ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು | ಮುಚ್ಚಿದ ಮಾರುಕಟ್ಟೆ: ತೆರವಾಗದ ಕೊಳಕು

ಕೊಣನೂರು: ಉಪಯೋಗಕ್ಕೆ ಬಾರದ ಲಕ್ಷಾಂತರ ರೂಪಾಯಿ ವೆಚ್ಚದ ಮಾರುಕಟ್ಟೆ
Published 21 ಜುಲೈ 2023, 7:07 IST
Last Updated 21 ಜುಲೈ 2023, 7:07 IST
ಅಕ್ಷರ ಗಾತ್ರ

ಕೊಣನೂರು: ವ್ಯಾಪಾರಕ್ಕೆ ನೆರಳು ನೀಡಿ ವ್ಯವಸ್ಥೆ ಕಲ್ಪಿಸಬೇಕಾದ ಮಾರುಕಟ್ಟೆಯು ತ್ಯಾಜ್ಯದ ತಾಣವಾಗಿ ದುರ್ವಾಸನೆ ಬೀರುತ್ತಿದೆ. ಬಳಕೆಗೆ ಬಾರದಂತಾಗಿದೆ.

ಇಲ್ಲಿನ ಹಾಸನ- ಮಡಿಕೇರಿ ಮುಖ್ಯರಸ್ತೆಯ ಬದಿಯಲ್ಲಿ 2020 ರಲ್ಲಿ ನಬಾರ್ಡ್‌ನ ಯೋಜನೆಯಡಿ 2014-15 ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ₹ 20 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದೆ. ತರಕಾರಿ ವ್ಯಾಪಾರಿಗಳು ಮತ್ತು ಜನರಿಗೆ ಸುವ್ಯವಸ್ಥೆ ಒದಗಿಸುವ ಉದ್ದೇಶದಿಂದ ತಲೆಎತ್ತಿದ ಮಾರುಕಟ್ಟೆಯು, ಇದೀಗ ತ್ಯಾಜ್ಯದಿಂದ ತುಂಬಿ ಜನರು ಮತ್ತು ವ್ಯಾಪಾರಿಗಳಲ್ಲಿ ಬೇಸರ ಮೂಡಿಸುತ್ತಿದೆ.

40 ವ್ಯಾಪಾರಿಗಳು ಏಕಕಾಲದಲ್ಲಿ ವ್ಯಾಪಾರ ವಹಿವಾಟು ನಡೆಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. ನಿರ್ವಹಣೆ ಕೊರೆತೆ ಇರುವುದರಿಂದಾಗಿ, ಯಾಕಾದರೂ ಈ ಮಾರುಕಟ್ಟೆ ಕಟ್ಟಿದರೋ ಎಂದು ಜನರು ಹಿಡಿಶಾಪ ಹಾಕುವಂತಾಗಿದೆ.

ಈಗಲೂ ಮಾರುಕಟ್ಟೆಯ ರಸ್ತೆ ಕಡೆಗಿರುವ ಭಾಗದಲ್ಲಿ ಕುಳಿತು ತರಕಾರಿ ಮಾರಾಟ ಮಾಡುವವರು, ಹಿಂದಿರುವ ಕೊಳಕನ್ನು ನೋಡಲಾಗದೇ ಟಾರ್ಪಾಲ್ ಕಟ್ಟಿದ್ದರೂ ದುರ್ವಾಸನೆ ಸಹಿಸಲಾಗುತ್ತಿಲ್ಲ. ಮುಖ್ಯ ರಸ್ತೆಗೆ ಹೊಂದಿಕೊಂಡು ಖಾಲಿಯಿರುವ ಇಲ್ಲಿ ಅನೇಕರು ಮೂತ್ರ ವಿಸರ್ಜನೆ ಮಾಡುತ್ತಿರುವುದು ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ಕೊತ್ತಲು ಗಣಪತಿ ದೇವಾಲಯಕ್ಕೆ ಹೊಂದಿಕೊಂಡಿದೆ. ದೇವಸ್ಥಾನಕ್ಕೆ ಬರುವ ಭಕ್ತರೂ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಮಾಗಡಿ- ಸೋಮವಾರಪೇಟೆ ರಸ್ತೆಯ ವಿಸ್ತರಣೆ ಕಾಮಗಾರಿ ಪಟ್ಟಣ ಪರಿಮಿತಿಯಲ್ಲಿ ಪ್ರಾರಂಭವಾದರೆ, ರಸ್ತೆಯ ಬದಿಯಲ್ಲಿರುವ ತರಕಾರಿ ಅಂಗಡಿಗಳು ಮತ್ತೇ ಇದೆ ಮುಚ್ಚಿದ ಮಾರುಕಟ್ಟೆಗೆ ಸ್ಥಳಾಂತರ ಆಗಬೇಕಿದೆ. ಸಂಬಂಧಿಸಿದ ಇಲಾಖೆ ಮತ್ತು ಗ್ರಾಮ ಪಂಚಾಯಿತಿಯವರು ಇಲ್ಲಿನ ತ್ಯಾಜ್ಯ ತೆರವುಗೊಳಿಸಿ, ಶೌಚಾಲಯ, ಕುಡಿಯುವ ನೀರು ಮತ್ತು ಸ್ವಚ್ಛತೆ ಸೌಲಭ್ಯಗಳನ್ನು ಒದಗಿಸಿ ಕೊಡಬೇಕು ಎಂಬುದು ವ್ಯಾಪಾರಿಗಳು ಮತ್ತು ಸ್ಥಳೀಯರ ಒತ್ತಾಯ.

