‌ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.