₹20 ಲಕ್ಷ ವೆಚ್ಚದಲ್ಲಿ ನಿರ್ಮಾಣ ವ್ಯಾಪಾರಿಗಳು ಬಳಸುತ್ತಿಲ್ಲ ಅಲೆಮಾರಿಗಳ ವಾಸಸ್ಥಾನವಾದ ಮಾರುಕಟ್ಟೆ

ಮಾರುಕಟ್ಟೆಯಲ್ಲಿರುವ ಕೊಳಕಿನಿಂದ ಆ ಕಡೆ ನೋಡಲು ಆಗದೇ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮಾರುಕಟ್ಟೆಯಲ್ಲಿ ಸೌಕರ್ಯಗಳನ್ನು ನೀಡಿ ಜನರಿಗೆ ಅನುಕೂಲ ಮಾಡಲಿ
ರವಿ ಎಲೆ ವ್ಯಾಪಾರಿ
ಹೆದ್ದಾರಿ ವಿಸ್ತರಣೆಗೆ ರಸ್ತೆ ಬದಿಯಲ್ಲಿರುವ ತರಕಾರಿ ವ್ಯಾಪಾರಿಗಳು ಇದೇ ಮಾರುಕಟ್ಟೆಗೆ ವರ್ಗಾಯಿಸಬೇಕಿದೆ. ಶೀಘ್ರದಲ್ಲಿ ಅಲ್ಲಿನ ಕೊಳಕನ್ನು ತೆರವುಗೊಳಿಸಿ ವ್ಯಾಪಾರಿಗಳು ಮತ್ತು ಜನರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ
ಗಣೇಶ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ

ವ್ಯಾಪಾರ ಆರಂಭಿಸದ ವರ್ತಕರು ಉದ್ಘಾಟನೆಯಾದ ನಂತರ ಇನ್ನೇನು ವ್ಯಾಪಾರಿಗಳು ತಾವು ಹರಾಜು ಮಾಡಿಕೊಂಡಿದ್ದ ಮಾರುಕಟ್ಟೆಯ ಸಂಕೀರ್ಣದಲ್ಲಿ ವ್ಯಾಪಾರ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿಯೇ ಮತ್ತೆ ರಸ್ತೆಬದಿಯಲ್ಲಿ ತರಕಾರಿ ಅಂಗಡಿಗಳನ್ನಿಟ್ಟು ವಹಿವಾಟು ನಡೆಸಲು ಆರಂಭಿಸಿದರು. ಅಂದಿನಿಂದಲೂ ಖಾಲಿ ಉಳಿದ ಮುಚ್ಚಿದ ಮಾರುಕಟ್ಟೆ ಕಟ್ಟಡವು ಅಲೆಮಾರಿಗಳ ವಾಸಸ್ಥಾನವಾಗಿದೆ. ಅಲೆಮಾರಿಗಳು ಬಿಟ್ಟುಹೋದ ವಸ್ತುಗಳು ಹಳೆ ಬಟ್ಟೆಗಳು ಮತ್ತು ಸುತ್ತಲಿನ ತರಕಾರಿ ಅಂಗಡಿಗಳ ತ್ಯಾಜ್ಯದಿಂದ ತುಂಬಿದೆ. ಇದರ ಪಕ್ಕದಲ್ಲೇ ಇರುವ ಮತ್ತೊಂದು ಮಾರುಕಟ್ಟೆ ಮತ್ತು ಸುತ್ತಲಿನಿಂದ ಬರುವ ಮಳೆಯ ನೀರು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ತ್ಯಾಜ್ಯದ ಜೊತೆಗೆ ಮಳೆಯ ನೀರು ಸೇರಿ ಕೊಳೆತು ದುರ್ವಾಸನೆ ಬೀರುತ್ತಿದೆ ಎಂದು ಜನರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT